ಚಾಮರಾಜನಗರ: ಚಾಮುಲ್‌ನಲ್ಲಿ ಐಸ್ ಕ್ರೀಂ ಘಟಕ ನಿರ್ಮಾಣದಿಂದ ಹಾಲು ಉತ್ಪಾದಕರಿಗೆ ಅನ್ಯಾಯವಾಗುವುದಿಲ್ಲ. ಒಕ್ಕೂಟ ಹಾಲು ಉತ್ಪಾದಕರ ಹಿತ ಕಾಯಲಿದೆ ಎಂದು ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಹೇಳಿದರು.
ಕೇರಳ, ತಮಿಳುನಾಡು, ಮೈಸೂರಿನಲ್ಲಿ ಐಸ್ ಕ್ರೀಂಗೆ ಮಾರುಕಟ್ಟೆ ಇದ್ದು 7750 ಲೀ. ಬೇಡಿಕೆ ಇದೆ. ಇದರಿಂದ ಬಂದ ಲಾಭವನ್ನು ರೈತರಿಗೆ ಹಂಚಲಾಗುವುದು. ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳು ಒಪ್ಪಿಗೆ ನೀಡಿದ್ದು, ಘಟಕ ನಿರ್ಮಾಣದಿಂದ ಜಿಲ್ಲೆಯ ರೈತರ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು.ರಾಜ್ಯದಲ್ಲಿರುವ 16 ಹಾಲು ಒಕ್ಕೂಟಗಳಲ್ಲಿ ಚಾಮುಲ್ 8ನೇ ಸ್ಥಾನದಲ್ಲಿದೆ. ಚಾಮುಲ್ ಮೂಲಕ ರೈತರಿಗೆ ವಿಮೆ, ಹಾಸ್ಟೆಲ್ ವ್ಯವಸ್ಥೆ ಸೇರಿದಂತೆ 10 ಸೌಲಭ್ಯಗಳನ್ನು ರೈತರಿಗೆ ಕೊಡಲಾಗುತ್ತಿದೆ. ಜಿಲ್ಲೆಯಲ್ಲಿ ದಿನನಿತ್ಯ 3 ಲಕ್ಷ ಲೀ. ಹಾಲು ಶೇಖರಣೆಯಾಗುತ್ತಿದ್ದು 10 ಸಾವಿರ ಲೀ. ಹಾಲನ್ನು ಐಸ್ ಕ್ರೀಂಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ಚಾಮುಲ್ ನಿರ್ದೇಶಕರಾದ ಎಚ್.ಎಸ್.ನಂಜುಂಡಪ್ರಸಾದ್, ಸುನೀಲ್, ಶೀಲಾ ಪುಟ್ಟರಂಗಶೆಟ್ಟಿ, ಬಸವರಾಜು, ಸದಾಶಿವಮೂರ್ತಿ, ಮಹದೇವಸ್ವಾಮಿ, ಸಾಹುಲ್ ಅಹಮ್ಮದ್, ನಾಮ ನಿರ್ದೇಶಿತ ಸದಸ್ಯ ರೇವಣ್ಣ ಇದ್ದರು.