ಪ್ರತಿ ಕ್ಷೇತ್ರದಲ್ಲೂ ಇಂದಿರಾ ಭವನ ನಿರ್ಮಾಣ: ಡಿ.ಕೆ.ಶಿವಕುಮಾರ್

KannadaprabhaNewsNetwork |  
Published : Nov 01, 2026, 02:45 AM IST
31ಕೆಎಂಎನ್‌ಡಿ-8ಮಂಡ್ಯದ ಕೆರೆಯಂಗಳದಲ್ಲಿ ನೂತನವಾಗಿ ನಿರ್ಮಿಸಲಿರುವ ಇಂದಿರಾ ಭವನಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಶಂಕುಸ್ಥಾಪನೆ ನೆರವೇರಿಸಿದರು. ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌, ಸಚಿವರಾದ ಎನ್‌.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ ಇತರರಿದ್ದರು. | Kannada Prabha

ಸಾರಾಂಶ

ಮಂಡ್ಯದಲ್ಲಿ ಕಾಂಗ್ರೆಸ್‌ಗೆ ಪ್ರತ್ಯೇಕ ಕಚೇರಿ ನಿರ್ಮಿಸಬೇಕೆಂಬ ಬೇಡಿಕೆ ಬಹಳ ವರ್ಷಗಳಿಂದ ಇತ್ತು. ಹಿಂದೆ ಗಾಂಧಿ ಭವನದ ಜಾಗದ ವಿಚಾರವಾಗಿ ಪ್ರಯತ್ನ ನಡೆದಿದ್ದರೂ ಅದು ಪೂರ್ಣಗೊಂಡಿರಲಿಲ್ಲ. ಇದೀಗ ಸರ್ಕಾರದಿಂದ ಜಾಗ ಮಂಜೂರು ಮಾಡಿಸಿ, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಉತ್ತಮ ವಿನ್ಯಾಸ ರೂಪಿಸಿ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಇಂದಿರಾ ಭವನ ಎನ್ನುವುದು ಕೇವಲ ಕಾಂಗ್ರೆಸ್ ಪಕ್ಷದ ಕಚೇರಿಯಾಗದೆ, ಜಿಲ್ಲೆಯ ಪ್ರತಿಯೊಬ್ಬ ಕಾರ್ಯಕರ್ತನ ಸ್ವಾಭಿಮಾನದ ಸಂಕೇತವಾಗಬೇಕು. ಊರಿನಲ್ಲಿ ದೇವಸ್ಥಾನ ನಿರ್ಮಿಸಲು ಮನೆಮನೆಗೆ ತೆರಳಿ ಚಂದಾ ಸಂಗ್ರಹಿಸುವಂತೆ, ಪ್ರತಿಯೊಬ್ಬ ಕಾರ್ಯಕರ್ತರೂ ತಮ್ಮ ಶಕ್ತಾನುಸಾರ ೧೦೦ ರುಪಾಯಿಂದ ೧೦ ಲಕ್ಷ ರು.ವರೆಗೆ ಕಾಣಿಕೆ ನೀಡಿ ಈ ಭವನ ನಿರ್ಮಾಣದಲ್ಲಿ ಕೈಜೋಡಿಸಬೇಕು. ಆಗ ಮಾತ್ರ ಇದು ನಮ್ಮ ಭವನ, ನಮ್ಮ ಆಸ್ತಿ ಎಂಬ ಆತ್ಮೀಯತೆ ಮೂಡಲು ಸಾಧ್ಯ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದ ಕೆರೆಯಂಗಳದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಇಂದಿರಾ ಭವನ ನಿರ್ಮಾಣಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಗುರಿಯೊಂದಿಗೆ ಕಾರ್ಯಕರ್ತರು ಈಗಿನಿಂದಲೇ ಒಗ್ಗಟ್ಟಿನಿಂದ ಪಕ್ಷ ಸಂಘಟಿಸಬೇಕು. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು ಎಂದು ಸೂಚಿಸಿದರು.

ಮಂಡ್ಯದಲ್ಲಿ ಕಾಂಗ್ರೆಸ್‌ಗೆ ಪ್ರತ್ಯೇಕ ಕಚೇರಿ ನಿರ್ಮಿಸಬೇಕೆಂಬ ಬೇಡಿಕೆ ಬಹಳ ವರ್ಷಗಳಿಂದ ಇತ್ತು. ಹಿಂದೆ ಗಾಂಧಿ ಭವನದ ಜಾಗದ ವಿಚಾರವಾಗಿ ಪ್ರಯತ್ನ ನಡೆದಿದ್ದರೂ ಅದು ಪೂರ್ಣಗೊಂಡಿರಲಿಲ್ಲ. ಇದೀಗ ಸರ್ಕಾರದಿಂದ ಜಾಗ ಮಂಜೂರು ಮಾಡಿಸಿ, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಉತ್ತಮ ವಿನ್ಯಾಸ ರೂಪಿಸಿ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದರು.

ಈ ಭವನ ನಿರ್ಮಾಣ ಚಲುವರಾಯಸ್ವಾಮಿ ಅವರೊಬ್ಬರ ಜವಾಬ್ದಾರಿಯಲ್ಲ. ಜಿಲ್ಲೆಯ ಪ್ರತಿಯೊಬ್ಬ ಮುಖಂಡರು, ಪಂಚಾಯ್ತಿ ಸದಸ್ಯರು, ಕಾರ್ಯಕರ್ತರು ಕೈಜೋಡಿಸಬೇಕು. ತಮ್ಮ ಶಕ್ತಾನುಸಾರ ಕೊಡುಗೆ ನೀಡಬೇಕು. ಎಲ್ಲರೂ ಸೇರಿ ಕಟ್ಟಿದಾಗ ಮಾತ್ರ ಈ ಭವನಕ್ಕೆ ನಿಜವಾದ ಅರ್ಥ ಬರುತ್ತದೆ ಎಂದರು.

ಪ್ರತಿ ಕ್ಷೇತ್ರದಲ್ಲೂ ಇಂದಿರಾ ಭವನ:

ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಪ್ರತ್ಯೇಕ ಇಂದಿರಾ ಭವನ ನಿರ್ಮಾಣವಾಗಬೇಕು. ಮಳವಳ್ಳಿಯಲ್ಲಿ ನರೇಂದ್ರಸ್ವಾಮಿ ಅವರು ಭವನ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಮದ್ದೂರಿನಲ್ಲಿ ಉದಯ್ ಅವರು ಈಗಾಗಲೇ ಕೆಲಸ ಆರಂಭಿಸಿದ್ದಾರೆ. ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್. ಪೇಟೆ ಮತ್ತು ಪಾಂಡವಪುರದಲ್ಲೂ ಪಕ್ಷದ ಕಚೇರಿಗಳು ನಿರ್ಮಾಣವಾಗಬೇಕು. ಎಲ್ಲ ಕ್ಷೇತ್ರಗಳಲ್ಲೂ ಕಾರ್ಯಕರ್ತರಿಗೆ ಒಗ್ಗೂಡುವ ಕೇಂದ್ರ ಇರಬೇಕು ಎಂದರು.

ಗ್ಯಾರಂಟಿ ಫಲಾನುಭವಿಗಳೇ ಪಕ್ಷದ ಸಂಪರ್ಕ ಸೇತು:

ಪಕ್ಷ ಸಂಘಟನೆಯನ್ನು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಂಪರ್ಕದೊಂದಿಗೆ ಬೆಸೆಯಬೇಕು. ಪ್ರತಿ ಪಂಚಾಯ್ತಿಯಲ್ಲಿ ಆರು ಸದಸ್ಯರ ಗ್ಯಾರಂಟಿ ಸಮಿತಿ ರಚಿಸುವಂತೆ ಈಗಾಗಲೇ ಶಾಸಕರು ಮತ್ತು ಮುಖಂಡರಿಗೆ ಸೂಚನೆ ನೀಡಲಾಗಿದೆ. ಇನ್ನೂ ನಾಲ್ಕೈದು ದಿನಗಳಲ್ಲಿ ಸಮಿತಿಗಳ ರಚನೆ ಪೂರ್ಣಗೊಳಿಸಬೇಕು. ಸಮಿತಿ ಸದಸ್ಯರು ಪ್ರತಿಯೊಬ್ಬ ಗ್ಯಾರಂಟಿ ಫಲಾನುಭವಿಯನ್ನೂ ಸಂಪರ್ಕದಲ್ಲಿಟ್ಟುಕೊಂಡು ಸರ್ಕಾರದ ಯೋಜನೆಗಳ ಮಾಹಿತಿ ತಲುಪಿಸುವ ಜತೆಗೆ ಪಕ್ಷ ಸಂಘಟನೆಗೂ ನೆರವಾಗಬೇಕು ಎಂದರು.

ಪಂಚಾಯ್ತಿಗೆ ೨೫೦ ಯುವ ಸದಸ್ಯರ ಗುರಿ:

ಯುವಕರನ್ನು ಸಂಘಟಿಸಿ ಅವರಲ್ಲಿ ನಾಯಕತ್ವ ಗುಣ ಬೆಳೆಸುವ ಉದ್ದೇಶದಿಂದ ಭಾರತ್ ಜೋಡೋ ಯುವ ಸಂಘಗಳನ್ನು ಆರಂಭಿಸಲಾಗಿದೆ. ಶೀಘ್ರದಲ್ಲೇ ಈ ಸಂಘಗಳ ಉದ್ಘಾಟನೆ ನಡೆಯಲಿದ್ದು, ಪ್ರತಿ ಪಂಚಾಯ್ತಿಯಲ್ಲಿ ಕನಿಷ್ಠ ೨೫೦ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ ಎಂದರು.

ಯುವಕರ ಪ್ರತಿಭೆ, ಆಸಕ್ತಿ ಮತ್ತು ಅಭಿರುಚಿಗೆ ತಕ್ಕಂತೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸುವುದು ಈ ಸಂಘಗಳ ಉದ್ದೇಶ. ಯುವಕರು ಕೇವಲ ಸಂಘದ ಸದಸ್ಯರಾಗುವುದಷ್ಟೇ ಅಲ್ಲ, ತಮ್ಮಲ್ಲಿರುವ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ಕ್ರೀಡಾ ಇಲಾಖೆಯ ಮೂಲಕ ಈ ಸಂಬಂಧದ ಚಟುವಟಿಕೆಗಳು ನಡೆಯುತ್ತಿವೆ. ಸದಸ್ಯರಿಗೆ ಗುರುತಿನ ಚೀಟಿಯನ್ನೂ ನೀಡಲಾಗುವುದು. ಪ್ರತಿ ೧೫ ದಿನಗಳಿಗೊಮ್ಮೆ ಸಭೆ ನಡೆಸಿ, ಯುವಕರು ನಾಟಕ ಕಲಿಯಬೇಕೇ, ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕೇ ಅಥವಾ ಇತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕೇ ಎಂಬುದನ್ನು ಅವರೇ ನಿರ್ಧರಿಸಬೇಕು ಎಂದರು.

ಸ್ಥಳೀಯ ಚುನಾವಣೆಗಳಿಗೆ ಈಗಿನಿಂದಲೇ ಸಜ್ಜಾಗಿ:

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ೨೦೨೮ರಲ್ಲಿ ಯಾವುದೇ ರೀತಿಯ ರಾಜಕೀಯ ಚಿತ್ರಣ ಸೃಷ್ಟಿಸಿದರೂ ಜನರ ಬೆಂಬಲದೊಂದಿಗೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ. ಇದಕ್ಕಾಗಿ ಕಾರ್ಯಕರ್ತರು ಈಗಿನಿಂದಲೇ ಶ್ರಮಿಸಬೇಕು. ಮುಂದಿನ ಮೂರರಿಂದ ನಾಲ್ಕು ತಿಂಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಎದುರಾಗಲಿವೆ. ಈ ಚುನಾವಣೆಗಳಿಗೆ ಎಲ್ಲರೂ ಸಿದ್ಧತೆ ಮಾಡಿಕೊಳ್ಳಬೇಕು. ಪ್ರತಿ ಹಂತದಲ್ಲೂ ಸಮರ್ಥ ನಾಯಕರನ್ನು ಬೆಳೆಸಿಕೊಂಡು, ಒಗ್ಗಟ್ಟಿನಿಂದ ಪಕ್ಷ ಸಂಘಟಿಸಬೇಕು ಎಂದು ಕರೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಹೋಟೆಲ್‌ ಈಜು ಕೊಳದಲ್ಲಿ 2 ವಿದೇಶಿಗರ ಸಾವು
ಪ್ರಜ್ವಲ್‌ ಜೀವಾವಧಿಗೆ ಕಾರಣ ಆದ ಮೂವರಿಗೆ ಕೇಂದ್ರ ಗೃಹ ಪ್ರಶಸ್ತಿ