ಕನ್ನಡಪ್ರಭ ವಾರ್ತೆ ಧಾರವಾಡ
48 ವರ್ಷಗಳಷ್ಟು ಹಳೆಯದಾದ ಕರ್ನಾಟಕ ವಿವಿಯ ಕೌಸಾಳಿ ಇನಸ್ಟಿಟ್ಯೂಟ್ ಆಫ್ ಮ್ಯಾನೆಜ್‌ಮೆಂಟ್ ಸ್ಟಡೀಸ್ (ಕಿಮ್ಸ್) ಕಟ್ಟಡ ಹಳೆಯದಾದ ಹಿನ್ನೆಲೆಯಲ್ಲಿ ಹೊಸ ಕಟ್ಟಡ ಶೇ. 80ರಷ್ಟು ನಿರ್ಮಾಣಗೊಂಡು ಸರ್ಕಾರದ ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿತ್ತು. ವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಹಾಗೂ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರ ಪ್ರಯತ್ನದಿಂದಾಗಿ ಹಳೆಯ ವಿದ್ಯಾರ್ಥಿಗಳ ಸಂಘವು ₹1.38 ಕೋಟಿ ಅನುದಾನ ಕೂಡಿಸಿ ಕಟ್ಟಡವನ್ನು ಸಂಪೂರ್ಣಗೊಳಿಸಿದ್ದು ಉದ್ಘಾಟನೆಗೆ ಕಾಯುತ್ತಿದೆ.
ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ, 1976ರಲ್ಲಿ ಆರಂಭವಾದ ಕಿಮ್ಸ್ ಉತ್ತರ ಕರ್ನಾಟಕದಲ್ಲಿಯೇ ಮ್ಯಾನೆಜ್‌ಮೆಂಟ್ ಕೋರ್ಸ್‌ಗಳಲ್ಲಿ ತೀರಾ ಹಳೆಯದು. ಇದೀಗ ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ಕಟ್ಟಡ ಪೂರ್ಣಗೊಂಡಿದ್ದು ಮಾ. 3ರಂದು ಬೆಳಗ್ಗೆ 10ಕ್ಕೆ ಕಟ್ಟಡದ ಉದ್ಘಾಟನೆ ನೆರವೇರಲಿದೆ. ವಿಭಾಗದ ಹಳೆಯ ವಿದ್ಯಾರ್ಥಿ, ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ದೇಶಕ ವಿಶ್ವನಾಥ ಸಜ್ಜನರ ಆಗಮಿಸುವರು. ಈ ವಿಭಾಗ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನೂರಾರು ಖ್ಯಾತ ನಿರ್ವಹಣಾ ತಜ್ಞರನ್ನು ನೀಡಿದ್ದು ಈ ಪೈಕಿ 400ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಇದು ವರೆಗೂ ಕಿಮ್ಸ್‌ನಿಂದ 4100 ಪದವೀಧರರು ಪದವಿ ಪಡೆದಿದ್ದು ಸದ್ಯ 400 ಹಳೆಯ ವಿದ್ಯಾರ್ಥಿಗಳು ₹1.38 ಕೋಟಿ ದೇಣಿಗೆ ನೀಡಿದ್ದು ಕಾರ್ಯಕ್ರಮದಿಂದಾಗಿ ಮತ್ತಷ್ಟು ಪದವೀಧರರು ಆಗಮಿಸಲಿದ್ದು ಇನ್ನೂ ಹೆಚ್ಚಿನ ಅನುದಾನ ವಿಭಾಗಕ್ಕೆ ಹರಿದು ಬರುವ ನಿರೀಕ್ಷೆ ಇದೆ ಎಂದರು.ಸದ್ಯ ಹೊಸ ಕಟ್ಟಡದಲ್ಲಿ ಆರು ಆಧುನಿಕ, ಡಿಜಿಟಲ್ ಬೋರ್ಡ್ ಹೊಂದಿದ ತರಗತಿಗಳಿದ್ದು, ಆಧುನಿಕ ಗ್ರಂಥಾಲಯ, ಪ್ರಾಧ್ಯಾಪಕರ ಕೊಠಡಿಗಳು, ಪ್ಲೇಸ್‌ಮೆಂಟ್ ಸೆಲ್, ಇನ್ಕ್ಯುಬೇಷನ್ ಸೆಲ್, ಕಂಪ್ಯೂಟರ್ ಲ್ಯಾಬ್, ರಿಯಾಯ್ತಿ ದರದ ಕ್ಯಾಂಟೀನ್, ಆಟದ ಮೈದಾನ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. 1982-84ನೇ ಬ್ಯಾಚ್ ಹಳೆಯ ವಿದ್ಯಾರ್ಥಿ ಸಂಜೀವ್ ಘನಾಟೆ ಅವರು ಕಟ್ಟಡದ ನೇತೃತ್ವ ವಹಿಸಿದ್ದರು. 34 ಸಾವಿರ ಚದರ ಅಡಿ ಗಾತ್ರದ ಕಟ್ಟಡ ಇದೀಗ ಸುಸಜ್ಜಿತವಾಗಿ ಸಿದ್ಧವಾಗಿದೆ ಎಂದ ಕುಲಪತಿಗಳು ಬರೀ ಭೌತಿಕ, ಮೂಲಭೂತ ಸೌಲಭ್ಯಗಳು ಮಾತ್ರ ನೀಡದೇ ಹಳೆಯ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಹಂಚಲು ಸಿದ್ಧರಾಗಿದ್ದಾರೆ. ವಿವಿಧ ಕೌಶಲ್ಯಗಳು, ಕೃತಕ ಬುದ್ಧಿಮತ್ತೆ ಹಾಗೂ ವಿವಿಧ ಕಂಪನಿ ಮತ್ತು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಳೆಯ ವಿದ್ಯಾರ್ಥಿಗಳಿಂದ ಪಾಠ-ಪ್ರವಚನ ಮಾತ್ರವಲ್ಲದೇ ಉದ್ಯೋಗಕ್ಕೆ ವಿದ್ಯಾರ್ಥಿಗಳು ತಯಾರಾಗುವುದರ ಜೊತೆಗೆ ವಿವಿಧ ಕಂಪನಿಗಳಿಗೆ ವಿದ್ಯಾರ್ಥಿಗಳಿಗೆ ಲಿಂಕ್ ಮಾಡಿಕೊಡುವ ನಿಟ್ಟಿನಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘವು ಕಾರ್ಯ ಮಾಡಲು ಮುಂದೆ ಬಂದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಭಾಗದ ನಿರ್ದೇಶಕ ರಾಮಾಂಜನೇಯಲು, ಹಳೆಯ ವಿದ್ಯಾರ್ಥಿಗಳಾದ ನರೇಶ ಶಾ, ಸಂಜೀವ ಘನತೆ, ಪ್ರಮೋದ ಜಳಿಕಕರ್, ನಿವೃತ್ತ ಹಿರಿಯ ಪ್ರಾಧ್ಯಾಪಕ ಪ್ರೊ.ಎಂ.ಎಸ್. ಸುಭಾಸ, ಪ್ರೊ.ಆರ್.ಎಚ್.ಚಚಡಿ ಇದ್ದರು.