ವನ್ಯಜೀವಿಗಳಿಗೆ ನೀರುಣಿಸಲು ನೀರಿನ ತೊಟ್ಟಿಗಳ ನಿರ್ಮಾಣ

KannadaprabhaNewsNetwork | Published : Mar 27, 2025 1:04 AM

ಸಾರಾಂಶ

ಕಳೆದ ವರ್ಷದ ಮಳೆಗೆ ತುಂಬಿದ್ದ ತಾಲೂಕಿನ ಬಹುತೇಕ ಕೆರೆ, ಕುಂಟೆಗಳು ಭಾಗಶಃ ಬರಿದಾಗುತ್ತಿದ್ದು ಕಾಡು ಪ್ರಾಣಿಗಳು ನೀರಿಗಾಗಿ ಅಲೆದಾಡುವ ದುಸ್ಥಿತಿ ಉದ್ಭವವಾಗಿದೆ

ಎಸ್.ಎಂ. ಸೈಯದ್ ಗಜೇಂದ್ರಗಡ

ಬೇಸಿಗೆ ಬಿಸಿಲಿನ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅರಣ್ಯ ಪ್ರದೇಶದಲ್ಲಿನ ನೀರಿನ ಮೂಲಗಳು ಬತ್ತಿದ ಪರಿಣಾಮ ತಾಲೂಕಿನ ಕಾಡು ಪ್ರಾಣಿಗಳಿಗೆ ಕುಡಿವ ನೀರಿನ ಸಮಸ್ಯೆ ಉದ್ಭವವಾಗಿದೆ. ಪ್ರಾಣಿಗಳ ದಾಹ ತಣಿಸಲು ನೀರಿನ ಕೊಳಗಳನ್ನು ತುಂಬಿಸಲು ಮುಂದಾಗಿರುವ ಅರಣ್ಯ ಇಲಾಖೆಯ ನಡೆಗೆ ಪ್ರಾಣಿಪ್ರೇಮಿಗಳ ಮೆಚ್ಚುಗೆ ಪಾತ್ರವಾಗಿದೆ.

ಕಳೆದ ವರ್ಷದ ಮಳೆಗೆ ತುಂಬಿದ್ದ ತಾಲೂಕಿನ ಬಹುತೇಕ ಕೆರೆ, ಕುಂಟೆಗಳು ಭಾಗಶಃ ಬರಿದಾಗುತ್ತಿದ್ದು ಕಾಡು ಪ್ರಾಣಿಗಳು ನೀರಿಗಾಗಿ ಅಲೆದಾಡುವ ದುಸ್ಥಿತಿ ಉದ್ಭವವಾಗಿದೆ. ತಾಲೂಕಿನ ಕಲ್ಲಿಗನೂರ, ನಾಗೇಂದ್ರಗಡ ಹಾಗೂ ಶಾಂತಗೇರಿ ಭಾಗದಲ್ಲಿನ ಬೆಟ್ಟಗಳ ಸುತ್ತಲೂ ದಟ್ಟವಾಗಿರುವ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳ ದಾಹ ನೀಗಿಸಲು ಗಜೇಂದ್ರಗಡ ಅರಣ್ಯ ಇಲಾಖೆ ಅಧಿಕಾರಿಗಳು ಕೃತಕ ನೀರಿನ ಕೊಳಗಳನ್ನು ಸೃಷ್ಟಿಸಿ, ಟ್ಯಾಂಕರ್ ಮೂಲಕ ನೀರು ತುಂಬಿಸಿ ವನ್ಯ ಜೀವಿಗಳ ನೀರಿನ ದಾಹ ತಣಿಸಲು ಶ್ರಮಿಸುತ್ತಿದ್ದಾರೆ.

ಗಜೇಂದ್ರಗಡ ಪಟ್ಟಣ ಸೇರಿ ತಾಲೂಕಿನಲ್ಲಿ ೨೦೦೦ ಹೆಕ್ಟೇರ್ ಪ್ರದೇಶದಲ್ಲಿ ಹೆಚ್ಚಾಗಿ ನವಿಲು, ಕೋತಿ, ನರಿ, ತೋಳ ಹಾಗೂ ಕಾಡುಹಂದಿ ಮತ್ತು ಚಿರತೆ, ಜಿಂಕೆಗಳು, ಮುಂಗುಸಿಗಳು ಸೇರಿ ಅನೇಕ ಪಕ್ಷಿ, ಪ್ರಾಣಿಗಳ ನೆಚ್ಚಿನ ವಾಸಸ್ಥಾನವಾಗಿದೆ. ಹೀಗಾಗಿ ಆಹಾರ ಮತ್ತು ನೀರಿಗಾಗಿ ಕಾಡು ಪ್ರಾಣಿಗಳು ಕಾಡಿನಿಂದ ನಾಡಿಗೆ ಬರುತ್ತಿರುವ ಪ್ರಕರಣಗಳಿವೆ. ಬೀರು ಬಿಸಿಲಿಗೆ ನೀರಿಗಾಗಿ ವನ್ಯ ಜೀವಿಗಳು ನಾಡಿನತ್ತ ಬಾರದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಟ್ಯಾಂಕರ್ ಮೂಲಕ ವನ್ಯ ಜೀವಿಗಳಿಗೆ ನೀರೊದಗಿಸುತ್ತಿದ್ದಾರೆ.

೧೫ ದಿನಗೊಳಿಗೊಮ್ಮೆ ನೀರು: ತಾಲೂಕಿನಲ್ಲಿ ವನ್ಯ ಜೀವಿಗಳ ನೀರಿ ದಾಹ ನೀಗಿಸಲು ಸೃಷ್ಟಿಸಿರುವ ೪ ಕೃತಕ ನೀರಿನ ತೊಟ್ಟಿಗಳಿಗೆ ೧೫ ದಿನಗಳಿಗೊಮ್ಮೆ ಟ್ಯಾಂಕರ್ ಮೂಲಕ ಅರಣ್ಯ ಇಲಾಖೆ ನೀರು ಪೂರೈಸುತ್ತಿದೆ. ಅಲ್ಲದೆ ಸರ್ಕಾರದಿಂದ ಕೃತಕ ನೀರಿನ ಕೊಳಗಳ ನಿರ್ಮಾಣಕ್ಕೆ ನಿರ್ದಿಷ್ಟ ಅನುದಾನ ಇಲ್ಲದಿದ್ದರೂ ಸಹ ತಾಲೂಕಿನ ಅರಣ್ಯ ಇಲಾಖೆ ಮೂಕ ಪ್ರಾಣಿಗಳ ನೀರಿನ ದಾಹ ತಣಿಸಲು ಕೃತಕ ನೀರಿನ ತೊಟ್ಟಿಗಳನ್ನು ನಿರ್ಮಿಸಿ ವನ್ಯ ಜೀವಿಗಳ ಸಂರಕ್ಷಣೆ ಮಾಡುತ್ತಿದ್ದಾರೆ. ಸರ್ಕಾರಕ್ಕೆ ತಾಲೂಕಿನ ಅರಣ್ಯ ಪ್ರದೇಶದಲ್ಲಿ ನಿರ್ಮಿಸಿದ ೪ ನೀರಿನ ತೊಟ್ಟಿಗಳ ಹಾಗೂ ಟ್ಯಾಂಕರ್ ಮೂಲಕ ನೀರು ಪೂರೈಕೆ ಕುರಿತು ಮಾಹಿತಿ ರವಾನಿಸಿದ್ದಾರೆ.

ಗಜೇಂದ್ರಗಡ ತಾಲೂಕಿನಲ್ಲಿ ಅಂದಾಜು ೨ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ವ್ಯಾಪಿಸಿದ್ದು, ಅರಣ್ಯದಲ್ಲಿ ವನ್ಯ ಜೀವಿಗಳಿಗೆ ಬಿಸಿಲಿನ ತಾಪದಿಂದ ಉಂಟಾಗುವ ನೀರಿನ ದಾಹವನ್ನು ನೀಗಿಸಲು ನಿರ್ಮಿಸಿರುವ ೪ ನೀರಿನ ತೊಟ್ಟಿಗಳಿಗೆ ಪ್ರಾಥಮಿಕ ಹಂತದಲ್ಲಿ ಟ್ಯಾಂಕರ್ ಮೂಲಕ ನೀರು ಬಿಡಲಾಗುತ್ತಿದೆ ಎಂದು ಗದಗ ವಲಯ ಅರಣ್ಯ ಅಧಿಕಾರಿ ವೀರೇಂದ್ರ ಮರಿಬಸಣ್ಣನರ ಹೇಳಿದ್ದಾರೆ.

ಗಜೇಂದ್ರಗಡ ತಾಲೂಕಿನ ಶಾಂತಗೇರಿ, ಕಲ್ಲಿಗನೂರ ಹಾಗೂ ನಾಗೇಂದ್ರಗಡ ಅರಣ್ಯ ಪ್ರದೇಶಲ್ಲಿನ ನೀರಿನ ತೊಟ್ಟಿಗಳಿಗೆ ೧೦ರಿಂದ ೧೨ ದಿನಕೊಮ್ಮೆ ನೀರೊದಗಿಸುತ್ತಿರುವುದರ ಜತೆಗೆ ನೀರಿನ ತೊಟ್ಟಿಗಳು ಖಾಲಿಯಾಗುವುದು ಕಂಡು ಬಂದ ತಕ್ಷಣವೇ ನೀರು ತುಂಬಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಗಜೇಂದ್ರಗಡ ತಾಲೂಕು ಉಪವಲಯ ಅರಣ್ಯ ಅಧಿಕಾರಿ ಪ್ರವೀಣಕುಮಾರ ಸಾಸಿವಿಹಳ್ಳಿ ಹೇಳಿದ್ದಾರೆ.

Share this article