ಸ್ಥಳಾಂತರಗೊಂಡ ಇಂದಿರಾ ಕ್ಯಾಂಟೀನ್‌ಗೆ ನಗರ ಸಭೆಯ ಆಯುಕ್ತರಿಂದ ಚಾಲನೆ
ಕೆಎಸ್‌ಆರ್‌ಟಿಸಿ ಗ್ರಾಮಾಂತರ ಸಾರಿಗೆ ನಿಲ್ದಾಣವನ್ನು ₹20 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಅತ್ಯಾಧುನಿಕವಾಗಿ ನಿರ್ಮಿಸುವ ಉದ್ದೇಶದಿಂದ ನಿಲ್ದಾಣದಲ್ಲಿದ್ದ ಕ್ಯಾಂಟೀನ್ ಕೆ.ಎಂ. ರಸ್ತೆ ನಗರಸಭೆ ಈ ಮಳಿಗೆಗೆ ಸ್ಥಳಾಂತರಿಸಲಾಗಿದೆ ಎಂದು ನಗರ ಸಭೆಯ ಆಯುಕ್ತ ಬಸವರಾಜ್ ಹೇಳಿದರು.
ಕೆಎಸ್‌ಆರ್‌ಟಿಸಿ ಗ್ರಾಮಾಂತರ ಸಾರಿಗೆ ಬಸ್ ನಿಲ್ದಾಣದ ಪಕ್ಕದಿಂದ ಕೆ.ಎಂ.ರಸ್ತೆಯ ನಗರ ಸಭೆಯ ಮಳಿಗೆಗೆ ಸ್ಥಳಾಂತರ ಮಾಡಲಾಗಿದ್ದ ಇಂದಿರಾ ಕ್ಯಾಂಟೀನ್ ಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಈ ಸಂಬಂಧ ನಗರ ಸಭಾಧ್ಯಕ್ಷ, ಉಪಾಧ್ಯಕ್ಷ, ನಗರಸಭೆ ಸಿಬ್ಬಂದಿ, ತಾವೂ ಸೇರಿದಂತೆ ನಗರದ ಹಲವೆಡೆ ಸ್ಥಳ ಗುರುತಿಸುವಂತೆ ಸೂಚಿಸಲಾಗಿದ್ದು, ಸೂಕ್ತ ಸ್ಥಳ ಸಿಗದಿರುವ ಹಾಗೂ ತುರ್ತಾಗಿ ಮಾಡಬೇಕಾಗಿದ್ದರಿಂದ ಅಂತಿಮವಾಗಿ ಜನನಿಬಿಡವಾದ ಈ ಸ್ಥಳ ಆಯ್ಕೆಮಾಡಲಾಗಿದೆ ಎಂದರು.ಅತಿ ಕಡಿಮೆ ಬೆಲೆಯಲ್ಲಿ ಇಂದಿರಾ ಕ್ಯಾಂಟೀನ್ ಆಹಾರ ಪದಾರ್ಥ ನೀಡುತ್ತಿದ್ದು, ನಗರದ ನಾಗರಿಕರು ಊಟ ತಿಂಡಿ ಸವಿ ಯುವ ಮೂಲಕ ಯಶಸ್ವಿಗೊಳಿಸಲು ವಿನಂತಿಸಿದರು. ಅಜಾದ್ ಪಾರ್ಕ್ ವೃತ್ತದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲು ಜಾಗದ ಅಳತೆ ಕಡಿಮೆ ಇತ್ತು. ಹಿಂಭಾಗದಲ್ಲಿ ಕೆಇಬಿ ಕಚೇರಿ, ಜಿಲ್ಲಾ ಪಂಚಾಯಿತಿಯಿಂದ ಈಗ ಅಕ್ಕಾ ಕೆಫೆ ತೆರೆಯಲು ಜಿಲ್ಲಾಧಿ ಕಾರಿಗಳ ಅನುಮೋದನೆಗೆ ಪತ್ರ ರವಾನಿಸಲಾಗಿದೆ. ಶೀಘ್ರದಲ್ಲಿ ಅಕ್ಕಾ ಕೆಫೆ ಆರಂಭಿಸುವುದಾಗಿ ಭರವಸೆ ನೀಡಿದರು.ನಗರದ ಕೆ.ಎಂ ರಸ್ತೆ ಕತ್ರಿ ಮಾರಮ್ಮದೇವಸ್ಥಾನದಿಂದ ಕಣಿವೆ ರುದ್ರೇಶ್ವರ ದೇವಸ್ಥಾನದವರೆಗೆ ವಿದ್ಯುತ್ ಬೀದಿ ದೀಪ ಅಳವಡಿಕೆ ಕಾರ್ಯಕ್ಕೆ ಈಗಾಗಲೇ ಕಂಬ ಅಳವಡಿಸಲು ಕಾಮಗಾರಿ ನಡೆಯುತ್ತಿದೆ. ಮಾ.15 ರೊಳಗೆ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ತಾಂತ್ರಿಕ ಕಾರಣದಿಂದ ವಿಳಂಭವಾಗಿದೆ. ಇನ್ನು 15ದಿನಗಳಲ್ಲಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು.ನಗರಕ್ಕೆ ಹಿರೇಕೊಳಲೆ ಮತ್ತು ಯಗಚಿ ಜಲಾಶಯದಿಂದ ಕುಡಿಯುವ ನೀರು ಸರಬರಾಜಾಗುತ್ತಿದ್ದು, ಮುಂದಿನ ಒಂದು ವರ್ಷದ ಅವಧಿಗೆ ಕುಡಿಯುವ ನೀರಿನ ಸರಬರಾಜಿನಲ್ಲಿ ಯಾವುದೇ ಸಮಸ್ಯಇಲ್ಲ ಎಂದು ಸ್ಪಷ್ಟಪಡಿಸಿದರು.ಇಂದಿರಾ ಕ್ಯಾಂಟೀನ್‌ಗೆ ತೊಂದರೆಯಾಗದಂತೆ ಗ್ಯಾಸ್ ಸರಬರಾಜಿಗೆ ಏಜೆನ್ಸಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದು, ಪೂರ್ವಭಾವಿಯಾಗಿ ಸೌದೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.