ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕಟ್ಟಡ ಕಾರ್ಮಿಕರು ಪ್ರತಿಭಟನೆ

KannadaprabhaNewsNetwork |  
Published : Nov 21, 2026, 02:30 AM IST
ಫೋಟೋವಿವರ- (16ಎಚ್‌ಪಿಟಿ2) ಹೊಸಪೇಟೆಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ಕಟ್ಟಡ - ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ವತಿಯಿಂದ ಜಿಲ್ಲಾ ಕಾರ್ಮಿಕ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು | Kannada Prabha

ಸಾರಾಂಶ

​ವರ್ಷದಿಂದ ವರ್ಷಕ್ಕೆ ಶೈಕ್ಷಣಿಕ ಸಹಾಯಧನ ನಿರಾಕರಿಸಲಾಗುತ್ತಿದ್ದು, ಲಕ್ಷಾಂತರ ಅರ್ಜಿ ತಿರಸ್ಕರಿಸಲಾಗಿದೆ. ಸಹಾಯಧನ ಮೊತ್ತ ಗಣನೀಯವಾಗಿ ಹೆಚ್ಚಿಸಬೇಕು

ಹೊಸಪೇಟೆ: ಕಟ್ಟಡ ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ- ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ವತಿಯಿಂದ ಜಿಲ್ಲಾ ಕಾರ್ಮಿಕ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರದ ಹೊಸ ಲೇಬರ್ ಕೋಡ್‌ನ ಸಾಮಾಜಿಕ ಸುರಕ್ಷಾ ಸಂಹಿತೆಯು ಕಾರ್ಮಿಕರ ನೋಂದಣಿ ಅರ್ಹತೆಗೆ ಕುತ್ತು ತಂದಿದ್ದು, ಸೆಸ್ ಸಂಗ್ರಹಣೆಗೆ ತಡೆಯೊಡ್ಡಿದೆ ಮತ್ತು ಮಂಡಳಿಯ ಸ್ವಾಯತ್ತತೆ ಕಸಿದುಕೊಂಡಿದೆ. ಆದ್ದರಿಂದ ಇಂತಹ ಕಾರ್ಮಿಕ ವಿರೋಧಿ ಸಂಹಿತೆ ರಾಜ್ಯದಲ್ಲಿ ಜಾರಿ ಮಾಡಬಾರದು.

ಡಿಬಿಟಿ ಆಧಾರಿತ ಯೋಜನೆಗಳ ಜಾರಿ ಹಾಗೂ ಪ್ರೊಕ್ಯೂರ್ಮೆಂಟ್ ನಿಲ್ಲಿಸುವುದು, ಕಲ್ಯಾಣ ಮಂಡಳಿಯಿಂದ ನೇರ ಫಲಾನುಭವಿ ವರ್ಗಾವಣೆ ಯೋಜನೆಗಳಿಗೆ ಹಣಕಾಸು ಕಡಿತ ಮಾಡಲಾಗಿದ್ದು, ಟೆಂಡರ್ ಮೂಲಕ ನೀಡುವ ಕಿಟ್‌ ಮತ್ತು ಇತರೆ ಪ್ರೊಕ್ಯೂರ್ಮೆಂಟ್ ಯೋಜನೆಗಳಿಗೆ ಭರಪೂರ ಅನುದಾನ ನೀಡಲಾಗುತ್ತಿದೆ. ಈ ಟೆಂಡರ್ ಆಧಾರಿತ ಯೋಜನೆ ಸಂಪೂರ್ಣವಾಗಿ ನಿಲ್ಲಿಸಬೇಕು.

​ವರ್ಷದಿಂದ ವರ್ಷಕ್ಕೆ ಶೈಕ್ಷಣಿಕ ಸಹಾಯಧನ ನಿರಾಕರಿಸಲಾಗುತ್ತಿದ್ದು, ಲಕ್ಷಾಂತರ ಅರ್ಜಿ ತಿರಸ್ಕರಿಸಲಾಗಿದೆ. ಸಹಾಯಧನ ಮೊತ್ತ ಗಣನೀಯವಾಗಿ ಹೆಚ್ಚಿಸಬೇಕು ಹಾಗೂ ಕುಟುಂಬ ಆಫ್‌ ಆಧಾರದ ಮೇಲೆ ಕಾರ್ಮಿಕರಲ್ಲವೆಂದು ತಿರಸ್ಕರಿಸಿರುವ ಅರ್ಜಿ ಮಾನ್ಯ ಮಾಡಬೇಕು. ​ನೂರಾರು ಕೋಟಿ ವೆಚ್ಚದಲ್ಲಿ ಖರೀದಿಸುತ್ತಿರುವ ಮೇಸನ್, ಪ್ಲಂಬರ್, ಎಲೆಕ್ಟ್ರಿಷಿಯನ್ ಇತ್ಯಾದಿ ಕಿಟ್‌ ತೀರ ಕಳಪೆಯಾಗಿದ್ದು, ಕಾರ್ಮಿಕರಿಗೆ ಬಳಕೆಗೆ ಯೋಗ್ಯವಾಗಿಲ್ಲ. ಇದರ ಹಿಂದೆ ದೊಡ್ಡ ಮಟ್ಟದ ಅವ್ಯವಹಾರ ನಡೆದ‌ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಕುರಿತು ತನಿಖೆ ನಡೆಸಬೇಕು.

​ಕಾರ್ಮಿಕರ ವೈದ್ಯಕೀಯ ತಪಾಸಣೆಯ ಹೆಸರಿನಲ್ಲಿ ₹800 ಕೋಟಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ‌ ಕೇಳಿ ಬಂದಿದ್ದು, ಈ ಪ್ರಕರಣ‌ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು. ಗಂಭೀರ ಕಾಯಿಲೆಗಳಿಗೆ ಚಿಕಿತ್ಸಾ ವೆಚ್ಚ ಪೂರ್ತಿಯಾಗಿ ಭರಿಸಬೇಕು. ​ಪ್ರಸ್ತುತ ನೀಡುತ್ತಿರುವ ಮಾಸಿಕ ಪಿಂಚಣಿ ₹5,000ಕ್ಕೆ ಹಾಗೂ ಕುಟುಂಬ ಪಿಂಚಣಿ ₹3,000‌ಕ್ಕೆ ಹೆಚ್ಚಿಸಬೇಕು. ​ಮಂಡಳಿಯ ಸಾವಿರಾರು ಕೋಟಿ ನಿಧಿ ತಿರುಗಿಸಿ ರಾಜ್ಯದಲ್ಲಿ ವಸತಿ ಶಾಲೆ ನಿರ್ಮಿಸುವ ಹಾಗೂ ಜಿಟಿಟಿಸಿ ಕೌಶಲ್ಯ ಕೇಂದ್ರ ತೆರೆಯುವ ಬದಲಾಗಿ ಸಿಇಟಿ, ನೀಟ್ ಉಚಿತ ಕೋಚಿಂಗ್ ಮತ್ತು ಶೈಕ್ಷಣಿಕ ಸಹಾಯಧನ ಹೆಚ್ಚಳಕ್ಕೆ ಒತ್ತು ನೀಡಬೇಕು.

​ಭ್ರಷ್ಟಾಚಾರದ ಕೇಂದ್ರಗಳಾಗಿ ಮಾರ್ಪಟ್ಟಿರುವ ಖಾಸಗಿ ಏಜೆನ್ಸಿಗಳ ಕಾರ್ಮಿಕ ಸೇವಾ ಕೇಂದ್ರ ಕೂಡಲೇ ಮುಚ್ಚಬೇಕು. ಮನೆ ನಿರ್ಮಾಣಕ್ಕೆ ಸಹಾಯಧನ ನೀಡುವ ಯೋಜನೆ ಕೂಡಲೇ ಜಾರಿಗೆ ತರಬೇಕು. ​ಮದುವೆ, ವೈದ್ಯಕೀಯ, ಶಿಕ್ಷಣ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ಸಹಾಯಧನ ಅರ್ಜಿ ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕು ಹಾಗೂ ತಂತ್ರಾಂಶದಲ್ಲಿ ಎದುರಾಗುತ್ತಿರುವ ತಾಂತ್ರಿಕ ಸಮಸ್ಯೆ ಶೀಘ್ರವಾಗಿ ಬಗೆಹರಿಸಬೇಕು. ​ನೋಂದಣಿ ಮತ್ತು ಮರು ನೋಂದಣಿಗಾಗಿ ವಿಧಿಸುತ್ತಿರುವ ವಂತಿಗೆ ಶುಲ್ಕ ಸಂಪೂರ್ಣವಾಗಿ ರದ್ದುಪಡಿಸಬೇಕು ಎಂದು ಮನವಿ ಪತ್ರದಲ್ಲಿ ಎನ್. ಯಲ್ಲಾಲಿಂಗ, ಗುನ್ನಹಳ್ಳಿ ರಾಘವೇಂದ್ರ, ​ಎಸ್.ಜಗನ್ನಾಥ ​ಎಂ.ಗೋಪಾಲ, ನನ್ನು ಸಾಹೇಬ್, ​ಹೇಮಂತ್ ನಾಯಕ, ​ನೂರುದ್ದೀನ್, ​ಕರಿಯಣ್ಣ, ​ಮರುಳಸಿದ್ದಾಚಾರಿ, ​ಶಬ್ಬೀರ್, ​ಪೀರ್, ​ವಲಿ ಭಾಷಾ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಸಿಗೆಗೆ ನೀರು ಆಪೋಶನ: ಜಲಕ್ಷಾಮ ಭೀತಿ !
371ಜೆ ಹೋರಾಟಕ್ಕೆ ಕಾಲೇಜು ವಿದ್ಯಾರ್ಥಿಗಳ ಅಭೂತಪೂರ್ವ ಬೆಂಬಲ