ಸಂಡೂರು: ತಾಲೂಕಿನ ಜೋಗ ಗ್ರಾಮಸ್ಥರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಗ್ರಾಮ ಘಟಕದ ಮುಖಂಡರು ಗುರುವಾರ ಗ್ರೇಡ್೨ ತಹಸೀಲ್ದಾರ್ ಸುಧಾ ಅರಮನೆಗೆ ಮನವಿ ಸಲ್ಲಿಸಿದರು.
ಕಾಡು ಮೃಗಗಳಿಂದ ರಕ್ಷಣೆ ನೀಡಬೇಕು. ಕಾಡು ಪ್ರಾಣಿಗಳಿಂದಾಗಿರುವ ಬೆಳೆ ನಷ್ಟಕ್ಕೆ ಪರಿಹಾರ ಒದಗಿಸಬೇಕು. ಫಾರಂ ೫೭ ಬಗರ್ ಹುಕುಂ ಹಾಗೂ ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವ ೨೦೦ ಕ್ಕೂ ಹೆಚ್ಚು ಸಾಗುವಳಿದಾರರು ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ಪಟ್ಟ ನೀಡಬೇಕು. ಅರಣ್ಯ ಸಾಗುವಳಿದಾರರ ಹಲವು ರೈತರ ಅರ್ಜಿ ಬಿಟ್ಟು ಹೋಗಿದ್ದು, ಅವು ಪಟ್ಟಿಯಲ್ಲಿ ಸೇರಿಸಬೇಕು. ಪಹಣಿಯಲ್ಲಿ ಸಾಗುವಳಿ ಭೂಮಿಬಿ.ಕರಾಬು, ಗಯಾಳು ಎಂದು ನಮೂದಿಸಿರುವುದನ್ನು ತೆಗೆಯಬೇಕು.
ಜೋಗ ಗ್ರಾಮದ ಗಂಜಿ ಹನುಮಪ್ಪದಾರಿ, ಬಳ್ಳಾರಿ ನಾರಾಯಣಪ್ಪ ತೋಟದಿಂದ ಗೋವರ್ಧನ ಹೊಲದ ದಾರಿ ಹಾಗೂ ಗಾದಿಗನೂರು ದಾರಿ ಸೇರಿದಂತೆ ಎಲ್ಲ ಹೊಲಗಳ ಬಂಡಿ ರಸ್ತೆ ದುರಸ್ತಿ ಮಾಡಬೇಕು. ಜೋಗದ ಕೆರೆಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸಬೇಕು. ಸಾರ್ವಜನಿಕ ಶೌಚಾಲಯ, ಸಮರ್ಪಕ ಸಾರಿಗೆ ವ್ಯವಸ್ಥೆ, ಬಸ್ ನಿಲ್ದಾಣ, ಗ್ರಂಥಾಲಯ, ಆರೋಗ್ಯ ಸೌಲಭ್ಯ, ಕಲ್ಯಾಣ ಮಂಟಪ, ವಸತಿ ನಿವೇಶನ, ಮಸಣಗಳಿಗೆ ರಕ್ಷಣಾಗೋಡೆ, ಹೈನುಗಾರಿಕೆ ಸೌಲಭ್ಯ, ಯುವಜನರಿಗೆ ಕೌಶಲ್ಯ ತರಬೇತಿ ಒದಗಿಸಬೇಕೆಂಬುದು ನಮ್ಮ ಬೇಡಿಕೆಗಳಾಗಿವೆ. ಗ್ರಾಮಸ್ಥರ ಬೇಡಿಕೆ ಈಡೇರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಲಂದರಬಾಷ, ತಾಲೂಕಾಧ್ಯಕ್ಷ ಜಿ.ಪಂಪನಗೌಡ, ಸಹ ಕಾರ್ಯದರ್ಶಿ ಎಸ್. ಕಾಲುಬ, ಸಿಪಿಎಂ ಕಾರ್ಯದರ್ಶಿ ಎ. ಸ್ವಾಮಿ, ಮುಖಂಡ ಎನ್. ಸಂಕಣ್ಣ, ಹನುಮಂತಪ್ಪ, ಪಿ.ಶರಣಬಸವನ, ಜಿ. ಭದ್ರಗೌಡ, ರಾಮಣ್ಣ, ಎ. ಹೊನ್ನೂರಪ್ಪ, ಮಾರೇಶ, ಯಂಕಪ್ಪ, ಉಮೇಶ, ಕೆ. ಹೊನ್ನೂರಪ್ಪ, ಕೆ. ಬಸವರಾಜ ಉಪಸ್ಥಿತರಿದ್ದರು.