ಡಿ. 1ರಿಂದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ

KannadaprabhaNewsNetwork |  
Published : Nov 21, 2026, 02:30 AM IST
ಕೊಪ್ಪಳ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅಪರ ಜಿಲ್ಲಾಧಿಕಾರಿ ಸಿದ್ಧರಾಮೇಶ್ವರ ಮಾತನಾಡಿದರು. | Kannada Prabha

ಸಾರಾಂಶ

2027ರ ಜ.1ಕ್ಕೆ 18 ವರ್ಷ ಪೂರ್ಣಗೊಳ್ಳುವವರು ಹೆಸರು ಸೇರ್ಪಡೆಗೆ ಅರ್ಹರಾಗಿದ್ದು, ಏಪ್ರಿಲ್, ಜುಲೈ ಹಾಗೂ ಅಕ್ಟೋಬರ್ 1ರಂದು 18 ವರ್ಷ ಪೂರ್ಣಗೊಳ್ಳುವ ವರೆಗೂ ಮುಂಗಡವಾಗಿ ಅರ್ಜಿ ಸಲ್ಲಿಸಬಹುದು.

ಕೊಪ್ಪಳ: ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಡಿ. 1ರಿಂದ 31ರ ವರೆಗೆ ಹೊಸದಾಗಿ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಹೆಸರು ತೆಗೆದುಹಾಕಲು ಅವಕಾಶ ಕಲ್ಪಿಸಲಾಗಿದೆ. ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2027ರ ಪ್ರಕ್ರಿಯೆ ಯಶಸ್ವಿಯಾಗಲು ರಾಜಕೀಯ ಪಕ್ಷಗಳ ಸಹಕಾರ ಅಗತ್ಯ ಎಂದು ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ನ. 23ರೊಳಗೆ ಮತಗಟ್ಟೆಗಳ ಮರುಹೊಂದಾಣಿಕೆ ಪೂರ್ಣಗೊಳ್ಳಲಿದ್ದು, ಡಿ. 1ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಡಿ. 1ರಿಂದ 31ರ ವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಬಹುದು. ಅರ್ಜಿಗಳನ್ನು ಜ. 14ರೊಳಗೆ ವಿಲೇವಾರಿ ಮಾಡಿ, ಜ. 20ರಂದು ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದರು.

ಜಿಲ್ಲೆಯಲ್ಲಿ 10.59 ಲಕ್ಷ ಮತದಾರರು: ಅ. 27ರಂದು ಪ್ರಕಟವಾದ ಅಂತಿಮ ಪಟ್ಟಿಯಂತೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 5,27,459 ಪುರುಷರು, 5,31,641 ಮಹಿಳೆಯರು ಹಾಗೂ 64 ಇತರ ಮತದಾರರು ಸೇರಿ ಒಟ್ಟು 10,59,164 ಮತದಾರರಿದ್ದಾರೆ. ಕುಷ್ಟಗಿ ಕ್ಷೇತ್ರದಲ್ಲಿ 2,16,911, ಕನಕಗಿರಿ 2,11,921, ಗಂಗಾವತಿ 1,89,159, ಯಲಬುರ್ಗಾ 2,10,310 ಹಾಗೂ ಕೊಪ್ಪಳ ಕ್ಷೇತ್ರದಲ್ಲಿ 2,30,863 ಮತದಾರರಿದ್ದಾರೆ.

ಕುಷ್ಟಗಿಗೆ ಎರಡು ಹೊಸ ಮತಗಟ್ಟೆ: ಪ್ರತಿ ಮತಗಟ್ಟೆಯಲ್ಲಿ ಗರಿಷ್ಠ 1,200 ಮತದಾರರು ಇರಬೇಕೆಂಬ ಆಯೋಗದ ನಿರ್ದೇಶನದಂತೆ ಕುಷ್ಟಗಿ ಕ್ಷೇತ್ರದ ಮೆಣಸಗೇರಾ ಮತಗಟ್ಟೆಯಲ್ಲಿ 1,236 ಹಾಗೂ ಟೋಣಸಿಹಾಳ ಮತಗಟ್ಟೆಯಲ್ಲಿ 1,253 ಮತದಾರರಿರುವುದರಿಂದ ಎರಡೂ ಮತಗಟ್ಟೆಗಳನ್ನು ವಿಭಜಿಸಿ ಹೊಸ ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ಇದರಿಂದ ಜಿಲ್ಲೆಯ ಮತಗಟ್ಟೆಗಳ ಸಂಖ್ಯೆ 1,352ರಿಂದ 1,354ಕ್ಕೆ ಏರಿಕೆಯಾಗಲಿದೆ.

2027ರ ಜ.1ಕ್ಕೆ 18 ವರ್ಷ ಪೂರ್ಣಗೊಳ್ಳುವವರು ಹೆಸರು ಸೇರ್ಪಡೆಗೆ ಅರ್ಹರಾಗಿದ್ದು, ಏಪ್ರಿಲ್, ಜುಲೈ ಹಾಗೂ ಅಕ್ಟೋಬರ್ 1ರಂದು 18 ವರ್ಷ ಪೂರ್ಣಗೊಳ್ಳುವ ವರೆಗೂ ಮುಂಗಡವಾಗಿ ಅರ್ಜಿ ಸಲ್ಲಿಸಬಹುದು. ಹೆಸರು ಸೇರ್ಪಡೆಗೆ ನಮೂನೆ-6, ಸಾಗರೋತ್ತರ ಮತದಾರರಿಗೆ ನಮೂನೆ-6ಎ, ಹೆಸರು ತೆಗೆದುಹಾಕಲು ನಮೂನೆ-7 ಹಾಗೂ ತಿದ್ದುಪಡಿ ಮತ್ತು ಸ್ಥಳಾಂತರಕ್ಕೆ ನಮೂನೆ-8 ಸಲ್ಲಿಸಬೇಕು. ಇಸಿಐ ನೆಟ್ ಆ್ಯಪ್ ಅಥವಾ voters.eci.gov.in ಮೂಲಕ ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು ಎಂದರು.

ಜಿಲ್ಲೆಯಲ್ಲಿ 1,352 ಬಿಎಲ್‌ಒ ಹಾಗೂ 153 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ರಾಜಕೀಯ ಪಕ್ಷಗಳಿಂದ 2,730 ಬೂತ್ ಮಟ್ಟದ ಏಜೆಂಟರನ್ನು ನೇಮಿಸಿದ್ದು, ಉಳಿದ ಮತಗಟ್ಟೆಗಳಿಗೂ ಏಜೆಂಟರನ್ನು ನೇಮಿಸುವಂತೆ ಸೂಚಿಸಿದರು. ಮತದಾರರ ಪಟ್ಟಿಯಿಂದ ಯಾರೂ ಹೊರಗುಳಿಯದಂತೆ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ವಾರದ ಸಂತೆಗಳಲ್ಲಿ ಸ್ವೀಪ್ ಚಟುವಟಿಕೆ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದರು.

ಸಭೆಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಕೃಷ್ಣಪ್ಪ ಎಂ. ಇಟ್ಟಂಗಿ, ಸುನೀಲ್ ಸಿ. ಹೆಸರೂರು, ಮಹಬೂಬ್ ಪಾಶಾ ಜಮಖಾನದಾರ, ಚುನಾವಣಾ ಶಾಖೆಯ ಶಿರಸ್ತೇದಾರ ಪಿ. ನಾಗರಾಜ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಸಿಗೆಗೆ ನೀರು ಆಪೋಶನ: ಜಲಕ್ಷಾಮ ಭೀತಿ !
371ಜೆ ಹೋರಾಟಕ್ಕೆ ಕಾಲೇಜು ವಿದ್ಯಾರ್ಥಿಗಳ ಅಭೂತಪೂರ್ವ ಬೆಂಬಲ