ಗ್ರಾಹಕರ ಕಾನೂನು ಅರಿವು ಎಲ್ಲರಿಗೂ ಅವಶ್ಯ

KannadaprabhaNewsNetwork | Published : Dec 25, 2024 12:51 AM

ಸಾರಾಂಶ

ಚಾಮರಾಜನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆಡಿಪಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ರಾಷ್ಟ್ರೀಯ ಗ್ರಾಹಕ ದಿನಾಚರಣೆ’ ಕಾರ್ಯಕ್ರಮವನ್ನು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎಚ್.ಎನ್.ಶ್ರೀನಿಧಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ದೈನಂದಿನ ಜೀವನದಲ್ಲಿ ಪ್ರತಿಯೊಬ್ಬರು ಗ್ರಾಹಕರೇ ಆಗಿರುವುದರಿಂದ ಗ್ರಾಹಕರ ಹಕ್ಕುಗಳ ಅರಿವು ಎಲ್ಲರಿಗೂ ಅವಶ್ಯವಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎಚ್.ಎನ್.ಶ್ರೀನಿಧಿ ಅವರು ತಿಳಿಸಿದರು.ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹಾಗೂ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ರಾಷ್ಟ್ರೀಯ ಗ್ರಾಹಕ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಹಕರು ವಸ್ತುವನ್ನು ಖರೀದಿಸಿದಾಗ ರಶೀದಿಯನ್ನು ತೆಗೆದುಕೊಳ್ಳಬೇಕು. ಬಳಿಕ ಖರೀದಿಸಿದ ವಸ್ತು ಗುಣಮಟ್ಟದಿಂದ ಕೂಡಿಲ್ಲವೆಂಬುದು ಕಂಡುಬಂದಾಗ ಅಥವಾ ಯಾವುದಾದರೂ ನಷ್ಟ ಹಾಗೂ ತೊಂದರೆ ಉಂಟಾದಲ್ಲಿ ರಶೀದಿ ಮೂಲಕ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಪರಿಹಾರ ಪಡೆಯಬಹುದಾಗಿದೆ. ಯಾವುದೇ ವಸ್ತುವನ್ನು ಖರೀದಿಸುವಾಗ ಅದರ ಗುಣಮಟ್ಟವನ್ನು ಸೂಕ್ಷ್ಮವಾಗಿ ಪರಿಶೀಲಿಸಿ ತೆಗೆದುಕೊಳ್ಳಿ ಎಂದು ಸಲಹೆ ಮಾಡಿದರು.

ಗ್ರಾಹಕರಿಗೆ ಹೆಚ್ಚಿನ ಅರಿವು ಮೂಡಿಸಲು ಹಾಗೂ ಗ್ರಾಹಕರ ಕುಂದುಕೊರತೆಗಳನ್ನು ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ಗ್ರಾಹಕ ಆಯೋಗಗಳಿಂದ ಪರಿಹರಿಸಿಕೊಳ್ಳುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಗ್ರಾಹಕರ ದಿನವನ್ನು ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ವಸ್ತುವನ್ನು ಖರೀದಿಸಿದಾಗ ತಪ್ಪದೆ ಸಂಬಂಧಿಸಿದ ರಶೀದಿ ಪಡೆದುಕೊಳ್ಳಬೇಕು. ಅದೇ ರೀತಿ ಇತ್ತೀಚಿಗೆ ಹೆಚ್ಚುತ್ತಿರುವ ಆನ್‌ಲೈನ್ ಖರೀದಿ ವ್ಯವಹಾರಗಳ ಬಗ್ಗೆಯೂ ಎಚ್ಚರವಹಿಸುವಂತೆ ಶ್ರೀನಿಧಿ ಅವರು ತಿಳಿಸಿದರು.

ಸಿವಿಲ್ ನ್ಯಾಯಾಧೀಶ ಈಶ್ವರ್ ಅವರು ಮಾತನಾಡಿ, ಕಾನೂನಿನ ಅಡಿಯಲ್ಲಿ ಎಲ್ಲರೂ ಸಮಾನರು. ಯಾರೇ ತಪ್ಪು ಮಾಡಿದರೂ ಕ್ಷಮೆ ಇರುವುದಿಲ್ಲ. ಸಂವಿಧಾನವು ನಮಗೆ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ನಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಹಾಗೂ ಮತ್ತಷ್ಟು ಜನರಿಗೆ ಗ್ರಾಹಕರ ಕಾನೂನುಗಳ ಕುರಿತು ಅರಿವು ಮೂಡಿಸಲು ಕಾನೂನನ್ನು ಕನಿಷ್ಠ ಮಟ್ಟಿಗೆ ತಿಳಿದುಕೊಂಡಿರಬೇಕು ಎಂದರು.ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಹಿಳಾ ಸದಸ್ಯರಾದ ಭಾರತಿ ಅವರು ಮಾತನಾಡಿ, ಪ್ರಕರಣಗಳಲ್ಲಿ ಸತ್ಯತೆ ಇದ್ದರೆ ಮಾತ್ರ ಆಯೋಗದ ಮುಂದೆ ದೂರು ಸಲ್ಲಿಸಬೇಕು. ಪ್ರಸ್ತುತ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಕೋರ್ಸು ವ್ಯಾಸಂಗ ಮಾಡಿದರೆ ಕೆಲಸ ಕೊಡಿಸುವುದಾಗಿ ಮೋಸ ಮಾಡುವುದು, ಅಂಕಪಟ್ಟಿ ಕೊಡಲು ತಡ ಮಾಡುವುದು, ಪದವಿ ಪ್ರಮಾಣ ಪತ್ರ ನೀಡದೆ ತಡ ಮಾಡಿ ತೊಂದರೆ ನೀಡಿದರೆ ಗ್ರಾಹಕರ ನ್ಯಾಯಾಲಯದಲ್ಲಿ ದೂರು ದಾಖಲಿಸಬಹುದು ಎಂದರು.

ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಎನ್ .ಶ್ರೀಧರ್ ಅವರು ತೂಕ ಮತ್ತು ಅಳತೆ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದರು. ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಯೋಗಾನಂದ ಅವರು ಮಾತನಾಡಿ, ಪ್ರಾಸ್ತಾವಿಕವಾಗಿ ಮಾತನಾಡಿ ಭಾರತದಲ್ಲಿ 1986 ಡಿ. 24ರಂದು ಗ್ರಾಹಕರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಲಾಯಿತು. ಪ್ರತಿವರ್ಷ ಡಿ. 24ರಂದು ರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು. ಜಿಪಂ ಉಪ ಕಾರ್ಯದರ್ಶಿ ಪಿ.ಲಕ್ಷ್ಮಿ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಶಿವರಾಜಮ್ಮ ಇತರರು ಉಪಸ್ಥಿತರಿದ್ದರು.

Share this article