ಗದಗ-ಬೆಟಗೇರಿ ಬಂದ್ ಭಾಗಶಃ ಯಶಸ್ವಿ

KannadaprabhaNewsNetwork |  
Published : Dec 25, 2024, 12:51 AM IST
ಬೆಳಿಗ್ಗೆಯೇ ಮುಳಗುಂದ ನಾಕಾ ಬಳಿ ಧರಣಿ ಪ್ರಾರಂಭಿಸಿ ಪ್ರತಿಭಟನಾಕಾರರು ರಸ್ತೆ ಬಂದ್ ಮಾಡಿ. ಕೇಂದ್ರ ಸರ್ಕಾರ, ಸಚಿವ ಶಾ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. | Kannada Prabha

ಸಾರಾಂಶ

ಅವಳಿ ನಗರದ ಎಲ್ಲ ಶಾಲಾ ಕಾಲೇಜುಗಳಿಗೆ ಮುಂಜಾನೆ ರಜೆ ಘೋಷಿಸಲಾಯಿತು. ಇದರಿಂದ ಅದಾಗಲೇ ಶಾಲೆಗೆ ಬಂದಿದ್ದ ಮಕ್ಕಳು ಮನೆಗೆ ಹೋಗಲು ಪರದಾಡಬೇಕಾಯಿತು

ಗದಗ: ಸಂವಿಧಾನ‌ ಶಿಲ್ಪಿ ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆ ಖಂಡಿಸಿ ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಕರೆ ನೀಡಿದ್ದ ಗದಗ ಬಂದ್ ಭಾಗಶಃ ಯಶಸ್ವಿಯಾಯಿತು.

ದಸಂಸ ಒಕ್ಕೂಟ, ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಜಂಟಿ ವೇದಿಕೆಯಿಂದ ಕರೆ ನೀಡಲಾಗಿದ್ದ ಬಂದ್ ಗೆ ಕನ್ನಡ ಪರ ಸಂಘಟನೆಗಳು ಸೇರಿದಂತೆ 10ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ ನೀಡಿದ್ದು, ಬೆಳಗ್ಗೆಯಿಂದಲೇ ಗದಗ-ಬೆಟಗೇರಿ ಅವಳಿ ನಗರ ಸ್ತಬ್ಧಗೊಂಡಿತ್ತು. ಮಧ್ಯಾಹ್ನದ ವರೆಗೂ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್‌ ಆಗಿದ್ದವು.

ಅವಳಿ ನಗರದ ಎಲ್ಲ ಶಾಲಾ ಕಾಲೇಜುಗಳಿಗೆ ಮುಂಜಾನೆ ರಜೆ ಘೋಷಿಸಲಾಯಿತು. ಇದರಿಂದ ಅದಾಗಲೇ ಶಾಲೆಗೆ ಬಂದಿದ್ದ ಮಕ್ಕಳು ಮನೆಗೆ ಹೋಗಲು ಪರದಾಡಬೇಕಾಯಿತು. ವಾಹನ ಸಂಚಾರ ಸಹ ಬಂದಾಗಿದ್ದರಿಂದ ಪಾಲಕರು ಮಕ್ಕಳನ್ನು ಮನೆಗೆ ಕರೆದೊಯ್ಯುವ ದೃಶ್ಯ ಕಂಡು ಬಂತು.

ಒಕ್ಕೂಟದಿಂದ ಬೆಳಗ್ಗೆಯೇ ಮುಳಗುಂದ ನಾಕಾ ಬಳಿ ಧರಣಿ ಪ್ರಾರಂಭಿಸಿ ಪ್ರತಿಭಟನಾಕಾರರು ರಸ್ತೆ ಬಂದ್ ಮಾಡಿ ಕೇಂದ್ರ ಸರ್ಕಾರ, ಸಚಿವ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಂಬೇಡ್ಕರ್...ಅಂಬೇಡ್ಕರ್ ಘೋಷಣೆ ಕೂಗಿ ಕೇಂದ್ರ ಸಚಿವ ಅಮಿತ್ ಶಾ ವಜಾಕ್ಕೆ ಒತ್ತಾಯಿಸಿದರು.

ಇದರೊಟ್ಟಿಗೆ ಗದಗ-ಬೆಟಗೇರಿ ನಗರದ ಪ್ರಮುಖ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಸಿದ ಸಂಘಟನೆಯ ಪ್ರಮುಖರು ಅಮಿತ್ ಶಾ ರಾಜೀನಾಮೆ ನೀಡುವರೆಗೂ ನಾವು ಹೋರಾಟ ಮಾಡುತ್ತೇವೆ. ಇಂದು ಗದಗನಲ್ಲಿ ಸಾಂಕೇತಿಕ ಹೋರಾಟವಾಗಿದೆ. ಮುಂದೆ ಉಗ್ರ ಹೋರಾಟ ಮಾಡುತ್ತೇವೆ ಕರ್ನಾಟಕ ಬಂದ್ ಮಾಡುತ್ತೇವೆ ಎಂದು ಎಚ್ಚರಿಕೆಯ ಘೋಷಣೆ ಕೂಗಿದರು.

ಆಕ್ರೋಶ:

ಪ್ರತಿಭಟನಾ ನಿರತರು ಅಮಿತ್ ಶಾ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಬೆಂಕಿ ಇಟ್ಟು‌ ಆಕ್ರೋಶ ವ್ಯಕ್ತಪಡಿಸಿದರು.

ಕೆಲವು ಯುವಕರು ಅಮಿತ್ ಶಾ ಭಾವಚಿತ್ರ ಹರಿದು ಬಾಯಿ ಬಡೆದುಕೊಂಡು ಬೆಂಕಿ‌ ಹಚ್ಚಿ ಸುಡಲು‌ ಮುಂದಾದರು.

ಈ ವೇಳೆ ಮುಖಂಡರನ್ನು ತಡೆಯಲು ಪೊಲೀಸರು ಮುಂದಾದರೂ ಕೆಲವರು ತಪ್ಪಿಸಿ ಭಾವಚಿತ್ರ ಸುಟ್ಟ ಆಕ್ರೋಶ ಹೊರಹಾಕಿದರು.

ಮುತ್ತಿಗೆ ಯತ್ನ

ಪ್ರತಿಭಟನೆ ನಡೆಯುತ್ತಿದ್ದ ವೇಳೆಯಲ್ಲಿ ಬಸ್ ಸಂಚಾರ ನಡೆಯುತ್ತಿರುವುದನ್ನು ಗಮನಿಸಿದ ಹೋರಾಟಗಾರರು ಡಿಪೋ ಮುತ್ತಿಗೆ ಹಾಕಲು ಯತ್ನಿಸಿ ಬಸ್ ಸಂಚಾರಕ್ಕೆ ಅಣಿಯಾಗುತ್ತಿದ್ದ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹೋರಾಟಗಾರರು ಮುತ್ತಿಗೆ ಹಾಕುತ್ತಿದ್ದಂತೆ ಸಿಬ್ಬಂದಿಗಳು ಡಿಪೋ ಗೇಟ್ ಬಂದ್ ಮಾಡಿಸಿದರು.

ವಿದ್ಯಾರ್ಥಿನಿಗೆ ಗಾಯ:

ಪ್ರತಿಭಟನೆಯಿಂದ ವಿದ್ಯಾರ್ಥಿಗಳನ್ನು ಕರೆದುಕೊಂಡು ಶಾಲೆಗೆ ಹೊರಟಿದ್ದ ಬೈಕ್ ಗೆ ಸ್ಕೂಲ್ ವ್ಯಾನ್ ಡಿಕ್ಕಿಯಾಗಿ ವಿದ್ಯಾರ್ಥಿನಿಯೋರ್ವಳು ಗಾಯಗೊಂಡಳು. ಪ್ರತಿಭಟನೆ ಹಿನ್ನೆಲೆ ಸರ್ಕಲ್ ನ ಕಿರಿದಾದ ರಸ್ತೆಯಲ್ಲಿ ಹೊರಟಿದ್ದ ವೇಳೆ ಈ ಘಟನೆ ಜರುಗಿದೆ. ಬೈಕ್ ಮೇಲಿದ್ದ ವಿದ್ಯಾರ್ಥಿನಿ ಕಾಲಿಗೆ ತೀವ್ರ ಪೆಟ್ಟಾಗಿದ್ದು ಪ್ರತಿಭಟನಾ ನಿರತರೇ ವಿದ್ಯಾರ್ಥಿನಿಗೆ ಆರೈಕೆ ಮಾಡಿ ಆಸ್ಪತ್ರೆಗೆ ಕಳಿಸಿದರು.

ಒಬ್ಬ ಎಎಸ್ಪಿ, ಮೂವರು ಡಿಎಸ್ ಪಿ ಸೇರಿದಂತೆ ಐದು ನೂರು ಸಿಬ್ಬಂದಿ ಬಂದೋಬಸ್ತ್‌ಗೆ ನೇಮಕ ಮಾಡಲಾಗಿತ್ತು.

ಎಂದು ಎಸ್ಪಿ ಬಿ.ಎಸ್. ನೇಮಗೌಡ್ರ ತಿಳಿಸಿದ್ದಾರೆ.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ