ಹಾವೇರಿ ನಗರದ ಸಿ.ಬಿ. ಕೊಳ್ಳಿ ಪಾಲಿಟೆಕ್ನಿಕ್‌ನಲ್ಲಿ ಇತ್ತೀಚೆಗೆ ವಿಶ್ವ ಗ್ರಾಹಕರ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.
ಹಾವೇರಿ: ದಿನನಿತ್ಯದ ಜೀವನದಲ್ಲಿ ಎಲ್ಲರೂ ಗ್ರಾಹಕರೆ, ಹಾಗಾಗಿ ಗ್ರಾಹಕರು ಜಾಗ್ರತರಾಗಬೇಕು ಹಾಗೂ ಪ್ರತಿ ಹಂತದಲ್ಲಿ ಎಚ್ಚರಿಕೆ ಇರಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಶೈಲಜಾ ಎಚ್.ವಿ. ಹೇಳಿದರು.
ನಗರದ ಸಿ.ಬಿ. ಕೊಳ್ಳಿ ಪಾಲಿಟೆಕ್ನಿಕ್‌ನಲ್ಲಿ ಇತ್ತೀಚೆಗೆ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ವಿಶ್ವ ಗ್ರಾಹಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಖರೀದಿಸಿದ ವಸ್ತುಗಳಲ್ಲಿ ಲೋಪ-ದೋಷ ಉಂಟಾದಾಗ ಏನು ಮಾಡಬೇಕು? ಎಲ್ಲಿಗೆ ಹೋಗಬೇಕು? ಎಂದು ತಿಳಿದುಕೊಳ್ಳಬೇಕು. ಆನ್‌ಲೈನ್ ಖರೀದಿಯಲ್ಲಿ ಬಹಳ ಮೋಸವಾಗುತ್ತಿದ್ದು, ನಾವು ಆಯ್ಕೆ ಮಾಡಿದ ವಸ್ತು ಬೇರೆ ಇರುತ್ತದೆ, ಅವರು ಕಳುಹಿಸುವ ವಸ್ತು ಬೇರೆ ಆಗಿರುತ್ತದೆ. ಇಂತಹ ಸಂದರ್ಭದಲ್ಲಿ ಸಂಬಂಧಪಟ್ಟ ದಾಖಲೆಗಳೊಂದಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸುವ ಮೂಲಕ ಪರಿಹಾರ ಪಡೆದುಕೊಳ್ಳಬಹುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಈಶ್ವರಪ್ಪ ಬಿ.ಎಸ್., ಮಾತನಾಡಿ, ಗ್ರಾಹಕರು ಡಿಜಿಟಲ್ ಹಣಕಾಸು ವ್ಯವಹಾರವನ್ನು ಬಹಳ ಜಾಗರೂಕತೆಯಿಂದ ಮಾಡಬೇಕು. ವಸ್ತುಗಳ ನಿಖರ ಬೆಲೆ, ಗುಣಮಟ್ಟ, ಎಕ್ಸ್‌ಪೈರಿ ದಿನಾಂಕ ಖಾತ್ರಿಪಡಿಸಿಕೊಂಡು ಖರೀದಿಸಬೇಕು. ಯಾವುದೇ ಸೇವೆ ಪಡೆದರೆ ಹಾಗೂ ವಸ್ತು ಖರೀದಿಸಿದರೆ ಕಡ್ಡಾಯವಾಗಿ ರಸೀದಿ ಪಡೆಯಬೇಕು. ಖರೀದಿಸಿದ ವಸ್ತುಗಳಲ್ಲಿ ಹಾಗೂ ಸೇವೆಯಲ್ಲಿ ದೋಷಗಳು ಕಂಡುಬಂದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿ ಪರಿಹಾರ ಪಡೆಯಬಹುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಗ್ರಾಹಕರ ಹಕ್ಕುಗಳ ಕುರಿತು ಸಂವಾದ ನಡೆಸಿದರು. ಉಪನ್ಯಾಸಕರಾಗಿ ಭಾಗವಹಿಸಿದ ಹಿರಿಯ ಸಹಾಯಕ ಕಾನೂನು ನೆರವು ಅಭಿರಕ್ಷಣಾ ವಕೀಲ ಎನ್.ಎನ್. ಡಿಳ್ಳೆಪ್ಪನವರ ಮಾತನಾಡಿ, ಆಧುನಿಕ ಸಮಾಜದಲ್ಲಿ ತಂತ್ರಜ್ಞಾನ ಬೆಳೆದಂತೆ ಆನ್‌ಲೈನ್ ಖರೀದಿ ಸಹ ಹೆಚ್ಚಾಗಿದ್ದು, ಗ್ರಾಹಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗ್ರಾಹಕರ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿದುಕೊಳ್ಳಬೇಕು. ನಾವು ಖರೀದಿಸುವ ವಸ್ತುಗಳಲ್ಲಿ ಗುಣಮಟ್ಟ, ಉತ್ಕೃಷ್ಟತೆ ಹಾಗೂ ಅಳತೆ, ತೂಕ ನೋಡಿ ಖರೀದಿಸಬೇಕು. ವಸ್ತುಗಳಲ್ಲಿ ಲೋಪ-ದೋಷಗಳು ಕಂಡುಬಂದಲ್ಲಿ ಪರಿಹಾರಕ್ಕೆ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಚ್.ಸಿ. ಸಿದ್ದನಗೌಡ್ರ ಹಾಗೂ ವಕೀಲ ಸುರೇಶ ಸಜ್ಜನರ ಅವರು ಗ್ರಾಹಕರ ಹಕ್ಕುಗಳ ಕುರಿತು ಮಾತನಾಡಿದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಉಮಾದೇವಿ ಎಸ್. ಹಿರೇಮಠ, ಪ್ರಾಂಶುಪಾಲ ಪ್ರದೀಪ ಗದ್ದಿಗೌಡರ, ಕಾನೂನು ಮಾಪನ ಶಾಸ್ತ್ರ ಇಲಾಖೆ ಸಿದ್ದಪ್ಪ ಪೂಜಾರಿ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ವಡ್ಡನಕಟ್ಟಿ ಇತರರು ಇದ್ದರು. ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಮಂಜುನಾಥ ಡಿ.ಜೆ. ಸ್ವಾಗತಿಸಿದರು. ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ನಿರ್ದೇಶಕ ಮಜೀದ್ ಎಸ್.ಎಚ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಜಾಹೀರಾತುಗಳಿಗೆ ಮರುಳಾಗಬೇಡಿ: ಇಂದು ವಿದ್ಯುನ್ಮಾನ ಮಾಧ್ಯಮಗಳಲ್ಲಿ ವಿವಿಧ ವಸ್ತುಗಳ ಜಾಹೀರಾತುಗಳನ್ನು ವೈಭವಿಕರಿಸಿ ತೋರಿಸಲಾಗುತ್ತದೆ. ಈ ಜಾಹೀರಾತುಗಳಿಗೆ ಮರುಳಾಗಿ ಸಾರ್ವಜನಿಕರು ವಸ್ತುಗಳನ್ನು ಖರೀದಿಸುತ್ತಾರೆ. ನಾವು ಖರೀದಿಸುವ ವಸ್ತು ಎಷ್ಟು ಗುಮಟ್ಟದಿಂದ ಕೂಡಿದೆ ಎಂದು ತಿಳಿದುಕೊಳ್ಳಬೇಕು. ಜಾಹೀರಾತುಗಳ ಮೋಡಿಗೆ ಮರುಳಾಗಬಾರದು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಈಶ್ವರಪ್ಪ ಬಿ.ಎಸ್., ಸಲಹೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.