ಧಾರವಾಡ: ಬಹುನಿರೀಕ್ಷಿತ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಮಾ. 18ರ ಬುಧವಾರದಿಂದ ಶುರುವಾಗಿದ್ದು, ಮೊದಲ ದಿನ ಕನ್ನಡ ಸೇರಿದಂತೆ ಮಾತೃಭಾಷೆಯ ಪರೀಕ್ಷೆಗಳು ಜಿಲ್ಲೆಯಲ್ಲಿ ಸುಸೂತ್ರವಾಗಿ ಜರುಗಿದವು.
ಮಾತೃಭಾಷೆಗೆ 28120 ವಿದ್ಯಾರ್ಥಿಗಳ ಪೈಕಿ 27868 ವಿದ್ಯಾರ್ಥಿಗಳು ಹಾಜರಿದ್ದು, 252 ವಿದ್ಯಾರ್ಥಿಗಳು ಗೈರು ಹಾಜರಿದ್ದರು. ಯಾವುದೇ ಕೇಂದ್ರದಲ್ಲಿ ನಕಲು ಪ್ರಕರಣಗಳು ಕಂಡು ಬಂದಿಲ್ಲ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮಾಹಿತಿ ನೀಡಿದರು. ಮಾ. 23ರ ಸೋಮವಾರ ವಿಜ್ಞಾನ ಪರೀಕ್ಷೆ ಜರುಗಲಿದೆ.
ವಿದ್ಯಾರ್ಥಿಗಳಿಗೆ ಶುಭ ಹಾರೈಕೆಕಳೆದ 12 ವರ್ಷಗಳಿಂದ ಎಸ್ಸೆಸ್ಸೆಲ್ಲಿ ಪರೀಕ್ಷೆಯ ಮೊದಲ ದಿನ ಇಲ್ಲಿಯ ಕೆ.ಇ. ಬೋರ್ಡ್ ಶಾಲೆಯಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಂಚಾಲಕ ವಿನಾಯಕ ಜೋಶಿ ಅವರ ನೇತೃತ್ವದಲ್ಲಿ ಶಿಕ್ಷಣ ತಜ್ಞರು ರೆಡ್ ಕಾರ್ಪೆಟ್ ಹಾಕಿ, ಗುಲಾಬಿ ಹೂ ನೀಡಿ, ಶೇಂಗಾ ಚಿಕ್ಕಿ ನೀಡುವ ಮೂಲಕ ಧೈರ್ಯ ತುಂಬುತ್ತಿದ್ದಾರೆ. ಈ ಬಾರಿಯೂ ಬೆಳಗ್ಗೆ 9ಕ್ಕೆ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಆತ್ಮೀಯವಾಗಿ ಸ್ವಾಗತಿಸಲಾಯಿತು. ವಿಶೇಷವಾಗಿ ಈ ಬಾರಿ ಜಿಲ್ಲಾಧಿಕಾರಿ ಸ್ನೇಹಲ್ ರಾಯಮಾನೆ, ಶಿಕ್ಷಣ ಇಲಾಖೆಯ ಎಸ್.ಎಸ್. ಕೆಳದಿಮಠ, ಎಸ್.ಎಂ. ಹುಡೇದಮನಿ ಆಗಮಿಸಿ ವಿದ್ಯಾರ್ಥಿಗಳಿಗೆ ಬೆಸ್ಟ್ ಆಪ್ ಲಕ್ ಹೇಳಿದರು.
ಮಳೆಯಿಂದ ಹಾನಿಯಾಗಿದ್ದ ಪರೀಕ್ಷಾ ಕೇಂದ್ರಕ್ಕೆ ಡಿಡಿಪಿಐ ಭೇಟಿ
ಕಲಘಟಗಿ: ವಿಪರೀತ ಮಳೆಯಿಂದ ತತ್ತರಿಸಿರುವ ಕಲಘಟಗಿಯಲ್ಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಡಿಡಿಪಿಐ ಎಸ್.ಎಸ್. ಕೆಳದಿಮಠ ಭೇಟಿ ನೀಡಿ ಪರಿಶೀಲಿಸಿದರು. ಮಳೆಯಿಂದಾಗಿ ಹಲವು ಶಾಲಾ ಕೊಠಡಿಗಳಿಗೆ ಹಾನಿಯಾಗಿದ್ದರೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾತ್ರ ಯಾವುದೇ ಸಮಸ್ಯೆಯಿಲ್ಲದೇ ನಡೆಯಿತು.ಪಟ್ಟಣದ ಹೊರವಲಯದ ಸೇಂಟ್ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಕೆಳದಿಮಠ, ಅಲ್ಲಿನ ಸ್ಥಿತಿಯ ಮಾಹಿತಿ ಪಡೆದರು. ವಿಪರೀತವಾಗಿ ಸುರಿದ ಆಲಿಕಲ್ಲು ಮಳೆಯಿಂದ ಶಾಲಾ ಕಟ್ಟಡಕ್ಕೆ ಹಾನಿಯಾಗಿವೆ. ವಿದ್ಯುತ್ ವ್ಯತ್ಯಯ ಇದ್ದರೂ ಬುಧವಾರ ನಡೆದ ಪ್ರಥಮ ಭಾಷೆಯ ಪರೀಕ್ಷೆ ಯಾವುದೇ ಗೊಂದಲವಿಲ್ಲದೆ ಸುಸೂತ್ರವಾಗಿ ನಡೆಯುತ್ತಿದೆ ಎಂದು ಶಿಕ್ಷಕರು ವಿವರಿಸಿದರು.ಸಂದರ್ಶನ ಸಮಯದಲ್ಲಿ ತಾಪಂ ಇಒ ಪರಶುರಾಮ ಸಾವಂತ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಸಜ್ಜನ, ಮುಖ್ಯ ಅಧೀಕ್ಷಕ ಕಿರಣಕುಮಾರ ಕೋರಿ, ಶಾಲೆಯ ಮುಖ್ಯೋಪಾಧ್ಯಾಯ ಫಾದರ್ ಜಾರ್ಜ್ ಮೋನೀಸ್, ಜಿಲ್ಲಾ ಅಕ್ಷರ ದಾಸೋಹ ನಿರ್ದೇಶಕ ರೂಪಾ ಪುರಮಕರ, ಬಗಡಗೇರಿ ಪ್ರೌಢಶಾಲೆಯ ಶಿಕ್ಷಕ ಎ.ಎಂ. ಶಿರಗುಪ್ಪಿ ಸೇರಿದಂತೆ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.