ಕಲುಷಿತ ನೀರು ಸೇವನೆ: ಮತ್ತೆ 7 ಜನರಿಗೆ ವಾಂತಿ-ಭೇದಿ

KannadaprabhaNewsNetwork |  
Published : Jun 18, 2025, 03:19 AM IST
ಹೂವಿನಹಡಗಲಿ ತಾಲೂಕಿನ ಮಾನ್ಯರ ಮಸಲವಾಡ ಗ್ರಾಮದಲ್ಲಿ ವಾಂತಿಭೇದಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊಳವೆ ಬಾವಿ ನೀರು ಬಂದ್‌ ಮಾಡಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗಿದೆ.ಮಾನ್ಯರ ಮಸಲವಾಡ ಗ್ರಾಮಕ್ಕೆ ಜಿಪಂ ಸಿಇಒ ಮನೆಗಳಿಗೆ ಭೇಟಿ ನೀಡಿ ಜನರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮತ್ತು ಕುಡಿವ ನೀರಿನ ಬಗ್ಗೆ ಮಾಹಿತಿ ನೀಡಿದರು. | Kannada Prabha

ಸಾರಾಂಶ

ತಾಲೂಕಿನ ಮಾನ್ಯರ ಮಸಲವಾಡ ಗ್ರಾಮದಲ್ಲಿ ಮತ್ತೆ 7 ಜನ ವಾಂತಿ ಭೇದಿಯಿಂದ ಬಳಲುತ್ತಿದ್ದು, 4 ಜನರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮೂವರನ್ನು ಪಟ್ಟಣದ 100 ಹಾಸಿಗೆಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆಸ್ಪತ್ರೆಗೆ ದಾಖಲು । ಕೊಳವೆ ಬಾವಿ ಬಂದ್‌ ಮಾಡಿ ಟ್ಯಾಂಕರ್‌ನಿಂದ ನೀರು

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ತಾಲೂಕಿನ ಮಾನ್ಯರ ಮಸಲವಾಡ ಗ್ರಾಮದಲ್ಲಿ ಮತ್ತೆ 7 ಜನ ವಾಂತಿ ಭೇದಿಯಿಂದ ಬಳಲುತ್ತಿದ್ದು, 4 ಜನರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮೂವರನ್ನು ಪಟ್ಟಣದ 100 ಹಾಸಿಗೆಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗ್ರಾಮದ ವಡ್ಡರಗೇರಿ, ಕುರುಬಗೇರಿ ಪ್ರದೇಶಕ್ಕೆ ಪೂರೈಕೆಯಾಗುತ್ತಿದ್ದ ಕೊಳವೆ ಬಾವಿ ಕುಡಿವ ನೀರಿನ ಪೈಪ್‌ಲೈನ್‌ನಲ್ಲಿ ಗ್ರಾಮದ ಚರಂಡಿ ಮಳೆಯ ಕಲುಷಿತ ನೀರು ಮಿಶ್ರಣವಾಗಿತ್ತು. ಈ ನೀರು ಕುಡಿದಿದ್ದ 27ಕ್ಕೂ ಅಧಿಕ ಜನರಿಗೆ ವಾಂತಿಭೇದಿ ಕಾಣಿಸಿಕೊಂಡಿತ್ತು. ಅಸ್ವಸ್ಥರು ದಾವಣಗೆರೆ, ಗದಗ, ಹರಪನಹಳ್ಳಿ, ಹೂವಿನಹಡಗಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ವೃದ್ಧೆ ಅಮಲಮ್ಮ ಅವರನ್ನು ವೈದ್ಯರು ಡಯಾಲಿಸಿಸ್‌ಗೆ ಶಿಫಾರಸು ಮಾಡಿದ್ದು, ಉಳಿದವರೆಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗ್ರಾಮದಲ್ಲಿ ವಾಂತಿಭೇದಿ ನಿಯಂತ್ರಣಕ್ಕೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಕೊಳವೆಬಾವಿ ನೀರು ಪೂರೈಕೆ ಸಂಪೂರ್ಣ ಬಂದ್‌ ಮಾಡಿದ್ದು, ಶುದ್ಧೀಕರಿಸಿದ ನೀರನ್ನು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ, ಮನೆಯಲ್ಲಿ ಸಂಗ್ರಹಿಸಿದ ನೀರನ್ನು ಖಾಲಿ ಮಾಡಿಸಿದ್ದಾರೆ.

ಗ್ರಾಮದಲ್ಲಿ ಕುಡಿವ ನೀರು ನೈರ್ಮಲ್ಯ ಕಾಪಾಡಲು ಕ್ರಮ ಕೈಗೊಂಡಿದ್ದೇವೆ. ಮುಂಜಾಗ್ರತಾ ಕ್ರಮವಾಗಿ ಎಲ್ಲ ಕೊಳವೆಬಾವಿ ಸ್ಥಗಿತಗೊಳಿಸಿ, ನಾಲ್ಕು ಟ್ಯಾಂಕರ್‌ಗಳಿಂದ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ನೀರಿನ ಮಾದರಿ ಪರೀಕ್ಷಾ ವರದಿ ಬಂದ ನಂತರ ಯೋಗ್ಯವಿರುವ ಕೊಳವೆ ಬಾವಿಗಳಿಂದ ಮಾತ್ರ ನೀರು ಒದಗಿಸುತ್ತೇವೆ. ಸದ್ಯ ವಾಂತಿಭೇದಿ ನಿಯಂತ್ರಣಕ್ಕೆ ಬರುತ್ತಿದೆ ಎಂದು ತಾಪಂ ಇಒ ಎಂ.ಉಮೇಶ್ ಹೇಳಿದರು.

ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಷಣ್ಮುಖನಾಯ್ಕ, ತಾಲೂಕು ಆರೋಗ್ಯಾಧಿಕಾರಿ ಡಾ. ಸಪ್ನಾ ಕಟ್ಟಿ ಮನೆಗಳಿಗೆ ಭೇಟಿ ನೀಡಿ, ಜನರ ಆರೋಗ್ಯ ವಿಚಾರಿಸುತ್ತಿದ್ದಾರೆ. ಪ್ರತಿ ಮನೆಗೂ ಒಆರ್‌ಎಸ್ ಪಾಕೀಟ್‌ಗಳನ್ನು ವಿತರಿಸಿದ್ದಾರೆ. ವಾಂತಿಭೇದಿ, ಜ್ವರದ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವಂತೆ ತಿಳಿಸಿದ್ದಾರೆ.

ಗ್ರಾಮಕ್ಕೆ ಭೇಟಿ ನೀಡಿದ ಜಿಪಂ ಸಿಇಒ ನೊಂಗ್ಜಾಯ್ ಅಕ್ರಂ ಪಾಷಾ, ಗ್ರಾಮದಲ್ಲಿ ನಡೆಯುತ್ತಿರುವ ಜಲ ಜೀವನ್‌ ಮಿಷನ್‌ ಕಾಮಗಾರಿಯನ್ನು ತಿಂಗಳೊಳಗೆ ಪೂರ್ಣಗೊಳಿಸುವಂತೆ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ದೀಪಾಗೆ ತಾಕೀತು ಮಾಡಿದರು.

ಆರೋಗ್ಯ ಇಲಾಖೆ, ಗ್ರಾಪಂ ಸಮನ್ವಯದೊಂದಿಗೆ ಕೆಲಸ ಮಾಡಿ ವಾಂತಿಭೇದಿ ನಿಯಂತ್ರಿಸಬೇಕು. ಅಸ್ವಸ್ಥರನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿಕೊಂಡು ಸೂಕ್ತ ಚಿಕಿತ್ಸೆ ನೀಡಬೇಕೆಂದು ಸೂಚನೆ ನೀಡಿದ್ದಾರೆ.

ತಾಪಂ ಇಒ ಎಂ.ಉಮೇಶ, ಎಇಇ ಅಂಬೇಡ್ಕರ್ ಸನಗುಂದ, ಪಿಡಿಒ ಮಹ್ಮದ್ ರಫಿ ಸೇರಿದಂತೆ ಇತರರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ