ನೊರೆಯುಕ್ತ ನೀರು ಕುಡಿದು ಬದುಕಿದ್ದಾರೆ ಅಫಜಲ್ಪುರದ ಜನ

KannadaprabhaNewsNetwork |  
Published : May 25, 2024, 12:54 AM IST
ಅಫಜಲ್ಪುರ ಪಟ್ಟಣಕ್ಕೆ ಸರಬರಾಜು ಆಗುತ್ತಿರುವ ನೊರೆಯುಕ್ತ ಕಲುಷಿತ ನೀರು. | Kannada Prabha

ಸಾರಾಂಶ

ಅಫಜಲ್ಪುರ ಪಟ್ಟಣದ 23 ವಾರ್ಡ್‌ಗಳ ಸುಮಾರು 30 ಸಾವಿರ ಜನರ ಪೈಕಿ ಬಹುತೇಕರು ಪುರಸಭೆಯವರು ಸರಬರಾಜು ಮಾಡುವ ಫಿಲ್ಟರ್ ಆಗದ ನೊರೆಯುಕ್ತ, ದುರ್ನಾತ ಬೀರುವ ಕಲುಷಿತ ನೀರು ಕುಡಿದು ಬದುಕುತ್ತಿದ್ದಾರೆ.

ರಾಹುಲ್ ಜೀ ದೊಡ್ಮನಿ

ಕನ್ನಡಪ್ರಭ ವಾರ್ತೆ ಚವಡಾಪುರ

ಶುದ್ಧ ಕುಡಿವ ನೀರು ಜನರ ಹಕ್ಕು. ಆದರೆ, ಅಫಜಲ್ಪುರ ಪಟ್ಟಣದ 23 ವಾರ್ಡ್‌ಗಳ ಸುಮಾರು 30 ಸಾವಿರ ಜನರ ಪೈಕಿ ಬಹುತೇಕರು ಪುರಸಭೆಯವರು ಸರಬರಾಜು ಮಾಡುವ ಫಿಲ್ಟರ್ ಆಗದ ನೊರೆಯುಕ್ತ, ದುರ್ನಾತ ಬೀರುವ ಕಲುಷಿತ ನೀರು ಕುಡಿದು ಬದುಕುತ್ತಿದ್ದಾರೆ.

2010ರಲ್ಲಿ 5.41 ಕೋಟಿ ವೆಚ್ಚದ ಫಿಲ್ಟರ್ ಬೆಡ್ ನಿರ್ಮಾಣ: 1997ರಲ್ಲಿ ಇದ್ದ ಫಿಲ್ಟರ್ ಬೆಡ್ ತೆರವುಗೊಳಿಸಿ 2010ರಲ್ಲಿ 5.41 ಕೋಟಿ ವೆಚ್ಚದಲ್ಲಿ ಹೊಸ ಫಿಲ್ಟರ್ ಬೆಡ್ ಅಳವಡಿಕೆ ಮಾಡಲಾಗಿತ್ತು. ಆದರೆ 2010ರಿಂದ ಇಲ್ಲಿಯತನಕ ಅದರಲ್ಲಿ ಒಂದು ಹನಿ ನೀರು ಶುದ್ದಿಕರಣಗೊಂಡು ಜನರ ಮನೆಗಳಿಗೆ ತಲುಪಿಲ್ಲ ಎನ್ನುವುದೇ ವಿಪರ್ಯಾಸದ ಸಂಗತಿ.

ನೀರು ಸರಬರಾಜು ಘಟಕ ನಿರ್ಮಾಣ ಹಂತದಲ್ಲಿ: ₹5.41 ಕೋಟಿ ವೆಚ್ಚದ ನೀರು ಶುದ್ಧೀಕರಣ ಘಟಕದಿಂದ ವೇಗವಾಗಿ ಬೆಳೆಯುತ್ತಿರುವ ಅಫಜಲ್ಪುರ ಪಟ್ಟಣದ ಜನರಿಗೆ ಸಮರ್ಪಕವಾಗಿ ನೀರು ಶುದ್ಧೀಕರಿಸಿ ಸರಬರಾಜು ಮಾಡಲಾಗುವುದಿಲ್ಲ ಎಂದು ಮತ್ತೆ ಹೊಸದಾಗಿ ₹66 ಕೋಟಿ ವೆಚ್ಚದಲ್ಲಿ ಭೀಮಾ ನದಿಯ ನೀರನ್ನು ಶೇ.100ರಷ್ಟು ಶುದ್ಧೀಕರಿಸಿ ಸರಬರಾಜು ಮಾಡುವ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಅನುಷ್ಠಾನದ ಜವಾಬ್ದಾರಿ ಹೊತ್ತವರು ಹೇಳುವ ಪ್ರಕಾರ ಪಟ್ಟಣದ 23 ವಾರ್ಡ್‌ಗಳಲ್ಲಿ 4 ಸಾವಿರದಷ್ಟು ಮನೆಗಳಿಗೆ ನಲ್ಲಿಗಳ ಸಂಪರ್ಕ ಮಾಡಿಸಲಾಗಿದೆ. ಫಿಲ್ಟರ್ ಯಂತ್ರ ಟೆಂಡರ್ ಹಂತದಲ್ಲಿದೆ, ಟೆಂಡರ್ ಆದ ಬಳಿಕ ಯಂತ್ರ ಅಳವಡಿಸಿ ನೀರು ಶುದ್ದಿಕರಿಸಿ ಸರಬರಾಜು ಮಾಡಲಾಗುತ್ತದೆ ಎಂದು ಹೇಳುತ್ತಾರೆ. ಆದರೆ ಕಾಮಗಾರಿಯ ಮಾಹಿತಿ ಮಾತ್ರ ಯಾರೊಬ್ಬರು ಬಾಯಿ ಬಿಡುತ್ತಿಲ್ಲ ಎನ್ನುವುದೇ ಸೋಜಿಗದ ಸಂಗತಿಯಾಗಿದೆ.

ರೋಗಭೀತಿಯಲ್ಲಿ ಜನ: ದುರ್ನಾತ ಬೀರುವ ಕಲುಷಿತ ನೀರನ್ನು ಯಾವ ಪ್ರಾಣಿಗಳು ಕುಡಿಯುವುದಿಲ್ಲ. ಇನ್ನೂ ಮನುಷ್ಯರು ಕುಡಿದು ಜೀವಿಸುತ್ತಿದ್ದಾರೆ. ಸಾಮಾನ್ಯವಾಗಿ ಫೀಲ್ಟರ್ ಆಗದ ಅಶುದ್ದ ನೀರು ಕುಡಿದರೆ ಕರುಳಿನ ಸಮಸ್ಯಗಳು, ಹೊಟ್ಟೆಯ ಸಮಸ್ಯೆ ಸೇರಿ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಆದರೆ ಇಂತಹ ನೊರೆಯುಕ್ತ, ದುರ್ನಾತ ಬೀರುವ ಕಲುಷಿತ ನೀರು ಕುಡಿದ ಮೇಲೆ ಜನರ ಆರೋಗ್ಯದ ಮೇಲೆ ಏನೇನು ದುಷ್ಪರಿಣಾಮಗಳಾಗಬೇಕು ಅದೆಲ್ಲವೂ ಆಗುತ್ತಿದೆ. ಅಫಜಲ್ಪುರ ಪಟ್ಟಣದಲ್ಲಿ ಬಹಳಷ್ಟು ಜನರಲ್ಲಿ ಕಾಲರಾ, ವಾಂತಿ, ಭೇದಿ(ಗ್ಯಾಸ್ಟ್ರೋ ಆಂಟರಾಯಿಟಿಸ್) ಸಮಸ್ಯೆಗಳು ಕಾಣಿಸುತ್ತಿದ್ದು ಆಸ್ಪತ್ರೆಗೆಳಿಗೆ ಎಡತಾಕುತ್ತಿದ್ದಾರೆ. 46 ಡಿಗ್ರಿ ಸುಡು ಬಿಸಿಲಿನಲ್ಲಿ ದೇಹಕ್ಕೆ ನೀರಿನಂಶ ಸಿಕ್ಕರೆ ಸಾಕೆನ್ನುವ ಕಾರಣಕ್ಕೆ ದುರ್ನಾತ ಬೀರುವ ನೀರು ಕುಡಿದು ಸಹಿಸಿಕೊಂಡ ಜನರಿಗೆ ಈಗ ಮಳೆಗಾಲ ಶುರುವಾಗುತ್ತಿದ್ದು ದುರ್ನಾತ ಬೀರುವ ಕಲುಷಿತ ನೀರು ಗಂಟಲಿಗೆ ಇಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ. ಭೀಕರ ಬರಗಾಲ ಹಿನ್ನೆಲೆ ಕಳೆದ ಐದು ತಿಂಗಳಿಂದ ಸೊನ್ನ ಬ್ಯಾರೇಜ್‌ನಿಂದ 015 ಟಿಎಂಸಿ ನೀರನ್ನು ಕುಡಿಯುವುದಕ್ಕಾಗಿ ಅಫಜಲ್ಪುರ ಪಟ್ಟಣಕ್ಕೆ ಹರಿಸಲಾಗುತ್ತಿದೆ. ಬ್ಯಾರೇಜ್‌ನಲ್ಲೂ ನೀರಿನ ಲಭ್ಯತೆ ತೀರಾ ಕಮ್ಮಿ ಇರುವುದರಿಂದ ನಿಂತ ನೀರು ಕಲುಷಿತವಾಗಿದೆ. ಶುದ್ಧೀಕರಿಸಿ ಜನರಿಗೆ ಸರಬರಾಜು ಮಾಡುವುದು ಪುರಸಭೆಯವರ ಕೆಲಸ.

- ಸಂತೋಷ ಸಜ್ಜನ್ , ಕೆಎನ್‌ಎನ್‌ಎಲ್‌ ಅಧಿಕಾರಿ

ಪುರಸಭೆಯವರು ಈಗ ಸರಬರಾಜು ಮಾಡುತ್ತಿರುವ ನೀರಲ್ಲಿ ಸ್ನಾನ ಮಾಡಿದರೆ ಮೈಗೆಲ್ಲಾ ತುರಿಕೆ ಬರುತ್ತಿದೆ. ದುರ್ನಾತ ಬೀರುವ ನೊರೆಯುಕ್ತ ನೀರನ್ನು ಕುಡಿದು ಜನ ಬದುಕುವುದಾದರೂ ಹೇಗೆ? ಇಷ್ಟು ಗಲೀಜಾದ ನೀರನ್ನು ಯಾರು ಶೌಚಕ್ಕೂ ಬಳಕೆ ಮಾಡುವುದಿಲ್ಲ. ಅಂತಹ ನೀರನ್ನು ನಾವು ಕುಡಿದು ಜೀವಿಸುತ್ತಿದ್ದೇವೆ. ಇನ್ನೂ ಮುಂದೆ ಪುರಸಭೆಯವರು ನೀರು ಸರಬರಾಜು ಮಾಡುವುದನ್ನೇ ನಿಲ್ಲಿಸಲಿ, ನಾವು ಹೇಗೋ ನೀರಿದ್ದಲ್ಲಿಂದ ತಂದು ಜೀವನ ಸಾಗಿಸುತ್ತೇವೆ.

- ಗುರುಶಾಂತಪ್ಪ ಗುಣಾರಿ, ಸಿದ್ದಪ್ಪ ಪೈಲ್ವಾನ, ಪಟ್ಟಣದ ನಿವಾಸಿಗಳು

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?