ವಿಡಿಯೋ ಮಾಡಿ ಟ್ರೋಲ್ ಮಾಡಿದ್ದರಿಂದ ಮಾನಸಿಕವಾಗಿ ನೊಂದ ಶಾಹಿಲ್ ಗುರುವಾರ ಸಂಜೆ ಮನೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ವಿನೂತನ ಶೈಲಿಯಲ್ಲಿ ಪ್ಯಾಂಟ್ ಧರಿಸಿ ಮಾರುಕಟ್ಟೆಗೆ ಬಂದ ಯುವಕನನ್ನು ಮೂರು ಜನರ ಪುಂಡರ ಗುಂಪು ತಡೆದು ನಿಲ್ಲಿಸಿ ಆತನ ಎರಡು ಕೈಗಳನ್ನೂ ಹಿಂದಕ್ಕೆ ಲಾಕ್ ಮಾಡಿ ಹಿಡಿದು, ಪ್ಯಾಂಟ್‌ಗೆ ಗೋಣಿಚೀಲ ಹೊಲಿಯುವ ದಪ್ಪಸೂಜಿಯಿಂದ ಹೊಲಿದು, ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಬಳಿಕ ಈ ವಿಡಿಯೋ ನೋಡಿದ ಯುವಕ ಮನನೊಂದು ಸಂಜೆ ವೇಳೆಗೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗುರುವಾರ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಪಣಕಜೆ ನಿವಾಸಿ ಮುಹಮ್ಮದ್ ಹಾಯಿಫ್ ಎಂಬವರ ಪುತ್ರ ಶಾಹಿಲ್ (21) ಎಂಬಾತ ಜೀವನ್ಮಣರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಶಾಹಿಲ್ ಅಲ್ಲಲ್ಲಿ ಹರಿದಂತೆ ಇರುವ ಹೊಸ ಶೈಲಿಯ ಪ್ಯಾಂಟ್ ಧರಿಸಿ ಗುರುವಾರ ಮಧ್ಯಾಹ್ನ ಬೆಳ್ತಂಗಡಿ ಪಟ್ಟಣದಲ್ಲಿರುವ ಸಂತೆಕಟ್ಟೆಗೆ ಬಂದಿದ್ದ. ಇದನ್ನು ಗಮನಿಸಿದ ಮಾರುಕಟ್ಟೆಯಲ್ಲಿದ್ದ ಪಡ್ಡೆ ಯುವಕರ ತಂಡವೊಂದು ಆತನನ್ನು ಹಿಡಿದು ಅವರಲ್ಲಿ ಓರ್ವ ಆತನ ಎರಡೂ ಕೈಗಳನ್ನು ಬಲವಂತದಿಂದ ಹಿಂದಕ್ಕೆ ಹಿಡಿದಿಟ್ಟಿದ್ದಾನೆ. ಮತ್ತೊಬ್ಬ ಆತನ ಪ್ಯಾಂಟನ್ನು ಗೋಣಿಚೀಲ ಹೊಲಿಯುವ ದಬ್ಬಣದಿಂದ ಹೊಲಿದಿದ್ದಾನೆ. ಇದೇ ವೇಳೆ ಇನ್ನೋರ್ವ ಮೊಬೈಲ್‌ನಲ್ಲಿ ಅದರ ವೀಡಿಯೊ ಚಿತ್ರೀಕರಿಸಿದ್ದು, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಪಿದ್ದಾರೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪುತ್ರಬೈಲು ನಿವಾಸಿ ಶಬೀರ್, ಅನೀಶ್ ಪಣಕಜೆ, ಲಾಯಿಲ ಗ್ರಾಮದ ಆದರ್ಶ ನಗರ ನಿವಾಸಿ ಸಲೀಂ ಈ ಕೃತ್ಯ ನಡೆಸಿದವರು ಎಂದು ತಿಳಿದುಬಂದಿದೆ.
ವಿಡಿಯೋ ಮಾಡಿ ಟ್ರೋಲ್ ಮಾಡಿದ್ದರಿಂದ ಮಾನಸಿಕವಾಗಿ ನೊಂದ ಶಾಹಿಲ್ ಗುರುವಾರ ಸಂಜೆ ಮನೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಚಿಕಿತ್ಸೆಗಾಗಿ ಮನೆಯವರು ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ್ದು ಪ್ರಥಮ ಚಿಕಿತ್ಸೆಯ ನಂತರ ಚಿಂತಾಜನಕ ಸ್ಥಿತಿಯಲ್ಲಿದ್ದ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ. ಈ ಘಟನೆ ಬಗ್ಗೆ ಸಾರ್ವಜನಿಕರು ಈ ಮೂವರು ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.