ಬೆಳ್ತಂಗಡಿ(ದಕ್ಷಿಣ ಕನ್ನಡ) : ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣ ಸಂಬಂಧ ಬಂಗ್ಲೆಗುಡ್ಡೆಯಲ್ಲಿ ಎಸ್ಐಟಿ ಅಧಿಕಾರಿಗಳು ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಪತ್ತೆಯಾದ ಅಸ್ಥಿಪಂಜರಗಳಲ್ಲಿ ಒಟ್ಟು ಮೂರು ವ್ಯಕ್ತಿಗಳ ಕುಟುಂಬದ ಡಿಎನ್ಎ ತಾಳೆ ಮಾಡಿ ಎಫ್ಎಸ್‌ಎಲ್ ಗುರುತು ದೃಢಪಡಿಸಿದೆ.

7 ಅಸ್ಥಿಪಂಜರಗಳನ್ನು ಪತ್ತೆ

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಬಂಗ್ಲೆಗುಡ್ಡೆಯಲ್ಲಿ ಸೌಜನ್ಯಳ ಮಾವ ವಿಠಲ ಗೌಡ ತೋರಿಸಿದ ಜಾಗದಲ್ಲಿ ಎಸ್ಐಟಿ ಅಧಿಕಾರಿಗಳು 2025 ಸೆ.17 ಮತ್ತು ಸೆ.18ರಂದು ನಡೆಸಿದ ಶೋಧ ಕಾರ್ಯಾಚರಣೆ ವೇಳೆ 7 ಅಸ್ಥಿಪಂಜರಗಳನ್ನು ಪತ್ತೆ ಹಚ್ಚಿ ಎಫ್ಎಸ್‌ಎಲ್‌ಗೆ ಕಳುಹಿಸಿದ್ದರು‌‌. ಅಸ್ಥಿಪಂಜರ ಪತ್ತೆಯಾದ ಜಾಗದಲ್ಲಿ ಕೆಲವೊಂದು ಐಡಿ ಕಾರ್ಡ್‌ಗಳು ಕೂಡ ಪತ್ತೆಯಾಗಿದ್ದವು. ಅದರ ಆಧಾರದಲ್ಲಿ ಕುಟುಂಬದವನ್ನು ಹುಡುಕಾಟ ನಡೆಸಿ ಕುಟುಂಬದವರ ಡಿಎನ್ಎ ಪರೀಕ್ಷೆಯನ್ನು ಬೆಳ್ತಂಗಡಿ ನ್ಯಾಯಾಲಯದಲ್ಲಿ ಮಾಡಿ ಎಫ್ಎಸ್ಎಲ್ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಇದರ ವರದಿಯಲ್ಲಿ ಮೂವರ ಕುಟುಂಬದ ಡಿಎನ್ಎ ಅಸ್ಥಿಪಂಜರಕ್ಕೆ ತಾಳೆಯಾಗಿರುವುದು ಖಚಿತವಾಗಿದೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ಯು.ಬಿ.ಅಯ್ಯಪ್ಪ (70), ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದಾಸರಕಲ್ಲಹಳ್ಳಿ ನಿವಾಸಿ ಆದಿಶೇಷ ನಾರಾಯಣ (27), ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮೀಸಗಾಣಹಳ್ಳಿಯ ಕೃಷ್ಣಪ್ಪ(85) ಅವರ ಅಸ್ಥಿಪಂಜರ ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾಗಿರುವುದು ಡಿಎನ್ಎ ಪರೀಕ್ಷೆ ಮೂಲಕ ಖಚಿತವಾಗಿದೆ.


ಕೊಡಗು ಜಿಲ್ಲೆಯ ಅಯ್ಯಪ್ಪ 2017 ಜೂ.25ರಲ್ಲಿ ಮೈಸೂರು ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋದವರು ವಾಪಸ್ ಬಾರದೆ ನಾಪತ್ತೆಯಾಗಿದ್ದ ಬಗ್ಗೆ ಕುಟ್ಟ ವೃತ್ತದ ಶ್ರೀಮಂಗಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತುಮಕೂರಿನ ಆದಿಶೇಷ ನಾರಾಯಣ ಎಂಬುವರು ಬೆಂಗಳೂರು ಬಾರ್‌ನಲ್ಲಿ ಕೆಲಸಕ್ಕೆ ಹೋಗಿದ್ದ ಬಳಿಕ 2013 ಅ.2 ರಂದು ವಾಪಸ್ ಮನೆಗೆ ಬಂದು ಮೊಬೈಲ್ ಇಟ್ಟು ನಾಪತ್ತೆಯಾಗಿದ್ದ. ಈತ ಪದೇ ಪದೇ ಮನೆಯಿಂದ ಹೋಗುತ್ತಿದ್ದ ಕಾರಣ ವಾಪಸ್ ಬರುತ್ತಾನೆಂದು ಕುಟುಂಬದವರು ದೂರು ನೀಡಿರಲಿಲ್ಲ.

ನಾಪತ್ತೆ ಪ್ರಕರಣ

ಕೋಲಾರ ಜಿಲ್ಲೆಯ ಕೃಷ್ಣಪ್ಪ 2024 ಅ.22 ರಂದು ಏಕಾಏಕಿ ಮನೆಯಿಂದ ಹೊರ ಹೋದವರು ವಾಪಸ್ ಮನೆಗೆ ಬಾರದೆ ಇದ್ದ ಕಾರಣ ಕುಟುಂಬದವರು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಕುಟುಂಬಕ್ಕೆ ಅಸ್ಥಿಪಂಜರ ಪಡೆಯಲು ಅವಕಾಶ: ಡಿಎನ್ಎ ವರದಿ ಪ್ರಕಾರ 3 ಕುಟುಂಬದವರು ಎಸ್ಐಟಿಗೆ ಮನವಿ ಮಾಡಿದರೆ ಕುಟುಂಬಕ್ಕೆ ಅಸ್ಥಿಪಂಜರ ಪಡೆಯಲು ಅವಕಾಶವಿದೆ. ಎಸ್ಐಟಿ ಅಧಿಕಾರಿಗಳು ಜು.15 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಕೆಯಲ್ಲಿ ಮೂವರ ಡಿಎನ್ಎ ಮೂಲಕ ದೃಢಪಟ್ಟ ಬಗ್ಗೆ ವರದಿ ನೀಡದ್ದಾರೆ.