ದ.ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಸುವರ್ಣ ಮಹೋತ್ಸವದ ಪ್ರಯುಕ್ತ ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಸಂಘದ ವತಿಯಿಂದ ಸಾಮೂಹಿಕ ಸೀಯಾಳಾಭಿಷೇಕ ಕಾರ್ಯಕ್ರಮ

ಮಂಗಳೂರು: ನಮ್ಮ ಬದುಕು ಬಂಗಾರವಾಗಬೇಕಾದರೆ ಬರುವ ಕಷ್ಟಗಳನ್ನು ಎದುರಿಸಿ ಧರ್ಮದ ಹಾದಿಯಲ್ಲಿ ನಡೆಯಬೇಕು. ಅಧರ್ಮದಿಂದ ಗಳಿಸಿದ ಸಂಪತ್ತಿನಿಂದ ಶ್ರೇಯಸ್ಸು ಖಂಡಿತಾ ಲಭಿಸದು ಎಂದು ಶ್ರೀಮದ್ ಜಗದ್ಗುರು ಆನೆಗುಂದಿ ಸಂಸ್ಥಾನ ಸರಸ್ವತೀ ಪೀಠಾಧಿಪತಿ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ದ.ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಸುವರ್ಣ ಮಹೋತ್ಸವದ ಪ್ರಯುಕ್ತ ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಸಂಘದ ವತಿಯಿಂದ ಸಾಮೂಹಿಕ ಸೀಯಾಳಾಭಿಷೇಕ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ಶ್ರದ್ಧಾ ಭಕ್ತಿ ಪೂರ್ವಕವಾಗಿ ಸಮಾಜದ ಎಲ್ಲರನ್ನೂ ಒಗ್ಗೂಡಿಸಿ ಮಾಡಿದ ಸಂಘದ ಈ ಕೆಲಸ ಅತ್ಯಂತ ಸುತ್ಯಾರ್ಹವಾದುದು. ಸಂಘ ಸಾಮಾಜಿಕ ಸೇವೆಯಲ್ಲದೆ, ಶ್ರೀ ಕ್ಷೇತ್ರದ ಉತ್ಸವಾದಿ, ಸಂತರ್ಪಣೆಗಳಲ್ಲಿಯೂ ನಿರಂತರ ಸೇವೆ ಮಾಡಿಕೊಂಡು ಬಂದಿರುವುದು ಶ್ಲಾಘನೀಯ ಎಂದರು.

ಸಂಘದ ಸುವರ್ಣ ಮಹೋತ್ಸವದ ಲಾಂಛನವನ್ನು ಶ್ರೀಗಳು ಅನಾವರಣಗೊಳಿಸಿದರು. ಶ್ರೀ ಕಾಳಿಕಾಂಬಾ, ವಿನಾಯಕ, ಶ್ರೀ ವಿಶ್ವಕರ್ಮ ದೇವರಿಗೆ ಮತ್ತು ಕ್ಷೇತ್ರದ ಪರಿವಾರ ಸಾನಿಧ್ಯಗಳಿಗೆ ಸಾಮೂಹಿಕ ಸೀಯಾಳ ಅಭಿಷೇಕ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಲಕ್ಷ್ಮೀಕಾಂತ ಶರ್ಮರ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕ ವಿಘ್ನೇಶ್ ಪುರೋಹಿತ್, ಸುದರ್ಶನ ಪುರೋಹಿತ್, ಗುರುಪ್ರಸಾದ್, ಚೇತನ್ ಶರ್ಮ ಹಾಗೂ ಇತರ ವೈದಿಕರ ಸಹಕಾರದೊಂದಿಗೆ ಸಂಪನ್ನಗೊಂಡಿತು.

ಕ್ಷೇತ್ರದ ಆಡಳಿತಾಧಿಕಾರಿ ಕೆ.ಉಮೇಶ್ ಆಚಾರ್ಯ ಪಾಂಡೇಶ್ವರ, ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷ ಕೆ.ಎಲ್.ಹರೀಶ್, ಕಾರ್ಯದರ್ಶಿ ಪ್ರಕಾಶ್ ಹಲೇಜಿ, ಕೋಶಾಧಿಕಾರಿ ಪ್ರಕಾಶ್ ಕುಂಟಾಡಿ ಮತ್ತು ಪಧಾಧಿಕಾರಿಗಳು, ಶ್ರೀ ಕ್ಷೇತ್ರದ ಮಾಜಿ ಮೊಕ್ತೇಸರರಾದ ಸುಂದರ ಆಚಾರ್ಯ ಬೆಳುವಾಯಿ, ಎ.ಲೋಕೇಶ ಆಚಾರ್ಯ, ನಾಗರಾಜ ಮಂಗಳಾದೇವಿ, ಶ್ರೀ ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಜಗದೀಶ್ ಸಿದ್ದಕಟ್ಟೆ, ವಿಶ್ವ ಬ್ರಾಹ್ಮಣ ಮಹಿಳಾ ಸಮಿತಿಯ ಅಧ್ಯಕ್ಷೆ ಅರುಣಾ ಸುರೇಶ್, ಎಸ್.ಕೆ.ಜಿ.ಐ. ಕೋ.ಆ. ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಯಜ್ನೇಶ್ವರ ಮತ್ತಿತರರು ಇದ್ದರು.ಸುವರ್ಣ ಮಹೋತ್ಸವದ ಲಾಂಛನ ರಚಿಸಿದ ವಿಘ್ನೇಶ್ ಟಿ.ತಲೆಬೈಲು ಅವರನ್ನು ಅಭಿನಂದಿಸಲಾಯಿತು.

ವಿಶ್ವಕರ್ಮ ಸಹಕಾರ ಬ್ಯಾಂಕ್, ಎಸ್.ಕೆ.ಜಿ ಸೊಸೈಟಿ, ವಿಶ್ವಕರ್ಮ ಯುವ ವೇದಿಕೆ, ವಿಶ್ವಕರ್ಮ ಯುವ ಮಿಲನ್ ಇನ್ನಿತರ ಸಂಸ್ಥೆಗಳ ಸದಸ್ಯರು ಸಹಕರಿಸಿದರು. ಪಶುಪತಿ ಉಳ್ಳಾಲ್ ನಿರೂಪಿಸಿದರು.