ಸರ್ಕಾರದಿಂದ ಮಂಜೂರಾದ ಸಂಸ್ಥೆಯ ಸ್ವಂತ ನಿವೇಶನದಲ್ಲಿ ನಿರ್ಮಾಣಗೊಂಡ ಯುವವಾಹಿನಿ ಕೇಂದ್ರ ಸಮಿತಿಯ ನೂತನ ಆಡಳಿತ ಕಚೇರಿ ಉದ್ಘಾಟನೆ

ಮಂಗಳೂರು: ಸಂಘಟನೆಗಳು ಜನರ ಬದುಕಿನಲ್ಲಿ ಮೂಡಿಸುವ ಸಕಾರಾತ್ಮಕ ಬದಲಾವಣೆಗಳ ಮೂಲಕ ಗುರುತಿಸಿಕೊಳ್ಳಬೇಕು. ಯುವವಾಹಿನಿ ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ಸೇವೆಯ ಕ್ಷೇತ್ರಗಳಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸಿ ಸಮಾಜದ ಅಭಿವೃದ್ಧಿಗೆ ಶಕ್ತಿಯಾಗಿ ಬೆಳೆಯಲಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದರು. ಅವರು ಭಾನುವಾರ ಮಂಗಳೂರಿನ ವಿದ್ಯಾನಗರದ ಪಂಜಿಮೊಗರಿನಲ್ಲಿ ಸರ್ಕಾರದಿಂದ ಮಂಜೂರಾದ ಸಂಸ್ಥೆಯ ಸ್ವಂತ ನಿವೇಶನದಲ್ಲಿ ನಿರ್ಮಾಣಗೊಂಡ ಯುವವಾಹಿನಿ ಕೇಂದ್ರ ಸಮಿತಿಯ ನೂತನ ಆಡಳಿತ ಕಚೇರಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಶ್ರೀವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನದಲ್ಲಿ, ಸಮಾಜದ ಉನ್ನತಿ ಮತ್ತು ಮಾನವೀಯ ಮೌಲ್ಯಗಳ ವೃದ್ಧಿಗೆ ಸಂಘಟಿತ ಪ್ರಯತ್ನ ಅತ್ಯಗತ್ಯ. ಶಿಕ್ಷಣ, ಸಂಸ್ಕಾರ ಮತ್ತು ಸೇವೆಯ ಮೂಲಕ ಯುವಜನತೆಯನ್ನು ಸಮಾಜಮುಖಿಯಾಗಿ ರೂಪಿಸುವ ಕಾರ್ಯದಲ್ಲಿ ಯುವವಾಹಿನಿಯ ಸೇವೆ ಶ್ಲಾಘನೀಯ ಎಂದರು.

ಶಾಸಕ ಡಾ. ಭರತ್ ಶೆಟ್ಟಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವವಾಹಿನಿಯ ಸಂಘಟನಾ ಶಕ್ತಿ ಮತ್ತು ಸಮಾಜಮುಖಿ ಚಟುವಟಿಕೆಗಳನ್ನು ಶ್ಲಾಘಿಸಿದರು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ ದೀಪ ಪ್ರಜ್ವಲನೆ ನೆರವೇರಿಸಿದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ ನಾಮಫಲಕ ಅನಾವರಣಗೊಳಿಸಿದರು.

ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾರ್, ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಸೂರ್ಯಕಾಂತ್ ಜೆ.ಸುವರ್ಣ, ಪ್ರಮುಖರಾದ ಅನಿಲ್ ಕುಮಾರ್, ರೋಹಿತ್ ಅಮೀನ್, ಸುಮಂಗಲಾ, ದೀಪಕ್ ಪೂಜಾರಿ, ಸೂರಜ್ ಕಲ್ಯಾ, ಡಾ.ಕಿರಣ್ ಕುಮಾರ್, ರಮೇಶ್ ಪೂಜಾರಿ ಚೆಲ್ಯಾರ್, ಸುನೀಲ್ ಭಂಡಾರಿ, ಟಿ.ಎನ್.ಪೂಜಾರಿ, ಡಾ.ಎನ್.ಟಿ.ಅಂಚನ್, ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್, ಕೋಶಾಧಿಕಾರಿ ಸತೀಶ್ ಕಿಲ್ಪಾಡಿ, ಯುವವಾಹಿನಿ ಕಟ್ಟಡ ಸಮಿತಿಯ ಕಾರ್ಯದರ್ಶಿ ಜಗದೀಶ್ ಸುವರ್ಣ, ಕೋಶಾಧಿಕಾರಿ ಜಗದೀಶ್ಚಂದ್ರ ಡಿ.ಕೆ. ಮತ್ತಿತರರು ಇದ್ದರು.

ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಯುವವಾಹಿನಿ ಕಟ್ಟಡ ಸಮಿತಿ ಸಂಚಾಲಕ ಹರೀಶ್ ಕೆ.ಪೂಜಾರಿ ವಂದಿಸಿದರು. ರೇಣುಕಾ ಕಣಿಯೂರು ನಿರೂಪಿಸಿದರು.