ಹುಬ್ಬಳ್ಳಿ:
ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿರುವುದಾಗಿ ವಿಪ ಮಾಜಿ ಸದಸ್ಯ ಮೋಹನ್ ಲಿಂಬಿಕಾಯಿ ತಮ್ಮ ಆಸಕ್ತಿ ವ್ಯಕ್ತಪಡಿಸಿದರು.ಇಲ್ಲಿನ ಗೋಕುಲ ರಸ್ತೆಯ ಸಂಜೀವಿನಿ ಆಸ್ಪತ್ರೆ ಆವರಣದ ಅಡಿಟೋರಿಯಂನಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಮತದಾರರ ನೋಂದಣಿಯ ಕುರಿತು ಜಾಗೃತಿ ಸಭೆಯಲ್ಲಿ ಮಾತನಾಡಿದರು.
ವಿಧಾನ ಪರಿಷತ್ ಚಿಂತಕರ ಚಾವಡಿಯಾಗಿದ್ದು, ಸಮಾಜ ಮತ್ತು ರಾಜ್ಯದ ಪ್ರಗತಿ ಕುರಿತು ಚಿಂತನೆ ಮತ್ತು ಅನುಸಂಧಾನ ನಡೆಯಬೇಕು. ಅದು ಇಂದು ಕಾಣಿಸಿಕೊಳ್ಳುತ್ತಿಲ್ಲ. ಆದ್ದರಿಂದ ಮತದಾರರು ಯೋಗ್ಯರನ್ನು ಆರಿಸಬೇಕು. ಆಯ್ಕೆಯಾದವರು ಅಧಿಕಾರದ ದೃಷ್ಟಿಯಿಂದ ಅಲ್ಲ, ಜವಾಬ್ದಾರಿಯ ಮನೋಭಾವದಿಂದ ಕೆಲಸ ಮಾಡಿದಾಗ ಮಾತ್ರ ಕ್ಷೇತ್ರಕ್ಕೆ ನ್ಯಾಯ ದೊರಕುತ್ತದೆ ಎಂದರು.2008ರಲ್ಲಿ ಇದೇ ಕ್ಷೇತ್ರದಿಂದ ಭಾರೀ ಮತಗಳ ಅಂತರದಿಂದ ಆಯ್ಕೆಯಾಗಿದ್ದ ನಾನು, ಜನಪರ ಕೆಲಸಗಳಿಗೆ ಆದ್ಯತೆ ನೀಡಿ 23,000 ಸರ್ಕಾರಿ ದಿನಗೂಲಿ ನೌಕರರನ್ನು ಕಾಯಂಗೊಳಿಸುವಲ್ಲಿ ಹಾಗೂ ಆರ್ಥಿಕ ಸಂಕಷ್ಟದಲ್ಲಿದ್ದ ಎನ್‌ಜಿಇಎಫ್ ಸಂಸ್ಥೆಗೆ ₹10 ಕೋಟಿ ಸರ್ಕಾರದ ವಿಶೇಷ ಅನುದಾನ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದೆ ಎಂದು ಮೆಲುಕು ಹಾಕಿದರು. ನಿರುದ್ಯೋಗಿ ಪದವೀಧರರಿಗೆ ಶಿಕ್ಷಕರಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವುದು ತಮ್ಮ ಮುಂದಿನ ಉದ್ದೇಶ ಎಂದರು.
ರಾಜಶೇಖರ ಮೆಣಸಿನಕಾಯಿ, ಪ್ರೊ. ಸುರೇಶ್ ಕುನ್ನೂರ, ಪಾರಸ್ಮಲ್ ಜೈನ್, ಮಹೇಂದ್ರ ಸಿಂಘಿ, ಶೇಖಣ್ಣ ಬೆಂಡಿಗೇರಿ, ರಮೇಶ್ ಭರಮಗೌಡ, ಡಾ. ಎಸ್.ವಿ. ಹಿರೇಮಠ ಹಾಗೂ ನೇಹಾ ಮುಲ್ಲಾ ಸೇರಿದಂತೆ ಹಲವರು ಮಾತನಾಡಿ, ಹೆಚ್ಚಿನ ಸಂಖ್ಯೆಯ ಪದವೀಧರರನ್ನು ಮತದಾರರಾಗಿ ನೋಂದಾಯಿಸಲು ಕರೆ ನೀಡಿದರು.ಈ ವೇಳೆ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಜಿ.ಕೆ. ಆದಪ್ಪಗೌಡ, ಕಾಶಿಯ ಉಪಾಧ್ಯಕ್ಷ ನಿಂಗಣ್ಣ ಬಿರಾದಾರ, ಮಾಜಿ ಶಾಸಕ ಎಂ.ಎಸ್. ಅಕ್ಕಿ, ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ ಸೇರಿದಂತೆ ಹಲವರಿದ್ದರು. ಡಾ. ಹುದ್ದಾರ್ ನಿರೂಪಿಸಿದರು. ಡಾ. ಬಿ.ಎಲ್. ಪಾಟೀಲ ವಂದಿಸಿದರು.