ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದು ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಹೇಳಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ವಾರ್ಡ್ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ಪ್ರತಿ ವಾರ್ಡ್‍ನಲ್ಲಿರುವ ಮತದಾರರ ಗುರುತಿಸಲಾಗಿದೆ. ಮತದಾರರ ಮನೆಗಳಿಗೆ ಹೋಗಿ ಪ್ರಚಾರ ಮಾಡಿ ನಮ್ಮ ಅಭ್ಯರ್ಥಿಗಳ ಗೆಲ್ಲಿಸುವಂತೆ ಮನವಿ ಮಾಡುತ್ತಿದ್ದೇವೆ. ಹಾಗೆಯೇ ಕ್ಷೇತ್ರದಲ್ಲಿ ಪಕ್ಷದ ಶಾಸಕರು, ಮಾಜಿ ಶಾಸಕರು, ಜನಪ್ರತಿನಿಧಿಗಳು, ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ಗೆ ಬಹುಮತವಿಲ್ಲ. ಯಾವುದೇ ಶಾಸನಗಳು ಜಾರಿಯಾಗಬೇಕಾದರೆ ವಿಧಾನ ಪರಿಷತ್ ಒಪ್ಪಿಗೆಯೂ ಬೇಕಾಗುತ್ತದೆ. ಅಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ ಹೆಚ್ಚಬೇಕಿದೆ. ಆಯನೂರು ಮಂಜುನಾಥ್ ಈಗಾಗಲೇ ಒಂದು ಸುತ್ತು ಕ್ಷೇತ್ರದ ತುಂಬಾ ಪ್ರಚಾರ ಮಾಡಿ ಬಂದಿದ್ದು, ಮತದಾರರ ಭೇಟಿಯಾಗುತ್ತಲೇ ಇದ್ದಾರೆ. ಅವರ ಬಗ್ಗೆ ಮತದಾರರಿಗೆ ಅತ್ಯಂತ ವಿಶ್ವಾಸವಿದೆ. ನಾಲ್ಕೂ ಮನೆಗಳಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ. ಪದವೀಧರರ ಸಮಸ್ಯೆಗಳ ಬಗ್ಗೆ ಅರಿವಿದೆ ಎಂದರು.
ಶಿಕ್ಷಕ ಕ್ಷೇತ್ರದ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಕೂಡ ಶಿಕ್ಷಕರ ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಅವರೂ ಕೂಡ ಪ್ರಚಾರದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಪದವೀಧರರ ಮತ್ತು ಶಿಕ್ಷಕರ ಸಮಸ್ಯೆಗಳ ಬಗೆಹರಿಸುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದೆ. ಈಗಾಗಲೇ ಪದವೀಧರರಿಗೆ ಯುವನಿಧಿ ಯೋಜನೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಟಿ.ಎಸ್. ಚಂದ್ರಶೇಖರ್, ಚಂದ್ರಭೂಪಾಲ್, ಸೌಗಂಧಿಕಾ, ಎಚ್.ಎಂ. ಮಧು, ಜಿ.ಡಿ. ಮಂಜುನಾಥ್, ಚಿನ್ನಪ್ಪ ಮತ್ತಿತರರಿದ್ದರು.ದಿನೇಶ್ ಪಕ್ಷ ಬಿಡಬಾರದಿತ್ತು
ಬಂಡಾಯವಾಗಿ ಸ್ಪರ್ಧಿಸಿರುವ ಎಸ್.ಪಿ.ದಿನೇಶ್ ಸ್ಪರ್ಧೆಯಿಂದ ಯಾವುದೇ ತೊಂದರೆಯಾಗಲ್ಲ. ದಿನೇಶ್ ಪಕ್ಷ ಬಿಟ್ಟು ಹೋಗಬಾರದಿತ್ತು. ಅವರಿಗೆ ಈಗಾಗಲೇ ಎರಡು ಬಾರಿ ಅವಕಾಶ ಕೊಟ್ಟಿದ್ದರು. ಮುಂದೆಯೂ ಸ್ಥಾನಮಾನ ನೀಡುವ ಭರವಸೆ ಕೂಡ ಕೊಡಲಾಗಿತ್ತು. ಆದರೆ ಅವರು ಬಿಟ್ಟು ಹೋಗಿದ್ದಾರೆ. ಹಾಗೆಯೇ ಬಿಜೆಪಿ ವಿರುದ್ಧವೂ ಕೂಡ ರಘುಪತಿ ಭಟ್ ಬಂಡಾಯವೆದ್ದಿದ್ದಾರೆ. ಇದು ಕಾಂಗ್ರೆಸ್ ಗೆ ಅನುಕೂಲವಾಗಲಿದೆ. ಪಕ್ಷದ ಇಬ್ಬರೂ ಅಭ್ಯರ್ಥಿಗಳ ಗೆಲುವು ಖಚಿತ.ಎಚ್.ಎಸ್. ಸುಂದರೇಶ್, ಸೂಡಾ ಅಧ್ಯಕ್ಷ