ಕನ್ನಡಪ್ರಭ ವಾರ್ತೆ ಬಳ್ಳಾರಿ
ಭಾರತ ಸರ್ಕಾರದ ಅಂಚೆ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ನಗರದ ಸಾರ್ಟಿಂಗ್ ಕಚೇರಿಯಲ್ಲಿ ಸಾಮಾನ್ಯ ಪತ್ರಗಳು, ರಿಜಿಸ್ಟರ್ ಪೋಸ್ಟ್ ಪತ್ರಗಳು, ಸ್ಪೀಡ್ ಪೋಸ್ಟ್ ಪತ್ರಗಳು, ಪಾರ್ಸಲ್ ಗಳ ವ್ಯವಸ್ಥೆಯಿತ್ತು. ಇದರಿಂದ ಅಂಚೆ ಇಲಾಖೆಗೆ ಸಾಕಷ್ಟು ವರಮಾನ ತಂದುಕೊಡುವುದರ ಜೊತೆಗೆ ಸಾರ್ವಜನಿಕರಿಗೂ ಹೆಚ್ಚು ಅನುಕೂಲವಿತ್ತು.
ಆದರೆ, ಕಳೆದ ಕೆಲವು ದಿನಗಳ ಹಿಂದೆ ಬಳ್ಳಾರಿಯ ಸಾರ್ಟಿಂಗ್ ಕಚೇರಿಯಲ್ಲಿ ಪಾರ್ಸಲ್ ಸಾರ್ಟಿಂಗ್ ವ್ಯವಸ್ಥೆಯನ್ನು ತೆಗೆದುಹಾಕಲಾಗಿದ್ದು, ಕಚೇರಿಯಲ್ಲಿ ಬುಕ್ಕಿಂಗ್ ಮಾತ್ರ ಮುಂದುವರಿಸಲಾಗಿದೆ. ಇದರಿಂದ ಗ್ರಾಹಕರು ಕಳಿಸುವ ಪಾರ್ಸಲ್ ಗಳು ಬೇರೆ ಬೇರೆ ಸ್ಥಳಗಳಿಗೆ ಸಾಕಷ್ಟು ತಡವಾಗಿ ತಲುಪುತ್ತವೆ. ಇದರಿಂದ ಗ್ರಾಹಕರ ಸೇವೆ ವಿಳಂಬವಾಗಲಿದೆ. ಅಷ್ಟೇ ಅಲ್ಲ, ಸಾರ್ವಜನಿಕರು ಅಂಚೆ ಇಲಾಖೆಯ ಜೊತೆಗಿನ ಸಂಪರ್ಕವೂ ಸ್ಥಗಿತವಾಗುವ ಸಾಧ್ಯತೆಯಿದೆ. ಬಳ್ಳಾರಿಯ ಸ್ಪೀಡ್ ಪೋಸ್ಟ್ ಸಾರ್ಟಿಂಗ್ ವ್ಯವಸ್ಥೆಯನ್ನು ಸ್ಥಳಾಂತರಿಸುವ ಹುನ್ನಾರ ನಡೆಯುತ್ತಿದ್ದು, ಕೂಡಲೇ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಅಂಚೆ ಇಲಾಖೆಯ ಏಕಮುಖವಾಗಿ ಸಾರ್ಟಿಂಗ್ ಕಚೇರಿ ಸ್ಥಳಾಂತರದ ನಿರ್ಧಾರವನ್ನು ಹಿಂದಕ್ಕೆ ಪಡೆದು, ಈ ಹಿಂದಿನಂತೆ ಪುನಃ ಪಾರ್ಸಲ್ ವ್ಯವಸ್ಥೆಯನ್ನು ಬಳ್ಳಾರಿಯಿಂದಲೇ ಆರಂಭಿಸಬೇಕು ಎಂದು ಒತ್ತಾಯಿಸಿದರು.ಅಂಚೆ ಇಲಾಖೆಯ ಪ್ರಧಾನ ಅಧಿಕಾರಿ ರಾಜೇಂದ್ರ ಕುಮಾರ್ ಅವರಿಗೆ ಬರೆದ ಮನವಿಯನ್ನು ಬಳ್ಳಾರಿಯ ಅಂಚೆ ಇಲಾಖೆಯ ಅಧೀಕ್ಷಕರಾದ ವಿ.ಎಲ್. ಚಿತಕೋಟೆ ಅವರಿಗೆ ಸಲ್ಲಿಸಲಾಯಿತು. ಅಲ್ಲದೆ, ಬೇಡಿಕೆ ಈಡೇರದೇ ಹೋದಲ್ಲಿ ಹೋರಾಟ ಮಾಡುವ ಎಚ್ಚರಿಕೆ ನೀಡಲಾಯಿತು.
ನಿಯೋಗದಲ್ಲಿ ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಸದಸ್ಯರಾದ ಎನ್.ಸಿ. ವೀರಭದ್ರಪ್ಪ, ಆರ್.ಎಂ. ಚಂದ್ರಮೌಳಿ, ಹಂಪೇರು ಹಾಲೇಶ್ವರಗೌಡ, ಎಚ್.ಕೆ. ಗೌರಿಶಂಕರಸ್ವಾಮಿ, ಜಾಲಿಹಾಳು ಶ್ರೀಧರ್ ಗೌಡ, ಬಿ.ಎಂ. ಎರಿಸ್ವಾಮಿ, ಜಿ. ನೀಲಕಂಠಪ್ಪ, ಕೆ.ಎಂ. ಕೊಟ್ರೇಶ್, ಎಂ. ಲೋಕನಾಥ್ ಸ್ವಾಮಿ, ಬಿ.ಎಂ. ಬಸವರಾಜ್ ಸ್ವಾಮಿ, ವಿ.ಸೂರ್ಯ ಪ್ರಕಾಶ್, ಕೊಳೂರು ಚಂದ್ರಶೇಖರ್ ಗೌಡ ಇತರರಿದ್ದರು.