ಕನ್ನಡಪ್ರಭ ವಾರ್ತೆ ಬ್ರಹ್ಮಾವರ
ಸುಮಾರು 50ಕ್ಕೂ ಹೆಚ್ಚು ಮನೆಗಳಿಗೆ ಸಂಪರ್ಕ ಕಲ್ಪಿಸುವ ಈ ಟ್ರಾನ್ಸ್ ಫಾರ್ಮರ್ ಕಳೆದ ಕೆಲವು ಸಮಯದಿಂದ ಅಪಾಯವನ್ನು ಆಹ್ವಾನಿಸುತ್ತಿದೆ. ಸುಮಾರು 30 ವರ್ಷಗಳಿಂದಲೂ ಮಟಪಾಡಿ ಶ್ರೀ ನಿಕೇತನ ಶಾಲೆಯ ಬಳಿ ಇರುವ ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗೆ ಅಳವಡಿಸಲಾದ ಕಬ್ಬಿಣದ ಕಂಬಗಳು ತುಕ್ಕು ಹಿಡಿದು ಬೀಳುವ ಹಂತದಲ್ಲಿವೆ.
ಈ ಭಾಗದಲ್ಲಿ ಅಂಗನವಾಡಿ ಕೇಂದ್ರ, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಅಂಚೆ ಕಚೇರಿ ಹಾಗೂ ಯಕ್ಷಗಾನ ಸಂಘದ ಕಚೇರಿ ಇದೆ. ಅಲ್ಲದೆ ಜನವಸತಿ ಪ್ರದೇಶ ಇದಾಗಿದ್ದು, ಪ್ರತಿನಿತ್ಯ ನೂರಾರು ಮಂದಿ ಸಾರ್ವಜನಿಕರು ಈ ಪ್ರದೇಶದಲ್ಲಿ ತಿರುಗಾಡುತ್ತಿದ್ದಾರೆ. ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗೆ ಅಳವಡಿಸಲಾದ ಕಬ್ಬಿಣದ ಕಂಬಗಳು ತುಕ್ಕು ಹಿಡಿದು ಬೀಳುವ ಪರಿಸ್ಥಿತಿಯಲ್ಲಿರುವುದರಿಂದ ಸಾರ್ವಜನಿಕರಿಗೆ ಅಪಾಯ ಕಟ್ಟಿಟ್ಟ ಬುತ್ತಿ.ಈ ಪರಿಸರದಲ್ಲಿ ನೂರಾರು ಮಂದಿ ಶಾಲಾ ವಿದ್ಯಾರ್ಥಿಗಳು, ಮಕ್ಕಳು ಸಂಚರಿಸುತ್ತಿದ್ದು, ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗೆ ಯಾವುದೇ ರೀತಿಯ ತಡೆ ಬೇಲಿ ಇಲ್ಲದೆ ಅವಘಡಕ್ಕೆ ಆಹ್ವಾನ ನೀಡುತ್ತಿದೆ. ಅಷ್ಟೇ ಅಲ್ಲದೆ ಪವರ್ ಮ್ಯಾನ್‌ಗಳ ಜೀವಕ್ಕೂ ಅಪಾಯವಿದೆ.