ಪ್ರಾಮಾಣಿ ಕೆಲಸ ಮಾಡಿರುವ ಮರಿತಿಬ್ಬೇಗೌಡರನ್ನು ಬೆಂಬಲಿಸಿ: ಮಧು ಬಂಗಾರಪ್ಪ

KannadaprabhaNewsNetwork | Published : May 29, 2024 1:01 AM

ಸಾರಾಂಶ

ಶಿಕ್ಷಕರು ಸೇರಿ ಸರ್ಕಾರ ನೌಕರರ ಬಹಳ ಮುಖ್ಯ ಬೇಡಿಕೆಯಾದ ಹಳೆಯ ಪಿಂಚಣಿ ವ್ಯವಸ್ಥೆ ಮರು ಜಾರಿಗೆ ಸರ್ಕಾರ ಬದ್ಧವಾಗಿದೆ. ಮುಂಬರುವ ದಿನಗಳಲ್ಲಿ ಶಿಕ್ಷಕರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುತ್ತೇವೆ. ನಮ್ಮ ಸರ್ಕಾರ ಆಡಳಿತಕ್ಕೆ ಬಂದ ವರ್ಷದಲ್ಲಿ 12 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಅವರು 24 ವರ್ಷಗಳ ಕಾಲ ಮೇಲ್ಮನೆ ಸದಸ್ಯರಾಗಿ ಶಿಕ್ಷಕರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ಸದಸ್ಯರ ಪೈಕಿ ಮುಂಚೂಣಿಯಲ್ಲಿದ್ದಾರೆ. ಈ ಚುನಾವಣೆಯಲ್ಲೂ ಮತದಾರರು ಅವರನ್ನು ಬೆಂಬಲಿಸುವಂತೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮನವಿ ಮಾಡಿದರು.

ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಸಮಸ್ಯೆಗಳಿವೆ. ಅವು ಪಾರಂಪರಿಕವಾಗಿ ಉಳಿದು ಬಂದಿವೆ. ಶಿಕ್ಷಕರ ಬೇಡಿಕೆಗಳಿಗೆ ನಮ್ಮ ಸರ್ಕಾರ ಸ್ಪಂದಿಸಲಿದೆ. 2023 ರಲ್ಲಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಪಂಚ ಗ್ಯಾರಂಟಿಯನ್ನು ಜಾರಿ ಮಾಡಿ ನುಡಿದಂತೆ ನಡೆದಿದ್ದೇವೆ ಎಂದು ಹೇಳಿದರು.

ಶಿಕ್ಷಕರು ಸೇರಿ ಸರ್ಕಾರ ನೌಕರರ ಬಹಳ ಮುಖ್ಯ ಬೇಡಿಕೆಯಾದ ಹಳೆಯ ಪಿಂಚಣಿ ವ್ಯವಸ್ಥೆ ಮರು ಜಾರಿಗೆ ಸರ್ಕಾರ ಬದ್ಧವಾಗಿದೆ. ಮುಂಬರುವ ದಿನಗಳಲ್ಲಿ ಶಿಕ್ಷಕರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುತ್ತೇವೆ. ನಮ್ಮ ಸರ್ಕಾರ ಆಡಳಿತಕ್ಕೆ ಬಂದ ವರ್ಷದಲ್ಲಿ 12 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಖಾಲಿ ಇರುವ 53 ಸಾವಿರ ಶಿಕ್ಷಕರ ನೇಮಕವನ್ನು 2 ಹಂತದಲ್ಲಿ ಮಾಡಲು ಮುಖ್ಯಮಂತ್ರಿಗಳು ಒಪ್ಪಿದ್ದಾರೆ. ಅನುದಾನಿತ ಶಾಲೆಗಳಿಗೆ 8 ಸಾವಿರ ಶಿಕ್ಷಕರ ನೇಮಕ ಮಾಡಬೇಕಿದ್ದು, 5 ರಿಂದ 6 ಸಾವಿರ ನೇಮಕ ಮಾಡುತ್ತೇವೆ. ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಲಾಗಿದೆ ಎಂದು ಅವರು ವಿವರಿಸಿದರು.

ನನ್ನ ಆದ್ಯತೆ ಬದಲಾಗಿಲ್ಲ- ಮರಿತಿಬ್ಬೇಗೌಡ

ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಮಾತನಾಡಿ, 24 ವರ್ಷಗಳ ಕಾಲ ಮೇಲ್ಮನೆ ಸದಸ್ಯನಾಗಿ 20 ವರ್ಷಗಳು ವಿರೋಧ ಪಕ್ಷದಲ್ಲಿದ್ದೆ. ಮೊದಲ ಬಾರಿ ಕಾಂಗ್ರೆಸ್‌ ನಿಂದ ಸದಸ್ಯನಾಗಿ ಆಯ್ಕೆಯಾಗಿದ್ದೆ. 5ನೇ ಬಾರಿಗೆ ಕಾಂಗ್ರೆಸ್‌ ನಿಂದ ಸ್ಪರ್ಧೆ ಮಾಡಿದ್ದೇನೆ. ಪಕ್ಷ ಬದಲಾಗಿದೆ, ಆದರೆ ಶಿಕ್ಷಕರು ಮತ್ತು ಮಕ್ಕಳ ಆದ್ಯತೆ ಬದಲಾಗಿಲ್ಲ ಎಂದು ತಿಳಿಸಿದರು.

7ನೇ ವೇತನ ಆಯೋಗದ ವರದಿ ಜಾರಿ, ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ಸಮಿತಿ ರಚನೆ, ಬಡ್ತಿ ಪಡೆದ ಶಿಕ್ಷಕರ ವೇತನ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿಗಳ ಸಿದ್ಧರಿದ್ದಾರೆ. ಅಲ್ಲದೆ, ಖಾಸಗಿ ಶಾಲೆಗಳ ಶಿಕ್ಷಕರಿಗೆ ಆರೋಗ್ಯ ವಿಮೆ ಮತ್ತು ಪಿಂಚಣಿ ನೀಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಲಾಗಿದೆ ಎಂದು ಅವರು ಹೇಳಿದರು.

ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್‌ ಕುಮಾರ್, ಮುಖಂಡರಾದ ಸುರೇಂದ್ರ, ಪ್ರಕಾಶ್, ಶಿವಣ್ಣ, ಭಾಸ್ಕರ್ ಎಲ್. ಗೌಡ, ಕೆ.ವಿ. ಮಲ್ಲೇಶ್, ನಾಗೇಶ್, ಚಂದ್ರು, ಶಾರದಾ ಸಂಪತ್ತು, ಈಶ್ವರ್ ಚಕ್ಕಡಿ ಮೊದಲಾದವರು ಇದ್ದರು.

ನನಗೆ ಬೇರೆ ಯಾವುದೇ ವ್ಯವಹಾರವಿಲ್ಲ. ದಿನದ 24 ಗಂಟೆಯೂ ಶಿಕ್ಷಕರು ಮತ್ತು ಶೈಕ್ಷಣಿಕ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚಿಂತನೆ ಮಾಡಿ, ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡುತ್ತ ಬಂದಿದ್ದೇನೆ. ಜಟಿಲವಾದ ಸಮಸ್ಯೆಗಳನ್ನು ಬಗೆಹರಿಸುವಂತೆ ಸರ್ಕಾರದ ಮೇಲೆ ಒತ್ತಡ ತಂದಿದ್ದೇನೆ.

- ಮರಿತಿಬ್ಬೇಗೌಡ, ಕಾಂಗ್ರೆಸ್ ಅಭ್ಯರ್ಥಿ, ದಕ್ಷಿಣ ಶಿಕ್ಷಕರ ಕ್ಷೇತ್ರ

Share this article