ಸುಬ್ರಮಣಿ, ಸಿದ್ದಾಪುರ
ಕನ್ನಡಪ್ರಭ ವಾರ್ತೆ ಸಿದ್ದಾಪುರಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷ ಮಿತಿ ಮೀರಿದ್ದು ಸಾರ್ವಜನಿಕರು ಆತಂಕದಲ್ಲಿ ಬದುಕುವಂತಾಗಿದೆ. ದಿನನಿತ್ಯ ಕಾಡಾನೆಗಳು ಮಾನವನ ಮೇಲೆ ದಾಳಿ ನಡೆಸುತ್ತಿದ್ದು ಶುಕ್ರವಾರ ಸ್ಕೂಟಿ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಶನಿವಾರ ಬೆಳಗ್ಗೆ ಚಲಿಸುತ್ತಿದ್ದ ಆಟೋರಿಕ್ಷಾ ಮೇಲೆ ದಾಳಿ ನಡೆಸಿ ಪ್ರಯಾಣಿಕನ ಕಾಲಿಗೆ ಗಾಯವಾಗಿದೆ.ಇಂಜಿಲೆಗೆರೆ ಸಮೀಪದ ಮುತ್ತಪ್ಪ ದೇವಾಲಯದ ಸಮೀಪ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಆಟೋ ಮೇಲರಗಿದ ಕಾಡಾನೆ ತನ್ನ ದಂತದಿಂದ ಆಟೋಗೆ ತಿವಿದ ಪರಿಣಾಮ ಪ್ರಯಾಣಿಕ ಇಂಜಿಲಿಗೆರೆ ಪುಲೀಯೆರಿ ನಿವಾಸಿ ಪ್ರದೀಪ ಎಂಬುವರ ತೊಡೆ ಭಾಗಕ್ಕೆ ಗಾಯವಾಗಿದ್ದು ಆಟೋ ರಿಕ್ಷಾದ ಒಂದು ಬದಿ ದಂತ ತಾಗಿ ತೂತು ಬಿದ್ದಿದೆ. ಗಾಯಾಳುವನ್ನು ತಕ್ಷಣ ಸಿದ್ದಾಪುರ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಅರಣ್ಯ ಇಲಾಖೆ ವಿರುದ್ಧ ಸಾರ್ವಜನಿಕರ ಆಕ್ರೋಶಪ್ರತಿನಿತ್ಯ ಕಾಡಾನೆಗಳು ರಸ್ತೆಯಲ್ಲಿ ಸಂಚರಿಸುವವರ ಮೇಲೆ ದಾಳಿ ನಡೆಸುತ್ತಿದ್ದು ಸಾರ್ವಜನಿಕರು ರಸ್ತೆಯಲ್ಲಿ ಓಡಾಡಲು ಭಯ ಪಡುವಂತಹ ಸನ್ನಿವೇಶಗಳು ಸೃಷ್ಟಿಯಾಗಿವೆ ಎಂದು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಡಾನೆ ಹಿಂಡುಗಳು ತೋಟಗಳಲ್ಲಿ ಬೀಡುಬಿಟ್ಟಿದ್ದು ಮರಿಗಳ ಸಮೇತ ಕಾಡಾನೆಗಳು ಹಿಂಡು ಹಿಂಡಾಗಿ ತೋಟಗಳಲ್ಲಿ ಸಂಚರಿಸುವ ರಸ್ತೆಗಳು ದಾಟುವುದು ಸಾಮಾನ್ಯವಾಗಿದೆ. ಕಾರ್ಮಿಕರು ತೋಟದಲ್ಲಿ ಕೆಲಸಕ್ಕೆ ಬರಲು ಹಿಂದೇಟಾಕುತ್ತಿದ್ದು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಡಾನೆಗಳ ಮಿತಿಮೀರಿದ ಸಂಚಾರದಿಂದ ಸಿದ್ದಾಪುರ ಸುತ್ತಮುತ್ತಲಿನ ಗ್ರಾಮಗಳಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂಜರಿಯುತ್ತಿದ್ದು. ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿ ಶಾಲೆಗಳಿಗೆ ತೆರಳ ಬೇಕಾದ ಅನಿವಾರ್ಯತೆ ಎದುರಾಗಿದೆ. ಅರಣ್ಯ ಇಲಾಖೆ ಕಾಡಾನೆಗಳನ್ನು ಕಾಡಿಗೆ ಅಟ್ಟುವುದಾಗಿ ಹೇಳಿ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಕಾಡಾನೆಗಳನ್ನು ಓಡಿಸುತ್ತಿದ್ದು ಕಾಡಾನೆಗಳು ಮಾತ್ರ ಕಾಡಿಗೆ ಹೋಗದೆ ತೋಟಗಳಲ್ಲಿ ಬೀಡು ಬಿಟ್ಟಿದ್ದು ಇಲಾಖೆಯ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಮಾತ್ರ ಹೆಸರಿಗೆ ನಡೆಸುತ್ತಿದ್ದು ಶಾಶ್ವತ ಪರಿಹಾರ ಒದಗಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ನಾಗರಿಕರು ಆರೋಪಿಸುತ್ತಿದ್ದಾರೆ.ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸದ ಎಕ್ಸ್ ರೇ ಮೆಷಿನ್ಸಿದ್ದಾಪುರ ಸುತ್ತಮುತ್ತಲಿನ ಭಾಗದಲ್ಲಿ ಕಾಡಾನೆಗಳು ಜನರ ದಾಳಿ ನಡೆಸುತ್ತಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ತಂದರು ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ರವಾನಿಸುತ್ತಿದ್ದು ಗಾಯಾಳುಗಳ ಮೂಳೆ ಮುರಿದಿರುವ ಬಗ್ಗೆ ಎಕ್ಸ್ ರೇ ತೆಗೆಯಲು ಆಸ್ಪತ್ರೆಯ ಮೆಷಿನ್ ಕಾರ್ಯನಿರ್ವಹಿಸುತ್ತಿಲ್ಲ. ಈ ಬಗ್ಗೆ ವಿಚಾರಿಸಿದರೆ ಎಕ್ಸ್ ರೇ ಫೀಲಂ ಇಲ್ಲ. ಫೀಲಂ ಸರಬರಾಜಿಲ್ಲದೆ ತುಂಬಾ ತಿಂಗಳುಗಳು ಕಳೆದಿವೆ ಎಂಬ ಉತ್ತರ ಆಸ್ಪತ್ರೆಯ ಸಿಬ್ಬಂದಿ ನೀಡುತ್ತಿದ್ದು ಆಸ್ಪತ್ರೆಯ ನಿರ್ವಹಣೆ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.---------------------------------
ಇಂಜಿಲೆಗೆರೆಯಲ್ಲಿ ಕಾಡಾನೆ ದಾಳಿಗೊಳಗಾದವರನ್ನು ಆಸ್ಪತ್ರೆಗೆ ಕರೆತಂದಾಗ ಅವರನ್ನು ಎಕ್ಸ್ ರೆ ಮಾಡಿಸಲು ಹೇಳಿದಾಗ ಎಕ್ಸ್ ರೆ ಮೆಷಿನಿಗೆ ಫೀಲಂ ಇಲ್ಲಾ ಎಂದಿದ್ದಾರೆ. ನಂತರ ಎಕ್ಸ್ ರೆ ಮಾಡಿಸಲು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಕಾಡಾನೆ ದಾಳಿ , ಅಪಘಾತ ಮುಂತಾದ ಅನಾಹುತಗಳು ಸಂಭವಿಸುವಾಗ ಸಮೀಪದ ಸಿದ್ದಾಪುರ ಆರೋಗ್ಯ ಕೇಂದ್ರಕ್ಕೆ ಕರೆ ತಂದರೆ ಇಲ್ಲಿ ತುರ್ತು ಚಿಕಿತ್ಸೆ ನೀಡಲು ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ. ಹಾಗಾಗಿ ಆರೋಗ್ಯ ಇಲಾಖೆ ಸಿದ್ದಾಪುರ ಆಸ್ಪತ್ರೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾಗಿದೆ.। ಪ್ರಶಾಂತ್ ವಕೀಲರು ಹಾಗೂ ಗ್ರಾ. ಪಂ ಸದಸ್ಯರು ಅಮ್ಮತ್ತಿ.--------------------------------------------------ಆನೆ ಮಾನವ ಸಂಘರ್ಷ ತಡೆಯಲು ಇಲಾಖೆ ಎಲ್ಲಾ ರೀತಿಯಲ್ಲಿ ಯೋಜನೆಗಳನ್ನು ರೂಪಿಸಿದ್ದು ಅರಣ್ಯದಂಚಿನಲ್ಲಿ 8 ಕಿ ಮಿ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲು ಕೋರಿಕೊಂಡಿದ್ದು ಅದರ ಟೆಂಡರ್ ಕಾರ್ಯ ಪ್ರಗತಿಯಲ್ಲಿದೆ. ಕಾಡಾನೆ ಕಾರ್ಯಾಚರಣೆಗೆ ಮಾನವ ಪ್ರಾಣಿ ಸಂಘರ್ಷ ತಂಡವನ್ನು ( ಮ್ಯಾಕ್ಸ್) ಹೆಚ್ಚುವರಿಯಾಗಿ 3 ತಂಡಗಳನ್ನು ರಚಿಸಿದ್ದು ಅವರಿಗೆ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಲು ವಾಹನಗಳ ವ್ಯವಸ್ಥೆ ಕೂಡ ಮಾಡಲಾಗಿದ್ದು ಕಾಡನೆಗಳನ್ನು ಕಾಡಿಗಟ್ಟುವ ಕೆಲಸ ಚುರುಕುಗೊಳಿಸಲಾಗುತ್ತಿದೆ. ಹಾಗೆಯೇ ಕಾಡಾನೆಗಳು ಅರಣ್ಯದಿಂದ ಬರುವುದನ್ನು ತಡೆಯಲು ಅರಣ್ಯದಂಚಿನಲ್ಲಿ ಏ ಐ ಕ್ಯಾಮರಗಳನ್ನು ಸ್ಥಾಪಿಸಿ ಕಾಡಾನೆಗಳು ಕಾಡಿನಿಂದ ಹೊರಗೆ ಬರುತ್ತಿದ್ದಂತೆ ಏ ಐ ತಂತ್ರಜ್ಞಾನದ ಮೂಲಕ ಸೈರನ್ ಮೊಳಗಿಸಿ ಅವು ಬರದಂತೆ ತಡೆಯುವ ಹಾಗೂ ಬೆಳೆಗಾರರಿಗೆ ಸಾರ್ವಜನಿಕರಿಗೆ ಕಾಡಾನೆಗಳಿಂದಾಗುವ ಉಪಟಳಗಳನ್ನು ತಡೆಯಲು ಎಲ್ಲಾ ಯೋಜನೆ ರೂಪಿಸಲಾಗುತ್ತಿದೆ. ಜಗನ್ನಾಥ್ ಡಿ ಸಿ ಎಫ್. ವಿರಾಜಪೇಟೆ