)
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣಕುಮಾರ ನಾಯಕ ಅವರ ನೇತೃತ್ವದಲ್ಲಿ ಗುರುವಾರದಿಂದಲೆ ಕಾರ್ಯಾಚರಣೆ ಆರಂಭವಾಗಿದ್ದು, ಸಂಸ್ಥೆಯ ದಾಖಲೆಗಳು, ಹೂಡಿಕೆದಾರರ ಮಾಹಿತಿ ಹಾಗೂ ಹಣಕಾಸು ವ್ಯವಹಾರಗಳ ಪರಿಶೀಲನೆ ನಡೆಯುತ್ತಿದೆ. ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮಹಾರಾಷ್ಟ್ರ ಮೂಲದ ಬಾಲರಾಜ್ ಮಾನೆ ಅವರು ಅಧಿಕಾರಿಗಳ ವಿಚಾರಣೆಗೆ ಇದುವರೆಗೆ ಹಾಜರಾಗಿಲ್ಲ ಎಂದು ತಿಳಿದುಬಂದಿದೆ. ಇದರಿಂದ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆದಿತ್ಯರಾಜ್ ಕ್ಯಾಪಿಟಲ್‌ಗೆ ಒಟ್ಟು 9 ಶಾಖೆಗಳಿದ್ದು, ಬೆಳಗಾವಿ, ಬೆಂಗಳೂರು ಸೇರಿದಂತೆ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಈವರೆಗೆ ಸುಮಾರು ಐದು ಸಾವಿರಕ್ಕೂ ಹೆಚ್ಚು ಹೂಡಿಕೆದಾರರ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸಿದ್ದು, ಸಂಸ್ಥೆಯ ಹಣಕಾಸು ವ್ಯವಹಾರಗಳ ಸಂಪೂರ್ಣ ವಿವರ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಹೂಡಿಕೆದಾರರ ಪಟ್ಟಿ ಹಾಗೂ ಬ್ಯಾಂಕ್ ಖಾತೆಗಳ ವಿವರಗಳನ್ನು ಒದಗಿಸುವಲ್ಲಿ ಸಿಬ್ಬಂದಿ ಸಮರ್ಪಕ ಸಹಕಾರ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಸಂಸ್ಥೆಯ ವ್ಯವಸ್ಥಾಪಕ ಸೇರಿದಂತೆ ಹಲವರನ್ನು ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಹೂಡಿಕೆ ಸಂಗ್ರಹಣೆ, ಹಣ ವರ್ಗಾವಣೆ ಮತ್ತು ಮರುಪಾವತಿ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಸಿಪಿಎಲ್ ಕಚೇರಿ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ತನಿಖೆ ಮುಂದುವರಿದಿದೆ.ಆದಿತ್ಯರಾಜ್ ಕ್ಯಾಪಿಟಲ್ ಕಚೇರಿ ಸೀಜ್:
ಬಹುಕೋಟಿ ರುಪಾಯಿ ಠೇವಣಿ ಹಾಗೂ ಹೂಡಿಕೆ ವ್ಯವಹಾರಗಳಲ್ಲಿ ಅಕ್ರಮ ನಡೆದಿರುವ ಶಂಕೆ ಹಿನ್ನೆಲೆಯಲ್ಲಿ ಆದಿತ್ಯರಾಜ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮುಖ್ಯ ಕಚೇರಿಯನ್ನು ಅಧಿಕಾರಿಗಳು ಶುಕ್ರವಾರ ಸೀಜ್ ಮಾಡಿದ್ದಾರೆ. ಉಪವಿಭಾಗಾಧಿಕಾರಿ ಶ್ರವಣಕುಮಾರ ನಾಯಕ್ ಅವರ ನೇತೃತ್ವದಲ್ಲಿ ಕಂದಾಯ, ಸಹಕಾರ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ಕಳೆದ ಎರಡು ದಿನಗಳಿಂದ ಸಂಸ್ಥೆಯ ದಾಖಲೆಗಳು ಮತ್ತು ಹಣಕಾಸು ವ್ಯವಹಾರಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿತ್ತು.ನಗರದ ಭಾಗ್ಯನಗರದಲ್ಲಿರುವ ಸಂಸ್ಥೆಯ ಮುಖ್ಯ ಶಾಖೆಯಲ್ಲಿ ಸುಮಾರು 72 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಎರಡು ದಿನಗಳಿಂದ ಸಿಬ್ಬಂದಿಯಿಂದ ದಾಖಲೆಗಳು ಹಾಗೂ ಹೂಡಿಕೆ ಸಂಬಂಧಿತ ಮಾಹಿತಿಯನ್ನು ಅಧಿಕಾರಿಗಳು ಕಲೆಹಾಕಿದ್ದಾರೆ. ಅಗತ್ಯವಿದ್ದಲ್ಲಿ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.ಪರಿಶೀಲನೆ ವೇಳೆ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಎರಡು ದಿನಗಳ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದ್ದು, ಜಿಲ್ಲಾಧಿಕಾರಿಗಳ ಸೂಚನೆಯಂತೆ ಕಚೇರಿಯನ್ನು ಸೀಜ್ ಮಾಡುವ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ತಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.