ಹರ್ಷಾ ಶುಗರ್ಸ್‌ ಸಿಬ್ಬಂದಿಯಿಂದ ಯುವಕನ ಮೇಲೆ ಹಲ್ಲೆ ಆರೋಪ

KannadaprabhaNewsNetwork |  
Published : Jun 06, 2026, 02:45 AM IST
ನಮ್ಮ ಎಂ.ಬಿ.ಪಾಟೀಲ ನಮ್ಮ ಹೆಮ್ಮೆ: ಸೈಯ್ಯದ ಜಮೀರಅಹಮ್ಮದ ಬಕ್ಷಿ | Kannada Prabha

ಸಾರಾಂಶ

ಕಬ್ಬು ಕಟಾವಿಗಾಗಿ ಪಡೆದಿದ್ದ ಸಾಲದ ಹಣದ ವಿವಾದ ಹಿನ್ನೆಲೆಯಲ್ಲಿ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕಬ್ಬು ಕಟಾವಿಗಾಗಿ ಪಡೆದಿದ್ದ ಸಾಲದ ಹಣದ ವಿವಾದ ಹಿನ್ನೆಲೆಯಲ್ಲಿ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ನಡೆದಿದೆ.

ಸವದತ್ತಿ ತಾಲೂಕಿನ ಕರಿಕಟ್ಟಿ ಗ್ರಾಮದ ಸಮೀಪ ಇರುವ ಹರ್ಷಾ ಶುಗರ್ಸ್ ಕಾರ್ಖಾನೆಯ 20ಕ್ಕೂ ಹೆಚ್ಚು ಸಿಬ್ಬಂದಿ ಸೇರಿ ಡೋಂಗರೇಬಾಷಾ ಕಡಬಿ ಎಂಬ ಯುವಕನನ್ನು ಅಪಹರಿಸಿ ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.ಹಲ್ಲೆಗೊಳಗಾದ ಯುವಕನ ಸಹೋದರ ಬಂದೇನವಾಜ್ ಕಬ್ಬು ಕಟಾವು ಕೆಲಸಕ್ಕಾಗಿ ಕಾರ್ಖಾನೆಯಿಂದ ಸುಮಾರು ₹4 ಲಕ್ಷ ಮುಂಗಡ ಹಣ ಪಡೆದಿದ್ದ. ಆದರೆ ಬಳಿಕ ಕಬ್ಬು ಕಟಾವು ಕಾರ್ಯ ನಡೆಸದೇ ಇರುವ ಹಿನ್ನೆಲೆಯಲ್ಲಿ ಹಣ ವಸೂಲಿಗೆ ಕಾರ್ಖಾನೆಯ ಸಿಬ್ಬಂದಿ ಮುಂದಾಗಿದ್ದರು ಎನ್ನಲಾಗಿದೆ.ಹಣ ವಸೂಲಿಗಾಗಿ ಟ್ರ್ಯಾಕ್ಟರ್ ಹಾಗೂ ಟಿಪ್ಪರ್ ವಾಹನಗಳನ್ನು ಜಪ್ತಿ ಮಾಡಲು ಬಂದಿದ್ದ ಸಿಬ್ಬಂದಿ, ಈ ವೇಳೆ ಬಂದೇನವಾಜ್ ಬದಲಿಗೆ ಅವರ ಸಹೋದರ ಡೋಂಗರೇಬಾಷಾ ಕಡಬಿಯನ್ನು ರಾಮದುರ್ಗ ಪಟ್ಟಣದಿಂದ ಬಲವಂತವಾಗಿ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಯುವಕನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಲಾಗಿದ್ದು, ಘಟನೆಯಿಂದ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಘಟನೆ ರಾಮದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈವರೆಗೆ ಕುಟುಂಬಸ್ಥರು ಅಧಿಕೃತ ದೂರು ದಾಖಲಿಸಿಲ್ಲ. ಆದಾಗ್ಯೂ, ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋ ಹಾಗೂ ಇತರೆ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪೊಲೀಸರು ಸ್ವಯಂಪ್ರೇರಿತವಾಗಿ ತನಿಖೆ ಕೈಗೊಳ್ಳುವ ಸಾಧ್ಯತೆ ಇದೆ. ಘಟನೆಯ ಕುರಿತು ಕಾರ್ಖಾನೆ ಆಡಳಿತದ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ. ದೂರು ದಾಖಲಾಗಿದೆಯೇ ಹಾಗೂ ಹಲ್ಲೆಯ ಆರೋಪದಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದು ಪೊಲೀಸ್ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ಪಾದನೆಯ ಶೇ.70ಕ್ಕೂ ಅಧಿಕ ಕಾಫಿ ರಫ್ತು: ಬಸವರಾಜ್‌
ಕಾಂಗ್ರೆಸ್ ನಾಯಕರ ಹೇಳಿಕೆಗಳು ಹಾಸ್ಯಾಸ್ಪದ: ನವೀನ್ ನಾಯಕ್