ಕನ್ನಡಪ್ರಭ ವಾರ್ತೆ ಕೊಡೇಕಲ್
ರಾಜ್ಯದ 3ನೇ ಅತೀ ದೊಡ್ಡ ಜಲಾಶಯವಾದ ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ನಾರಾಯಣಪುರದ ಬಸವ ಸಾಗರ ಜಲಾಶಯದಿಂದ 3.30 ಲಕ್ಷ ಕ್ಯೂಸೆಕ್‌ಗೂ ಹೆಚ್ಚಿನ ಪ್ರಮಾಣದ ನೀರನ್ನು ಕೃಷ್ಣಾ ನದಿಗೆ ಬಿಡುತ್ತಿರುವುದರಿಂದ, ಧುಮ್ಮಿಕ್ಕುವ ರುದ್ರರಮಣೀಯ ದೃಶ್ಯದ ಸೊಬಗು ವೀಕ್ಷಿಸಲು ಜಲಾಶಯಕ್ಕೆ ಜನಸಾಗರವೇ ಹರಿದುಬರುತ್ತಿದೆ.ಕಳೆದ ಕೆಲ ದಿನಗಳಿಂದ ಬಸವಸಾಗರ ಜಲಾಶಯದಿಂದ ನದಿಗೆ 3 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಹರಿದು ಬಿಡುತ್ತಿದ್ದು, ದಿನದಿಂದ ದಿನಕ್ಕೆ ನದಿಗೆ ಬಿಡುವ ನೀರಿನ ಪ್ರಮಾಣ ಜಾಸ್ತಿಯಾಗುತ್ತಲೇ ಇರುವುದರಿಂದ ಅದರಲ್ಲೂ ಜಲಾಶಯದ ಎಲ್ಲಾ 30 ಗೇಟ್ ತೆಗೆದು ನದಿಗೆ ನೀರು ಹರಿ ಬಿಡುತ್ತಿರುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಲಾಶಯಕ್ಕೆ ಆಗಮಿಸುತ್ತಿದ್ದಾರೆ. ಇನ್ನು ಸಾವಿರಾರು ಸಂಖ್ಯೆಯಲ್ಲಿ ಬರುತ್ತಿರುವ ಜನರಿಂದಾಗಿ ಜಲಾಶಯದ ಎದುರು ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು ಪೋಲಿಸರು ವಾಹನ ದಟ್ಟಣೆ ನಿಯಂತ್ರಸಲು ಹರಸಾಹಸ ಪಡುತ್ತಿದ್ದಾರೆ.
ಜಲಾಶಯದಿಂದ ಬಿಡಲಾಗುತ್ತಿರುವ ನೀರಿನ ಪ್ರಮಾಣದಿಂದಾಗಿ ಶಹಾಪುರ ತಾಲೂಕಿನ ಕೊಳ್ಳುರು (ಎಂ) ಗ್ರಾಮದ ಹಲವು ಜಮೀನುಗಳಿಗೆ ನೀರು ನುಗ್ಗಿದ್ದು, ಸಾವಿರಾರು ಎಕರೆ ಭೂಮಿ ಜಲಾವೃತಗೊಳ್ಳುವ ಸಾಧ್ಯತೆಗಳಿವೆ. - ರೈತಾಪಿ ವರ್ಗ ಕಂಗಾಲು:ಈಗತಾನೇ ಆರಂಭವಾಗಿದ್ದ ಮುಂಗಾರು ಬೆಳೆನಾಶವಾಗಿದ್ದು, ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತರು ಚಿಂತಾಕ್ರಾಂತರಾಗಿದ್ದಾರೆ. ನದಿ ತೀರದ ಸಜ್ಜೆ, ತೊಗರಿ, ಕಬ್ಬು ಸೇರಿದಂತೆ ಇತರೆ ಬೆಳೆಗಳು ಜಲಾವೃತಗೊಳ್ಳುವ ಹಂತಕ್ಕೆ ತಲುಪಿದ್ದು ಜಲಾಶಯಕ್ಕೆ ಪ್ರತಿನಿತ್ಯ ಒಳಹರಿವಿನ ಪ್ರಮಾಣ ಜಾಸ್ತಿಯಾಗಿರುವುದರಿಂದ ಪ್ರವಾಹ ಭೀತಿಯಲ್ಲೇ ನದಿ ತೀರದ ಜನತೆ ದಿನದೂಡುವಂತಾಗಿದೆ.
ಕಳೆದ 12 ದಿನಗಳಿಂದ ಜಲಾಶಯದಿಂದ ಲಕ್ಷಕ್ಕೂ ಅಧಿಕ ನೀರು ಬಿಡುತ್ತಿರುವುದರಿಂದ ನದಿ ತೀರದ ಜಮೀನುಗಳು ಜಲಾವೃತಗೊಳ್ಳುತ್ತಿವೆ ಸದ್ಯಕ್ಕೆ ಜಲಾಶಯದಿಂದ ಇನ್ನಷ್ಟು ದಿನಗಳವರೆಗೆ ನೀರು ಬಿಡುವ ಸಾಧ್ಯತೆಗಳಿರುವುದರಿಂದ ರೈತರಲ್ಲಿ ಮತ್ತೇ 2019ರ ಪ್ರವಾಹದ ನೆರೆಯ ಭೀತಿಯಲ್ಲಿದ್ದಾರೆ.ಜಲಾಶಯಕ್ಕೆ ಹತ್ತಿರವಿರುವ ಛಾಯಾ ಭಗವತಿ ದೇಗುಲದ ಗರ್ಭಗುಡಿಗೆ ನೀರು ಪ್ರವೇಶಿಸಿದ್ದು, ದೇವಸ್ಥಾನದ ಮುಂಭಾಗದಲ್ಲಿರುವ ಮಂಟಪ ಸಂಪೂರ್ಣ ಮುಳುಗುವ ಹಂತಕ್ಕೆ ತಲುಪಿದೆ ಇದರಿಂದ ದೇಗುಲದ ದರ್ಶನ ಆಗುತ್ತಿಲ್ಲ. ಬದಲಿಗೆ ಮೆಟ್ಟಿಲಲ್ಲೇ ಅರ್ಚಕರು ದೇವಿಯ ಮೂರ್ತಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಭಕ್ತರು ಕೂಡ ಮೇಲ್ಭಾಗದಲ್ಲೇ ದರ್ಶನ ಪಡೆದು ತೆರಳುತ್ತಿದ್ದಾರೆ.
ಸದ್ಯ ಕೃಷ್ಣೆಯ ಒಡಲು ಭೋರ್ಗರೆಯುತ್ತಿದ್ದು ಪ್ರವಾಹ ಭೀತಿ ಕಳೆದ ಕೆಲ ದಿನಗಳಿಂದ ಉಂಟಾಗಿದೆ ಕೃಷ್ಣಾ ತೀರದ 45ಕ್ಕೂ ಹೆಚ್ಚು ಗ್ರಾಮಗಳ ಜನ-ಜಾನುವಾರು ನದಿಗೆ ಇಳಿಯದಂತೆ ನಿಗಮದ ಅಧಿಕಾರಿಗಳು ಖಡಕ್ ಸೂಚನೆ ಹೊರಡಿಸಿದ್ದಾರೆ.ಕಳೆದು 3 ದಿನಗಳಿಂದ 3 ಲಕ್ಷ ಕ್ಯುಸೆಕ್ ನೀರು ನದಿಗೆ ಹರಿಸಲಾಗುತಿತ್ತು. ಆದರೆ, ಈಗ ಆಲಮಟ್ಟಿ ಜಲಾಶಯದಿಂದ ಹೊರಹರಿವಿನ ಪ್ರಮಾಣ ಜಾಸ್ತಿಯಾಗಿದ್ದರಿಂದ ಬಸವಸಾಗರ ಜಲಾಶಯದಿಂದ ನದಿಗೆ ಹರಿಬಿಡುತ್ತಿದ್ದ ನೀರಿನ ಪ್ರಮಾಣದಲ್ಲಿ ಮತ್ತೇ ಏರಿಕೆ ಕಂಡಿದ್ದು, ಸದ್ಯ ಭಾನುವಾರ ಜಲಾಶಯದ ಪ್ರಮುಖ 30 ಕ್ರಸ್ಟ್ ಗೇಟ್‌ಗಳ ಮುಖಾಂತರ 3.30 ಲಕ್ಷ ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ. ಆದರೂ ಸಹಿತ ಜಲಾಶಯಕ್ಕೆ ಒಂದು ವೇಳೆ ಹೆಚ್ಚಿನ ಪ್ರಮಾಣದಲ್ಲಿ ಒಳಹರಿವು ಬಂದರೆ ಯಾವುದೇ ಸಮಯದಲ್ಲಾದರೂ ನದಿಪಾತ್ರಕ್ಕೆ ನೀರು ಹರಿದುಬಿಡುವ ಸಾಧ್ಯತೆಗಳಿರುವುದರಿಂದ ನದಿ ತೀರದ ಜನತೆ ಎಚ್ಚರದಿಂದಿರಬೇಕೆಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.