ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ: ರಾಘವೇಂದ್ರ ಹಿಟ್ನಾಳ

KannadaprabhaNewsNetwork |  
Published : Jul 29, 2024, 12:54 AM IST
28ಕೆಪಿಎಲ್26 ಕೊಪ್ಪಳ ತಾಲೂಕಿನ ಬೆಳಗಟ್ಟಿ ಗ್ರಾಮದಲ್ಲಿ ಕಲ್ಮಲಾ-ಶಿಗ್ಗಾಂವ್ ರಸ್ತೆ ಕಾಮಗಾರಿಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಭಾನುವಾರ ಭೂಮಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಕ್ಷೇತ್ರದಲ್ಲಿ ಹದಗೆಟ್ಟ ಗ್ರಾಮೀಣ ರಸ್ತೆಗಳ ಸುಧಾರಣೆಗೆ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆಗೊಳಿಸಿ, ಮಾದರಿ ರಸ್ತೆಗಳನ್ನಾಗಿ ನಿರ್ಮಾಣ ಮಾಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ.

ಕಂಪ್ಲಿ-ಬೆಳಗಟ್ಟಿ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಶಾಸಕ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕ್ಷೇತ್ರದಲ್ಲಿ ಹದಗೆಟ್ಟ ಗ್ರಾಮೀಣ ರಸ್ತೆಗಳ ಸುಧಾರಣೆಗೆ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆಗೊಳಿಸಿ, ಮಾದರಿ ರಸ್ತೆಗಳನ್ನಾಗಿ ನಿರ್ಮಾಣ ಮಾಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.

ತಾಲೂಕಿನ ಬೆಳಗಟ್ಟಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡ ಕಂಪ್ಲಿ-ಬೆಳಗಟ್ಟಿ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕಲ್ಮಲಾ-ಶಿಗ್ಗಾಂವ್ ರಸ್ತೆ ನಿರ್ಮಾಣ ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿದ್ದು, ಹಂತ ಹಂತವಾಗಿ ರಸ್ತೆ ಸುಧಾರಣೆ ಮಾಡಲಾಗುತ್ತಿದೆ. ಸುಮಾರು ₹ 20 ಕೋಟಿ ಅನುದಾನದಲ್ಲಿ ಕಂಪ್ಲಿಯಿಂದ ಬೆಳಗಟ್ಟಿ ವರೆಗೆ ರಸ್ತೆ ಕಾಮಗಾರಿಗೆ ಚಾಲನೆ‌ ನೀಡಲಾಗಿದೆ. ಸಿಂಗಟಾಲೂರು ಏತ ನೀರಾವರಿ ಯೋಜನೆ ಮೂಲಕ ಈ ಭಾಗದ ರೈತರ ಜಮೀನುಗಳಿಗೆ ನೀರು ಒದಗಿಸುವ ಕೆಲಸ ಮಾಡುವೆ ಎಂದರು.

ಅಳವಂಡಿ ಭಾಗದ 16 ಕೆರೆ ತುಂಬಿಸುವ ಯೋಜನೆಗೆ ಈಗಾಗಲೇ ₹ 22.19 ಕೋಟಿ ಅನುದಾನ ಮಂಜೂರು ಆಗಿದ್ದು ಟೆಂಡರ್ ಕೂಡ ಮುಗಿದಿದ್ದು ಶೀಘ್ರದಲ್ಲಿ ಅಡಿಗಲ್ಲು ನೆರವೇರಿಸಿ ಕೆರೆ ತುಂಬಿಸುವ ಕಾಮಗಾರಿಗೆ ಚಾಲನೆ ನೀಡುತ್ತೇವೆ. ಈ ಯೋಜನೆಯಲ್ಲಿ ಕವಲೂರಿನ 3 ಕೆರೆ, ಅಳವಂಡಿಯ 3 ಕೆರೆ, ಬೆಳಗಟ್ಟಿ ಕೆರೆ, ಹಟ್ಟಿ ಕೆರೆ, ಮುರ್ಲಾಪುರ ಕೆರೆ, ಘಟ್ಟರಡ್ಡಿಹಾಳ ಕೆರೆ, ಮೋರನಾಳ ಗ್ರಾಮದ 2 ಕೆರೆ, ಬೆಟಗಗೇರಿ ಕೆರೆ, ಹಂದ್ರಾಳ ಕೆರೆ ಹಾಗೂ ಕೋಳೂರು ಕೆರೆ ತುಂಬಿಸಲಾಗುವುದು ಎಂದರು.

ಬಹುದಿನಗಳ ಬೇಡಿಕೆಯಾದ ಕೇಸಲಾಪುರ, ಹೈದರ್ ನಗರ, ಹಟ್ಟಿ, ಬೆಳಗಟ್ಟಿ, ಮುರ್ಲಾಪುರ ಘಟ್ಟರೆಡ್ಡಿಹಾಳ ಏತ ನೀರಾವರಿ ಯೋಜನೆಗೆ ₹10 ಕೋಟಿ ಅನುದಾನ ಮೀಸಲಿಟ್ಟು ಟೆಂಡರ್ ಕರೆಯುವ ಕೆಲಸ ಶೀಘ್ರದಲ್ಲಿ ಮಾಡುತ್ತೇವೆ ಎಂದು ತಿಳಿಸಿದರು.

ಸಂಸದ ಕೆ. ರಾಜಶೇಖರ ಹಿಟ್ನಾಳ ಮಾತನಾಡಿ, ಕಲ್ಮಲಾ-ಶಿಗ್ಗಾಂವ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರದಿಂದ ವಿಶೇಷ ಅನುದಾನ ತಂದು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿ ಮಾಡುವೆ. ಅಲ್ಲದೇ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಹ ಕವಲೂರು ಮಾರ್ಗದ ಮೂಲಕ ಹಾದು ಹೋಗಲಿದೆ. ಇದರಿಂದ ಕ್ಷೇತ್ರದ ರಸ್ತೆ ಸಂಪರ್ಕ ಜಾಲ ಮತ್ತಷ್ಟು ವಿಸ್ತಾರಗೊಳ್ಳಲಿದೆ ಎಂದರು.

ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಸಿಂಗಟಾಲೂರು ಏತ ನೀರಾವರಿ, ಅಳವಂಡಿ-ಬೆಟಗೇರಿ, ಬಹದ್ದೂರ್ ಬಂಡಿ- ನವಲಕಲ್ ಏತ ನೀರಾವರಿ ಯೋಜನೆ ಈ ಭಾಗದ ರೈತರ ಬಹುದಿನದ ಕನಸಾಗಿದೆ. ಇದಕ್ಕಾಗಿ ಅನೇಕ ಹೋರಾಟ ನಡೆದಿವೆ. ಹೋರಾಟದ ಫಲವಾಗಿ ಈಗಾಗಲೇ ಸಿಂಗಟಾಲೂರು ಏತ ನೀರಾವರಿ ಹಾಗೂ ಇತರೆ ಏತ ನೀರಾವರಿ ಯೋಜನೆಗಳ ಕಾಮಗಾರಿ ಪ್ರಾರಂಭಗೊಂಡಿವೆ ಎಂದರು.

ಬೆಳಗಟ್ಟಿಯ ಹಜರತ್ ಮುಸ್ತಫಾ ಗುರುಗಳು, ಮುಖಂಡರಾದ ಕೃಷ್ಣರಡ್ಡಿ ಗಲಭಿ, ಭರಮಪ್ಪ ನಗರ, ಕೆ.ಎಂ. ಸೈಯದ್, ಗಾಳೆಪ್ಪ ಪೂಜಾರ, ರಾಮಣ್ಣ ಚೌಡ್ಕಿ, ಕೊಪ್ಪಳ ತಹಶೀಲ್ದಾರ್ ವಿಠ್ಠಲ್ ಚೌಗಲೆ, ಚೌಡಪ್ಪ ಜಂತ್ಲಿ, ಅನ್ವರ ಗಡಾದ, ಗುರು ಬಸವರಾಜ ಹಳ್ಳಿಕೇರಿ, ಭೀಮಣ್ಣ ಬೋಚನಹಳ್ಳಿ, ಮಂಜುನಾಥ ಹಂದ್ರಾಳ, ತೋಟಪ್ಪ ಶಿಂಟ್ರ, ನೀಲಪ್ಪ ಹಟ್ಟಿ, ಹೊನ್ನಪಗೌಡ, ಸಲೀಂ ಅಳವಂಡಿ, ಭಾಗ್ಯಶ್ರೀ, ಮಹಾಂತೇಶ ಕವಲೂರು, ಮುತ್ತಣ್ಣ ಬಿಸರಳ್ಳಿ, ಮುದಿನ್ ಸಾಬ್ ಆಲೂರು, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಲ್ಟನ್ ಸೇರಿದಂತೆ ಇತರರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ