ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಭಾನುವಾರ ನಾಲೆ ಕಾಮಗಾರಿ ಸ್ಥಳಕ್ಕೆ ಕರವೇ ತಾಲೂಕು ಅಧ್ಯಕ್ಷ ವೇಣು ನೇತೃತ್ವದಲ್ಲಿ ತೆರಳಿದ ಕಾರ್ಯಕರ್ತರು ಕಾಮಗಾರಿ ವೀಕ್ಷಣೆ ಮಾಡಿದರು. ಕಳಪೆ ಕಾಮಗಾರಿ ಕಂಡು ಸ್ಥಳಕ್ಕೆ ನೀರಾವರಿ ಇಲಾಖೆ ಅಧಿಕಾರಿ ಎಇಇ ಚಂದ್ರೇಗೌಡರನ್ನು ಬರಮಾಡಿಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು20 ವರ್ಷಗಳ ನಿರಂತರರೈತರ ಹೋರಾಟದ ಫಲ ನಾಲೆ ದುರಸ್ತಿಗೆ 2 ವರ್ಷಗಳ ಹಿಂದೆ ಸಚಿವರಾಗಿದ್ದ ಕೆ.ಸಿ.ನಾರಾಯಣಗೌಡ ಚಾಲನೆ ನೀಡಿದರು. 55 ಕೋಟಿ ರು.ಅನುದಾನದಲ್ಲಿ ಕಾಮಗಾರಿ ಕಳಪೆ ಕಾಮಗಾರಿಯಾಗಿದೆ ಎಂದು ದೂರಿದರು.ಕ್ರಿಯಾಯೋಜನೆ ರೀತಿ ಕಾಮಗಾರಿ ನಡೆಯುತ್ತಿಲ್ಲ. ಏರಿ, ನಾಲಾ ಗೋಡೆ ಲೈನಿಂಗ್, ಅಡ್ಡ ಮೋರಿಗಳ ಕಾಮಗಾರಿ ಕಳಪೆಯಾಗಿ ಅಲ್ಲಲ್ಲಿ ಬಿರುಕು, ಕುಸಿಯುತ್ತಿವೆ. ಗುಣಮಟ್ಟದ ಸಾಮಗ್ರಿ ಬಳಸದೆ ಅವೈಜ್ಞಾನಿಕವಾಗಿ ಕಳಪೆ ಕಾಮಗಾರಿ ಮಾಡುತ್ತಿರುವುದು ಕಾಣುತ್ತಿದೆ ಎಂದು ಆರೋಪಿಸಿದರು.
ಕೂಡಲೇ ಸ್ಥಳಕ್ಕೆ ಶಾಸಕ ಎಚ್.ಟಿ.ಮಂಜು ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಬೇಕು. ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿಗಳು, ಗುತ್ತಿಗೆದಾರ ವಿರುದ್ಧ ಸೂಕ್ತ ಕ್ರಮಜರುಗಿಸಬೇಕು ಎಂದು ಆಗ್ರಹಿಸಿದರು.
ಕಿಕ್ಕೇರಿ ವಿಭಾಗದ ಎಇಇ ಚಂದ್ರೇಗೌಡ ಮಾತನಾಡಿ, ಮಳೆಗಾಲವಿದ್ದು ಕಾಮಗಾರಿ ವಿಳಂಭವಾಗುತ್ತಿದೆ. ಕಳಪೆ ಕಾಮಗಾರಿ ನಡೆದಿದ್ದಲ್ಲಿ ಪರಿಶೀಲಿಸಿ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.