ಕೊಳ್ಳೇಗಾಲದಲ್ಲಿ ‘ವಿಕಸಿತ ಭಾರತ ರೋಜಗಾರ್ ಆ್ಯಂಡ್ ಆಜೀವಿಕ ಮಿಷನ್’ (ಜಿ ರಾಮ್ ಜಿ) ಅನುಷ್ಠಾನ ಸಭೆ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲತಾಲೂಕಿನಲ್ಲಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಆ್ಯಂಡ್ ಅಜೀವಿಕಾ ಮಿಷನ್ ಯೋಜನೆಯ ಟಿಟಿಸಿ ಅನುಷ್ಠಾನಗೊಂಡಿದ್ದು, ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಹಾಯಕ ನಿರ್ದೇಶಕ ಬಿ.ಕೆ ಸಂದೇಶ ಅವರು ತಿಳಿಸಿದರು.
ಚಿಕ್ಕಲ್ಲೂರು ಗ್ರಾಮದಲ್ಲಿ ತಾಲೂಕು ಪಂಚಾಯ್ತಿಯಿಂದ ಆಯೋಜಿಸಲಾಗಿದ್ದ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಆ್ಯಂಡ್ ಅಜೀವಿಕಾ ಮಿಷನ್ ಯೋಜನೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮೀಣ ಜನರನ್ನು ಆರ್ಥಿಕವಾಗಿ ಸ್ವಾವಲಂಬನೆಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯು ಜು.1ರಿಂದ ಅಧಿಕೃತವಾಗಿ ಅನುಷ್ಠಾನಕ್ಕೆ ಬಂದಿದೆ. ಎಲ್ಲರೂ ಈ ಯೋಜನೆಯ ಅನುಕೂಲ ಪಡೆಯಬೇಕು ಎಂದರು.
ಗ್ರಾಮೀಣ ಭಾಗದ ಜನರು ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ಕಡಿಮೆ ಮಾಡಿ ಸ್ವಂತ ಊರಿನಲ್ಲಿಯೇ ಉದ್ಯೋಗ ಮತ್ತು ಜೀವನೋಪಾಯಕ್ಕೆ ಅವಕಾಶ ಕಲ್ಪಿಸುವುದು ಮುಖ್ಯ ಉದ್ದೇಶವಾಗಿದೆ. ಉದ್ಯೋಗ ಖಾತರಿ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಿರುವ ಸರ್ಕಾರವು ಗ್ರಾಮೀಣ ಕುಟುಂಬಗಳಿಗೆ 100 ದಿನಗಳಿಂದ 125 ದಿನಗಳ ಉದ್ಯೋಗ ಖಾತರಿ ನೀಡುವ ಮೂಲಕ ಬಡ ಕಾರ್ಮಿಕರ ಬದುಕಿಗೆ ಮತ್ತಷ್ಟು ಭದ್ರತೆ ಒದಗಿಸಿ ಜನರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ಹೇಳಿದರು.
ಕೃಷಿ ಚಟುವಟಿಕೆಯ ಸಮಯದಲ್ಲಿ 60 ದಿನಗಳ ಕಾಲ ವಿರಾಮ ನೀಡುವ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ. ಚಿಕ್ಕಲ್ಲೂರು ಮತ್ತು ತೆಳ್ಳನೂರು ಗ್ರಾಮ ಪಂಚಾಯ್ತಿಯು ಈ ಯೋಜನೆಯನ್ನು ಸಮರ್ಪಕ ಅನುಷ್ಠಾನ ಮಾಡಬೇಕು ಎಂದರು.
ಹೊಸ ಯೋಜನೆ ಜಾರಿಯಾದರೂ ನರೇಗಾ ಯೋಜನೆಯಡಿ ಈಗಾಗಲೇ ನೀಡಿರುವ ಉದ್ಯೋಗ ಚೀಟಿಗಳು ಚಾಲ್ತಿಯಲ್ಲಿ ಇರುತ್ತವೆ. ಹೀಗಾಗಿ ಕೂಲಿ ಕಾರ್ಮಿಕರು ಹೊಸದಾಗಿ ನೋಂದಣಿ ಮಾಡುವ ಅಗತ್ಯವಿಲ್ಲ. ಈ ಯೋಜನೆಯಲ್ಲಿ 318 ಕಾಮಗಾರಿಯನ್ನು ಅನುಷ್ಠಾನ ಮಾಡಲು ಅವಕಾಶವಿದೆ ಎಂದು ಹೇಳಿದರು.ಯೋಜನೆಯಡಿ ಕೆರೆ-ಕಟ್ಟೆ, ಕಾಲುವೆ, ಕುಡಿಯುವ ನೀರು, ಮನೆ ನಿರ್ಮಾಣಕ್ಕೆ ನೆರವು, ಜಲ ಸಂರಕ್ಷಣೆ, ಚೆಕ್‌ಡ್ಯಾಂ ನಿರ್ಮಾಣ, ಕೊಳವೆ ಪುನಃಶ್ಚೇತನ, ಸಿ.ಸಿ ರಸ್ತೆ, ಅಂಗನವಾಡಿ ಕಟ್ಟಡ ದುರಸ್ತಿ, ಪಂಚಾಯತ್ ರಾಜ್ ಕಟ್ಟಡ ದುರಸ್ತಿ ಮತ್ತು ನಿರ್ವಹಣೆ, ಅಡುಗೆ ಕೋಣೆ, ಆಟದ ಮೈದಾನ, ಶಾಲಾ ಶೌಚಾಲಯ, ಸ್ವ-ಸಹಾಯ ಸಂಘದ ಕಟ್ಟಡ ನಿರ್ಮಾಣ ಮತ್ತು ಗೋದಾಮು ನಿರ್ಮಾಣ ಇನ್ನಿತರೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬಹುದಾಗಿದೆ. ಯೋಜನೆಯ ಬದಲಾವಣೆಯಿಂದ ಕೂಲಿಕಾರರು ಉದ್ಯೋಗದಿಂದ ವಂಚಿತರಾಗುವುದಿಲ್ಲ. ಎಲ್ಲಾ ಅರ್ಹರಿಗೆ ನಿರಂತರ ಕೆಲಸ ದೊರೆಯಲಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್, ಸ್ವ-ಸಹಾಯ ಸಂಘದ ಸದಸ್ಯರು ಹಾಗೂ ತೆಳ್ಳನೂರು ಮತ್ತು ಚಿಕ್ಕಲ್ಲೂರು ಪಂಚಾಯ್ತಿ ಸಿಬ್ಬಂದಿ ಈ ವೇಳೆ ಹಾಜರಿದ್ದರು.---
22ಸಿಎಚ್‌ಎನ್53ಕೊಳ್ಲೇಗಾಲ ತಾಲೂಕಿನ ಚಿಕ್ಕಲ್ಲೂರು ಗ್ರಾಮದಲ್ಲಿ ತಾಲೂಕು ಪಂಚಾಯ್ತಿಯಿಂದ ಆಯೋಜಿಸಿದ್ದ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಆ್ಯಂಡ್ ಅಜೀವಿಕಾ ಮಿಷನ್ ಯೋಜನೆಯ ಕಾರ್ಯಕ್ರಮವನ್ನು ಸಹಾಯಕ ನಿರ್ದೇಶಕ ಬಿ.ಕೆ ಸಂದೇಶ ಅವರು ಉದ್ಘಾಟಿಸಿದರು.