ರಾಜ್ಯದಲ್ಲಿ ಮುಂದುವರಿದ ‘ಸಾಮೂಹಿಕ’ SIR ಪ್ರಕ್ರಿಯೆ!

KannadaprabhaNewsNetwork |  
Published : Jul 07, 2026, 02:15 AM IST
ಪೊಟೊ: 06ಎಸ್‌ಎಂಜಿಕೆಪಿ10 | Kannada Prabha

ಸಾರಾಂಶ

ರಾಜ್ಯದಲ್ಲಿ ಮತದಾರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವೇಳೆ ಚುನಾವಣಾ ಆಯೋಗದ ನಿಯಮಗಳನ್ನು ಗಾಳಿಗೆ ತೂರುತ್ತಿರುವ ಮತ್ತಷ್ಟು ಪ್ರಕರಣಗಳು ಬಯಲಿಗೆ ಬಂದಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:

ರಾಜ್ಯದಲ್ಲಿ ಮತದಾರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವೇಳೆ ಚುನಾವಣಾ ಆಯೋಗದ ನಿಯಮಗಳನ್ನು ಗಾಳಿಗೆ ತೂರುತ್ತಿರುವ ಮತ್ತಷ್ಟು ಪ್ರಕರಣಗಳು ಬಯಲಿಗೆ ಬಂದಿವೆ.

ಚಿಕ್ಕಮಗಳೂರು ನಗರದ ಉಪ್ಪಳ್ಳಿ ವಾರ್ಡ್‌ನಲ್ಲಿ ಅಧಿಕಾರಿಗಳು ಕಂತೆ-ಕಂತೆಯಲ್ಲಿ ಎನ್ಯುಮರೇಶನ್‌ ಫಾರಂಗಳನ್ನು ಕಾಂಗ್ರೆಸ್‌ ಮುಖಂಡರೊಬ್ಬರ ಕೈಗೆ ಹಸ್ತಾಂತರಿಸುವ ಫೋಟೋ ವೈರಲ್‌ ಆಗಿದೆ. ಎಸ್‌ಐಆರ್‌ ಸೂಪರ್‌ ವೈಸರ್‌ ಆಗಿರುವ ನಗರಸಭೆಯ ಹೆಲ್ತ್‌ ಇನ್ಸ್‌ಪೆಕ್ಟರ್‌ ನಾಗಪ್ಪ ಎಂಬುವರು ಭಾನುವಾರ ಎನ್ಯುಮರೇಶನ್‌ ಫಾರಂಗಳ ದೊಡ್ಡ ಕಂತೆಯನ್ನು ಕಾಂಗ್ರೆಸ್‌ನ ಬೂತ್‌ ಏಜೆಂಟ್‌-2 ರಜಾಕ್‌ ಎಂಬುವರಿಗೆ ನೀಡಿದ್ದಾರೆ.

ಕಡೂರು ತಾಲೂಕಿನ ನಿಡಗಟ್ಟ ಗ್ರಾ.ಪಂ.ವ್ಯಾಪ್ತಿಯ ಬೂತ್ ಸಂಖ್ಯೆ 67, 68 ಹಾಗೂ 69ರಲ್ಲಿ ಮತಗಟ್ಟೆಯ ಅಧಿಕಾರಿಗಳು ಒಂದು ಎನ್ಯುಮರೇಶನ್ ಫಾರಂ ನ್ನು ಭರ್ತಿ ಮಾಡಿ, ಅವುಗಳನ್ನು ತಾವೇ ಇಟ್ಟುಕೊಂಡಿದ್ದು, ಮತ್ತೊಂದು ಫಾರಂಗೆ ಸಹಿ ಮಾಡದೆ ಕೇವಲ ಖಾಲಿ ಫಾರಂಗಳನ್ನು ಮನೆ-ಮನೆಗೆ ವಿತರಿಸಿದ್ದಾರೆ ಎಂಬ ದೂರು ಕೇಳಿ ಬಂದಿದೆ.

ಇದೇ ವೇಳೆ, ಶಿವಮೊಗ್ಗ ನಗರದ ಮಾರ್ನಮಿ ಬೈಲ್ ಬಡಾವಣೆ ಮತ್ತು ಜೆ.ಸಿ.ನಗರದಲ್ಲಿ ಬಿಎಲ್‌ಒ ಅವರು ಮನೆ, ಮನೆಗೆ ತೆರಳದೆ ತಾವಿದ್ದಲ್ಲಿಗೆ ಜನರನ್ನು ಕರೆಸಿಕೊಂಡು ಎಸ್ಐಆರ್ ಪ್ರಕ್ರಿಯೆ ನಡೆಸುತ್ತಿದ್ದಾರೆ. ಬಿಎಲ್‌ಒ ಅವರು ಒಂದೇ ಕಡೆ ಕೂತು ಆಧಾರ್ ಕಾರ್ಡ್, ವೋಟರ್ ಐಡಿ ತರಿಸಿ ಫಾರಂ ವಿತರಣೆ ಮಾಡಿ ಕಳಿಸುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಈ ಮಧ್ಯೆ, ಬೀದರ್‌ನ ಭೀಮನಗರದ 109ನೇ ಬೂತ್‌ ವ್ಯಾಪ್ತಿಯಲ್ಲಿ ಬಿಎಲ್‌ಒ ಅನಿಲಕುಮಾರ್‌ ಎಂಬುವರು ಎನ್ ಜಿಓ ಕಚೇರಿಯಲ್ಲಿ ಒಂದೇ ಕಡೆ ಮತದಾರರನ್ನು ಸೇರಿಸಿ ಎಸ್ಐಆರ್ ನಡೆಸುತ್ತಿದ್ದರು. ವಿಷಯ ತಿಳಿದು ಮಾಜಿ ಕೇಂದ್ರ ಸಚಿವ ಭಗವಂತ್ ಖೂಬಾ ಅವರು ಸ್ಥಳಕ್ಕೆ ಭೇಟಿ ನೀಡುತ್ತಿದ್ದಂತೆ, ಬಿಎಲ್ಓ ಅಲ್ಲಿಂದ ಕಾಲ್ಕಿತ್ತರು. ಇನ್ನೊಂದೆಡೆ, ಬೆಟರ್‌ಮೆಂಟ್ ಫೌಂಡೇಷನ್ ಕಚೇರಿಯೊಂದರಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿದ್ದು, ಈ ಕಚೇರಿ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ಫೌಂಡೇಷನ್ ಕಚೇರಿಯಾಗಿದೆ ಎಂದು ಖೂಬಾ ಆಕ್ಷೇಪಿಸಿದ್ದಾರೆ. ಅಲ್ಲದೆ, ಈ ವಿಷಯವನ್ನು ರಾಜ್ಯ ಚುನಾವಣಾ ಆಯೋಗ ಮತ್ತು ಜಿಲ್ಲಾಧಿಕಾರಿ ಗಮನಕ್ಕೆ ತರುವುದಾಗಿ ಅವರು ತಿಳಿಸಿದ್ದಾರೆ.ರಾಜ್ಯಕ್ಕೆ ಕೇಂದ್ರ ಚು. ಆಯೋಗ ತಂಡ ಭೇಟಿ:

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಗೊಂದಲದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳ ತಂಡ ಸೋಮವಾರ ರಾಜ್ಯಕ್ಕೆ ಭೇಟಿ ನೀಡಿದೆ.ಕೇಂದ್ರ ಚುನಾವಣಾ ಆಯೋಗದ ಉಪ ಚುನಾವಣಾ ಆಯುಕ್ತ ಸಂಜಯ್‌ ಕುಮಾರ್‌ ನೇತೃತ್ವದ ಅಧಿಕಾರಿಗಳ ತಂಡ ಬೆಳಗ್ಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಭೇಟಿ ನೀಡಿ ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್‌ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್‌ ಅವರಿಂದ ಮಾಹಿತಿ ಸಂಗ್ರಹಿಸಿತು. ಮಧ್ಯಾಹ್ನ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ(ಜಿಬಿಎ) ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆ ಸಂಬಂಧ ಸಭೆ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು ಸಭೆ ನಡೆಸಿದರು. ಸಭೆಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌, ಪಂಚ ನಗರ ಪಾಲಿಕೆಗಳ ಆಯುಕ್ತರು ಹಾಗೂ ಚುನಾವಣಾ ಸಂಬಂಧಿತ ಅಧಿಕಾರಿಗಳು ಭಾಗವಹಿಸಿದ್ದರು.ಸಭೆಯಲ್ಲಿ ಎಸ್ಐಆರ್ ಸಂಬಂಧಿತ ಗೊಂದಲಗಳು, ದೂರುಗಳು, ಲೋಪಗಳು, ಬಿಎಲ್‌ಒಗಳ ಬಗ್ಗೆ ಮಾಹಿತಿ ಪಡೆದರು. ಬಿಎಲ್‌ಒಗಳು ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ಕಡ್ಡಾಯವಾಗಿ ಮನೆ-ಮನೆಗೆ ತೆರಳಿ ಗಣತಿ ನಮೂನೆ ವಿತರಿಸಬೇಕು. ಎಸ್ಐಆರ್‌ ಪ್ರಕ್ರಿಯೆಗೆ ವೇಗ ನೀಡಬೇಕು. ನಿಗದಿತ ಅವಧಿಯಲ್ಲಿ ಎಸ್ಐಆರ್‌ ಪ್ರಕ್ರಿಯೆ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.3 ದಿನ ರಾಜ್ಯದಲ್ಲೇ ಇರುವ ತಂಡ:ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳ ತಂಡ ಮೂರು ದಿನಗಳ ಕಾಲ ರಾಜ್ಯದಲ್ಲೇ ಇರಲಿದೆ. ರಾಜ್ಯಾದ್ಯಂತ ನಡೆಯುತ್ತಿರುವ ಎಸ್ಐಆರ್‌ ಪ್ರಕ್ರಿಯೆ ಕುರಿತು ಪರಿಶೀಲನಾ ಸಭೆ ನಡೆಸಲಿದೆ. ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಿ ಎಸ್ಐಆರ್‌ ಪ್ರಕ್ರಿಯೆ ಖುದ್ದು ಪರಿಶೀಲಿಸಲಿದೆ. ಅಂತೆಯೇ ಎಸ್‌ಐಆರ್‌ ಪ್ರಕ್ರಿಯೆ ಸಂಬಂಧ ಎದ್ದಿರುವ ಗೊಂದಲಗಳ ಬಗ್ಗೆ ಮಾಹಿತಿ ಸಂಗ್ರಹಿಸಲಿದೆ. ನಿಗದಿತ ವೇಳಾ ಪಟ್ಟಿ ಪ್ರಕಾರ ಎಸ್‌ಐಆರ್‌ ಮುಗಿಸಲು ಅಧಿಕಾರಿಗಳಿಗೆ ಸಲಹೆ-ಸೂಚನೆ ನೀಡಲಿದೆ ಎಂದು ಮೂಲಗಳು ತಿಳಿಸಿವೆ.

7 ದಿನದಲ್ಲಿ 3.96 ಕೋಟಿ ಮತದಾರರಿಗೆ ನಮೂನೆ ಹಂಚಿಕೆ:

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಭಾಗವಾಗಿ ಸೋಮವಾರ ಸಂಜೆ 6 ಗಂಟೆ ವೇಳೆಗೆ 3.96 ಕೋಟಿ ಮತದಾರರಿಗೆ ಗಣತಿ ನಮೂನೆ ವಿತರಿಸಲಾಗಿದೆ. ರಾಜ್ಯದ ಒಟ್ಟು 5.54 ಕೋಟಿ ಮತದಾರರ ಪೈಕಿ ಈವರೆಗೆ ಶೇ.71.53ರಷ್ಟು ಪ್ರಗತಿ ಸಾಧಿಸಲಾಗಿದೆ. ಈವರೆಗೆ ವಿತರಿಸಲಾದ ಗಣತಿ ನಮೂನೆಗಳ ಪೈಕಿ 33.69 ಲಕ್ಷ ಗಣತಿ ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. 1.24 ಲಕ್ಷ ಮತದಾರರು ಆನ್‌ಲೈನ್‌ ಮುಖಾಂತರ ಗಣತಿ ನಮೂನೆ ಭರ್ತಿ ಮಾಡಿ ಸಲ್ಲಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರು ಪರ್ಯಾಯ ಬೆಳೆ ಬೆಳೆಯಲು ಅರಿವು ಮೂಡಿಸಿ: ಮನೋಜ್ ಕುಮಾರ್ ಮೀನಾ
ಸಾಮಾಜಿಕ ನ್ಯಾಯ, ಸಮಾನ ಅವಕಾಶಗಳಿಂದ ಮಾತ್ರ ಸ್ವಾತಂತ್ರ್ಯಕ್ಕೆ ಅರ್ಥ: ಅರುಣ್‌ಕುಮಾರ್‌