ಮುಂದುವರಿದ ಮಳೆ ಆರ್ಭಟ: 5 ಸೇತುವೆ ಜಲಾವೃತ

KannadaprabhaNewsNetwork |  
Published : Jul 23, 2026, 03:00 AM IST
ಖಖಖಖಖ | Kannada Prabha

ಸಾರಾಂಶ

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರವೂ ಮಳೆಯಾರ್ಭಟ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನೆರೆ ರಾಜ್ಯ ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕು ವ್ಯಾಪ್ತಿಯ ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ನೀರಿನ ಮಟ್ಟದಲ್ಲಿ ದಿಢೀರ್ ಏರಿಕೆಯಾಗಿದೆ. ಅದರಂತೆ ಬೆಳಗಾವಿ ನಗರದಲ್ಲಿಯೂ ಸಂಜೆ ನಂತರ ಉತ್ತಮ ಮಳೆಯಾಗಿದೆ. ಕೆಲವೆಡೆ ಸಂಚಾರ ಕೂಡ ಅಸ್ತವ್ಯಸ್ತವಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರವೂ ಮಳೆಯಾರ್ಭಟ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನೆರೆ ರಾಜ್ಯ ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕು ವ್ಯಾಪ್ತಿಯ ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ನೀರಿನ ಮಟ್ಟದಲ್ಲಿ ದಿಢೀರ್ ಏರಿಕೆಯಾಗಿದೆ. ಅದರಂತೆ ಬೆಳಗಾವಿ ನಗರದಲ್ಲಿಯೂ ಸಂಜೆ ನಂತರ ಉತ್ತಮ ಮಳೆಯಾಗಿದೆ. ಕೆಲವೆಡೆ ಸಂಚಾರ ಕೂಡ ಅಸ್ತವ್ಯಸ್ತವಾಗಿದೆ.

ಕಳೆದ ಕೆಲವು ಗಂಟೆಗಳಲ್ಲಿ ನದಿಗಳ ನೀರಿನ ಮಟ್ಟ ಸುಮಾರು ಎರಡು ಅಡಿಗಳಷ್ಟು ಹೆಚ್ಚಳವಾಗಿದೆ. ನದಿ ತೀರದ ಗ್ರಾಮಗಳ ಜನರಲ್ಲಿ ಮತ್ತೆ ಪ್ರವಾಹದ ಆತಂಕ ಶುರುವಾಗಿದೆ. ನದಿಗಳ ಒಳಹರಿವು ನಿರಂತರವಾಗಿ ಹೆಚ್ಚುತ್ತಿರುವುದರಿಂದ ತಗ್ಗು ಪ್ರದೇಶಗಳ ನಿವಾಸಿಗಳು ಆತಂಕದಲ್ಲಿದ್ದಾರೆ. ಮಹಾರಾಷ್ಟ್ರದ ವಿವಿಧ ಜಲಾಶಯಗಳು ಹಾಗೂ ನದಿಗಳಿಂದ ಕಲ್ಲೋಳ ಬಳಿಯ ಕೃಷ್ಣಾ ನದಿಗೆ ಪ್ರಸ್ತುತ ಸುಮಾರು 65 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶ ಮತ್ತು ಜಲಾನಯನ ಭಾಗದಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ಹರಿದುಬರುವ ನೀರಿನ ಪ್ರಮಾಣ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ.ಇದರಿಂದ ಸಹಜವಾಗಿ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕು ವ್ಯಾಪ್ತಿಯ ಐದು ಕೆಳಹಂತದ ಸೇತುವೆಗಳು ಸಂಪೂರ್ಣ ಜಲಾವೃತಗೊಂಡಿವೆ. ಇದರಿಂದಾಗಿ ಹಲವು ಗ್ರಾಮಗಳ ನಡುವಿನ ನೇರ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸಬೇಕಾಗಿದೆ.ಯಡೂರ-ಕಲ್ಲೋಳ, ಬಾವನಸೌಂದತ್ತಿ-ಮಾಂಜರಿ, ಬಾರವಾಡ-ಕುನ್ನೂರ, ಕಾರದಗಾ-ಭೋಜ ಹಾಗೂ ಭೋಜ-ಶಿವಾಪೂರವಾಡಿ ನಡುವಿನ ಕೆಳಹಂತದ ಸೇತುವೆಗಳು ನೀರಿನಲ್ಲಿ ಮುಳುಗಡೆಯಾಗಿವೆ. ಈ ಮಾರ್ಗಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಸೇತುವೆಗಳ ಎರಡೂ ಬದಿಯಲ್ಲಿ ಮುನ್ನೆಚ್ಚರಿಕೆಯಾಗಿ ಸಂಚಾರ ನಿರ್ಬಂಧಿಸುವ ಅಗತ್ಯ ಎದುರಾಗಿದೆ.ಕೆಳಹಂತದ ಸೇತುವೆಗಳು ಮುಳುಗಡೆಯಾಗಿರುವುದರಿಂದ ಗ್ರಾಮಸ್ಥರು ದಿನನಿತ್ಯದ ಕೆಲಸ, ಕೃಷಿ ಚಟುವಟಿಕೆ, ಶಾಲಾ-ಕಾಲೇಜು ಹಾಗೂ ಮಾರುಕಟ್ಟೆಗಳಿಗೆ ತೆರಳಲು ಪರದಾಡುವಂತಾಗಿದೆ. ಕೆಲವು ಗ್ರಾಮಗಳ ಜನರು ಹಲವು ಕಿಲೋಮೀಟರ್ ಸುತ್ತುವರಿದು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವ ಪರಿಸ್ಥಿತಿ ಎದುರಾಗಿದೆ.ನದಿ ನೀರಿನ ಮಟ್ಟ ನಿರಂತರವಾಗಿ ಹೆಚ್ಚುತ್ತಿರುವುದರಿಂದ ನದಿ ಪಾತ್ರದ ಹೊಲಗಳಿಗೆ ನೀರು ನುಗ್ಗುವ ಆತಂಕವೂ ರೈತರನ್ನು ಕಾಡುತ್ತಿದೆ. ಈಗಾಗಲೇ ಬಿತ್ತನೆ ಮಾಡಿರುವ ಬೆಳೆಗಳು ಮುಳುಗಡೆಯಾಗುವ ಸಾಧ್ಯತೆ ಇರುವುದರಿಂದ ಕೃಷಿಕರು ನದಿಯ ಹರಿವಿನ ಮೇಲೆ ನಿಗಾ ಇಟ್ಟಿದ್ದಾರೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಸಂಬಂಧಿತ ತಾಲೂಕು ಆಡಳಿತಗಳು ನದಿ ತೀರದ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಬೇಕು. ಜಲಾವೃತ ಸೇತುವೆಗಳ ಮೇಲೆ ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚರಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದರೆ ಕೃಷ್ಣಾ ಸೇರಿದಂತೆ ಪ್ರಮುಖ ನದಿಗಳ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನದಿ ತೀರದ ಗ್ರಾಮಗಳ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೌಡಿಶೀಟರ್ ಪ್ರಕರಣ ದಾಖಲು : ಮುಖಂಡರ ವಿರೋಧ
ಕೆಎಲ್‌ಎಸ್‌ ಜಿಐಟಿ ಚೆಸ್ ಟೂರ್ನಮೆಂಟ್-2026 ಯಶಸ್ವಿ