ದ.ಕ.ದಲ್ಲಿ ಮುಂದುವರಿದ ಮಳೆ, ಇನ್ನೂ 2 ದಿನ ಮಳೆ ಮುನ್ಸೂಚನೆ

KannadaprabhaNewsNetwork | Published : May 23, 2024 1:01 AM

ಸಾರಾಂಶ

ಸಮುದ್ರದ ಅಲೆಗಳು ಬುಧವಾರವೂ ಪ್ರಕ್ಷುಬ್ದಗೊಂಡಿದ್ದವು. ಮುನ್ನೆಚ್ಚರಿಕೆ ನೀಡಿದ್ದರಿಂದ ಹೆಚ್ಚಿನ ಮೀನುಗಾರರು ಕಡಲಿಗೆ ಇಳಿದಿಲ್ಲ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಸೇರಿದಂತೆ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಬುಧವಾರವೂ ಮಳೆ ಮುಂದುವರಿದಿದೆ. ಜಿಲ್ಲೆಯಲ್ಲಿ ಇನ್ನೂ 2 ದಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಮಂಗಳವಾರ ರಾತ್ರಿ ಮಂಗಳೂರು, ಬಂಟ್ವಾಳ, ಸುಳ್ಯ, ಪುತ್ತೂರು ಸುತ್ತಮುತ್ತ ಉತ್ತಮ ಮಳೆಯಾಗಿತ್ತು. ಬುಧವಾರ ಬೆಳಗ್ಗೆ ಮೋಡ ಕವಿದ ವಾತಾವರಣ ನಂತರ ಬಿಸಿಲು- ಸೆಕೆಯ ವಾತಾವರಣ ಇದ್ದರೂ ಬಳಿಕ ಉತ್ತಮ ಮಳೆ ಸುರಿದಿದೆ. ಸಂಜೆ ವೇಳೆಗೆ ಜಿಲ್ಲೆಯ ಹೆಚ್ಚಿನ ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ.

ಸಮುದ್ರದ ಅಲೆಗಳು ಬುಧವಾರವೂ ಪ್ರಕ್ಷುಬ್ದಗೊಂಡಿದ್ದವು. ಮುನ್ನೆಚ್ಚರಿಕೆ ನೀಡಿದ್ದರಿಂದ ಹೆಚ್ಚಿನ ಮೀನುಗಾರರು ಕಡಲಿಗೆ ಇಳಿದಿಲ್ಲ.

ಜಿಲ್ಲೆಯಲ್ಲಿ ಬುಧವಾರ ಸರಾಸರಿ 28.7 ಡಿಗ್ರಿ ಸೆ. ಗರಿಷ್ಠ, 24.2 ಡಿಗ್ರಿ ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಜಿಲ್ಲೆಯಲ್ಲಿ ಮೇ 24ರವರೆಗೆ ಗಾಳಿ, ಗುಡುಗು ಸಹಿತ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.ಮರ ಬಿದ್ದು ವಾಹನಗಳಿಗೆ ಹಾನಿ: ಮಂಗಳೂರಿನ ಕೋರ್ಟ್‌ ರಸ್ತೆಯಲ್ಲಿ ಮಂಗಳವಾರ ರಾತ್ರಿ ಮರವೊಂದು ಉರುಳಿಬಿದ್ದು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಎರಡು ಕಾರುಗಳು ಜಖಂಗೊಂಡಿವೆ. ಪೊಲೀಸ್‌ ಹೊಯ್ಸಳ ಸಿಬ್ಬಂದಿ ಮತ್ತು ಮೆಸ್ಕಾಂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮರ ತೆರವು ಮಾಡಿದರು.ಕೂಳೂರು ಸೇತುವೆ ಪ್ರದೇಶಕ್ಕೆ ಡಿಸಿ ಭೇಟಿ

ಮಳೆ ಬಂದರೆ ಪ್ರತಿ ಸಲ ಪ್ರವಾಹ ಭೀತಿ ಎದುರಾಗುವ ನಗರದ ಕೊಟ್ಟಾರಚೌಕಿ ಹಾಗೂ ಸೇತುವೆ ಕಾಮಗಾರಿ ನಡೆಯುತ್ತಿರುವ ಕೂಳೂರು ಪ್ರದೇಶಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೂಳೂರಿನಲ್ಲಿ ಹೆದ್ದಾರಿ ಸೇತುವೆಯ ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲಿ ದೊಡ್ಡ ಮಟ್ಟದಲ್ಲಿ ಮಣ್ಣು ಹೇರಿದ್ದು, ಮಳೆ ಬಂದರೆ ನೀರು ಸರಾಗವಾಗಿ ಹರಿಯಲು ತೊಡಕಾಗುವ ಸಂಭವ ಎದುರಾಗಿತ್ತು.

ಈ ಹಿನ್ನೆಲೆಯಲ್ಲಿ ಮಳೆ ಬಂದಾಗ ಈ ಪ್ರದೇಶದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಸಲಹೆ ನೀಡಿದರು.

Share this article