ಮಹೇಶ ಛಬ್ಬಿಗದಗ: ಜಿಲ್ಲೆಯಲ್ಲಿ ಮಂಗಳವಾರವೂ ಮುಂದುವರೆದ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಜನತೆ ಮನೆಯಿಂದಾಚೆ ಬರದಂತ ಸ್ಥಿತಿ ನಿರ್ಮಾಣವಾಗಿ, ಸಾಮಾನ್ಯ ಕೆಲಸಕ್ಕೂ ಅಡಚಣೆಯುಂಟಾಗಿದೆ.ಬಿಟ್ಟು ಬಿಡದೆ ನಿರಂತರ ಮಳೆ ಸುರಿಯುತ್ತಿದ್ದು, ಜಿಲ್ಲೆಯೇ ಜನತೆ ಜೀವನ ಅಕ್ಷರಶಃ ಅಸ್ತವ್ಯಸ್ತಗೊಂಡಿದೆ. ಕಳೆದೊಂದು ತಿಂಗಳನಿಂದ ಕೃಷಿ ಚಟುವಟಿಕೆಗಳು ಬಂದ್ ಆಗಿದ್ದು, ಎದೆ ಎತ್ತರಕ್ಕೆ ಬೆಳೆಯಲ್ಲಿ ಕಸ ಬೆಳೆದು ನಿಂತಿವೆ. ಒಂದು ಕಡೆ ಹೆಸರು ಕಟಾವಿಗೆ ಬಿಡುವು ಸಿಗದೇ ಮಳೆ ನೀರಲ್ಲಿ ನಿಂತು ಹೆಸರು ಸಂಪೂರ್ಣ ನಾಶವಾಗಿ ಹೋಗಿದ್ದು, ಹೆಸರು ಬೆಳೆದ ರೈತರು ಪರಿಹಾರಕ್ಕೆ ಸರ್ಕಾರವನ್ನ ಒತ್ತಾಯಿಸುತ್ತಿದ್ದಾರೆ.
ಗದಗ ನಗರದ ತಹಸೀಲ್ದಾರ್ ಕಚೇರಿ, ಕೃಷಿ ನಿರ್ದೇಶಕರ ಕಚೇರಿ ಸೇರಿದಂತೆ ಇತರೆ ಸರ್ಕಾರಿ ಕಚೇರಿಗಳ ಆವರಣ ನಿರಂತರ ಸುರಿಯುತ್ತಿರುವ ಮಳೆಗೆ ಸಂಪೂರ್ಣ ಕೆಸರುಮಯವಾಗಿದ್ದು, ಕಚೇರಿ ಕೆಲಸಕ್ಕೆ ಬರುವ ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ.ವ್ಯಾಪಾರಸ್ಥರ ಪರದಾಟ: ಗದಗ ನಗರ ಸೇರಿದಂತೆ ಜಿಲ್ಲೆಯೇ ಪ್ರಮುಖ ನಗರ ಪ್ರದೇಶಗಳ ಮಾರುಕಟ್ಟೆಗಳಲ್ಲಿ ಬೀದಿ ಬದಿ ವ್ಯಾಪಾರಸ್ಥರು ನಿರಂತರ ಸುರಿಯುತ್ತಿರುವ ಮಳೆಯಿಂದ ಪರದಾಡುವಂತಾಗಿದ್ದು, ತರಕಾರಿ, ಹೂ, ಹಣ್ಣು ಇನ್ನಿತರೆ ವಸ್ತುಗಳನ್ನ ಮಳೆಯಿಂದ ರಕ್ಷಣೆ ಮಾಡುವಲ್ಲಿ ಹೈರಾಣಾಗುತ್ತಿದ್ದಾರೆ.ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದರಿಂದ ನಗರ ಸೇರಿ ಗ್ರಾಮೀಣ ಭಾಗಗಳಲ್ಲಿ ಮಣ್ಣಿನ ಮನೆಗಳು ಸೋರುತ್ತಿದ್ದು, ಕೆಲ ಮನೆಗಳು ಭಾಗಶಃ ಧರೆಗುರುಳಿದ್ದು, ಮಣ್ಣಿನ ಮನೆಯಲ್ಲಿ ವಾಸಿಸುವವರೆಗೆ ಆತಂಕ ಹೆಚ್ಚಾಗಿದೆ. ಮಣ್ಣಿನ ಮನೆಗಳು ಅಷ್ಟೇ ಅಲ್ಲದೆ ಆರ್.ಸಿ.ಸಿ ಕೆಲ ಹಳೆ ಕಟ್ಟಡಗಳು ಸೋರುತ್ತಿದ್ದು, ಆತಂಕ ಹೆಚ್ಚಾಗಿದೆ.ನದಿ ಪಾತ್ರದ ಜನತೆಗೆ ಹೆಚ್ಚಿದ ಆತಂಕ: ರಾಜ್ಯದ ನದಿಗಳು ತುಂಬಿ ಹರಿಯುತ್ತಿದ್ದು, ಜಿಲ್ಲೆಯೇ ನರಗುಂದ, ರೋಣ ತಾಲೂಕಿನ ಕೆಲ ಗ್ರಾಮಗಳು ಮಲಪ್ರಭಾ ನದಿ ಪಾತ್ರದಲಿದ್ದು, ಸದ್ಯ ಮಲಪ್ರಭಾ ಜಲಾಶಯದಿಂದ 12 ಸಾವಿರ ಕ್ಯೂಸೆಕ್ಸ್ ನದಿಗೆ ನೀರು ಬಿಡಲಾಗಿದ್ದು, ಇದೇ ರೀತಿ ಮಳೆ ಮುಂದರೆದರೆ ಹೆಚ್ಚಿನ ಪ್ರಮಾಣದಲ್ಲಿ ನದಿಗೆ ನೀರು ಬಿಟ್ಟರೆ, ನದಿ ಪಾತ್ರದ ಗ್ರಾಮಗಳಿಗೆ ನೀರು ಸುತ್ತುವರೆದು, ಹೊಲಗಳಲ್ಲಿ ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗಿ ಅಪಾರ ಪ್ರಮಾಣದ ಹಾನಿಯುಂಟಾಗುವ ಆತಂಕ ನದಿ ಪಾತ್ರದ ಗ್ರಾಮಗಳ ಜನತೆಗೆ ಹೆಚ್ಚಾಗಿದೆ.ಮುಂಜಾನೆನೇ ಧೋ ಎಂದು ಮಳೆ ಸುರಿಯ್ಯಾಕ ಪ್ರಾರಂಭ ಮಾಡಿದ್ದ ಮಳೆ ನಿಲ್ಲವಲ್ದರ್ರೀ ಒಂದು ತಿಂಗಳ ಆತು ಸೂರ್ಯಾನ ಬಿಸಿಲು ನೋಡಿ, ನೆಲ ಅಂತು ಒಂಚುರು ಒಣಗಾಕ ಬಿಡುವ ಕೊಡವಲ್ದು, ಹಗಲಿ-ರಾತ್ರಿ ಎನ್ನಂಗಿಲ್ಲ ಕೆಟ್ಟ ಗಾಳಿ ಜೊತೆ ಸುರಿತಿದೆ, ಹೊಲ್ದಾಗಿನ ಪಿಕು ಅಂತು ಹಾಳಾಗಿ ಹೊಂಟವು, ಹಿಂಗಾದರ ರೈತರ ಬಾಳೇ ಹೆಂಗ್ ಎಂದು ರೈತ ದೇವರಾಜ ಸಂಗನಪೇಟಿ ಹೇಳಿದರು.ಜಿಲ್ಲೆಯಲ್ಲಿ ಮಳೆ ನಿರಂತರ ಸುರಿಯುತ್ತಿದ್ದು, ಶಾಲಾ ಮಕ್ಕಳ ಆರೋಗ್ಯ ದೃಷ್ಟಿಯಿಂದ ಮಂಗಳವಾರ ಮುಂಜಾನೆ 9 ಗಂಟೆಗೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದರು. ಇದರಿಂದ ಸಾಕಷ್ಟು ಗೊಂದಲ ಉಂಟಾಗಿ ಗ್ರಾಮೀಣ ಪ್ರದೇಶದಿಂದ ಬರುವ ಮಕ್ಕಳೆಲ್ಲಾ ಸುರಿವ ಮಳೆಯಲ್ಲಿಯೇ ಗದಗ ನಗರಕ್ಕೆ ಆಗಮಿಸಿದ ನಂತರ ರಜೆ ಘೋಷಣೆ ಮಾಡಿದ್ದರಿಂದ ಮತ್ತೆ ಸುರಿವ ಮಳೆಯಲ್ಲಿ ಮನೆಗೆ ತೆರಳುವಂತಾಯಿತು.
ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಹೆಸರು ಬೆಳೆ ಅಷ್ಟೇ ಅಲ್ಲದೆ ಗೋವಿನ ಜೋಳ, ಬಿಟಿ ಹತ್ತಿ, ಶೇಂಗಾ ತೇವಾಂಶ ಹೆಚ್ಚಾಗಿ ಹಾಳಾಗುತ್ತಿವೆ. ತಗ್ಗು ಪ್ರದೇಶದ ಹೊಲಗಳಲ್ಲಿನ ಬೆಳೆಗಳಂತು ಸಂಪೂರ್ಣವಾಗಿ ನೀರಲ್ಲಿ ನಿಂತು ಸಂಪೂರ್ಣ ನಾಶವಾಗಿ ರೈತನಿಗೆ ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಈ ಕುರಿತು ರೈತರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಲು ಹೋದರೆ ಸರಿಯಾಗಿ ಸ್ಪಂದಿಸಲಿಲ್ಲ. ಸರ್ಕಾರ ಈ ಕುರಿತು ಗಮನ ಹರಿಸಿ ತಕ್ಷಣವೇ ಪರಿಹಾರವನ್ನು ನೀಡಿ, ರೈತರ ಹಿತ ಕಾಪಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.