‘ಆಪರೇಷನ್‌ ಸಿಂದೂರ’ ಪರ ಮುಂದುವರಿದ ಪೂಜೆ

KannadaprabhaNewsNetwork | Published : May 12, 2025 12:23 AM
Follow Us

ಸಾರಾಂಶ

‘ಆಪರೇಷನ್‌ ಸಿಂದೂರ’ದ ಯಶಸ್ಸಿಗೆ ಶುಭ ಹಾರೈಸಿ, ಭಾರತೀಯ ಸೈನಿಕರ ಒಳಿತಿಗೆ ಪ್ರಾರ್ಥಿಸಿ ಭಾನುವಾರವೂ ರಾಜ್ಯಾದ್ಯಂತ ದೇಗುಲಗಳಲ್ಲಿ ವಿಶೇಷ ಪೂಜೆ, ಹೋಮ-ಹವನಗಳು ನಡೆದವು. ಇದೇ ವೇಳೆ, ಭಾರತೀಯ ಸೈನಿಕರಿಗೆ ಶುಭ ಹಾರೈಸಿ ಕರಾವಳಿಯ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆಗಳು ನಡೆದವು.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಆಪರೇಷನ್‌ ಸಿಂದೂರ’ದ ಯಶಸ್ಸಿಗೆ ಶುಭ ಹಾರೈಸಿ, ಭಾರತೀಯ ಸೈನಿಕರ ಒಳಿತಿಗೆ ಪ್ರಾರ್ಥಿಸಿ ಭಾನುವಾರವೂ ರಾಜ್ಯಾದ್ಯಂತ ದೇಗುಲಗಳಲ್ಲಿ ವಿಶೇಷ ಪೂಜೆ, ಹೋಮ-ಹವನಗಳು ನಡೆದವು. ಇದೇ ವೇಳೆ, ಭಾರತೀಯ ಸೈನಿಕರಿಗೆ ಶುಭ ಹಾರೈಸಿ ಕರಾವಳಿಯ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆಗಳು ನಡೆದವು.

ತುಮಕೂರಿನಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ನಗರ ವೀರಶೈವ ಸಮಾಜದ ವತಿಯಿಂದ ನಗರದ ಭದ್ರಮ್ಮ ವೃತ್ತದಲ್ಲಿರುವ ಸೋಮೇಶ್ವರ ದೇವಾಲಯದಲ್ಲಿ ಮೃತ್ಯುಂಜಯ ಹೋಮ ನಡೆಯಿತು. ಸಿದ್ದಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ಹಿರೇಮಠಾಧ್ಯಕ್ಷ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿಯ ಕಾರದ ಮಠದ ಕಾರದ ವೀರಬಸವ ಸ್ವಾಮೀಜಿ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಂಡಿದ್ದರು.

ಕಾವೇರಿ ನದಿಯ ಉಗಮ ಸ್ಥಾನ ಕೊಡಗಿನ ತಲಕಾವೇರಿ ಸನ್ನಿಧಿಯಲ್ಲಿ ದೇವಾಲಯದ ಪ್ರಧಾನ ಅರ್ಚಕ ವೇ.ಬ್ರ.ಪ್ರಶಾಂತ್ ಆಚಾರ್ಯ ಅವರ ನೇತೃತ್ವದಲ್ಲಿ 11 ದಿನಗಳ ಅತಿರುದ್ರ ಜಪಯಜ್ಞ ಭಾನುವಾರ ಆರಂಭವಾಯಿತು. ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟು ಶಾಂತವಾಗಲಿ. ಉಗ್ರರಿಂದ ಹತ್ಯೆಗೊಳಗಾದವರಿಗೆ ಸದ್ಗತಿ ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು. ಮಂಗಳೂರಿನ ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ಮಾತಾ ಅಮೃತಾನಂದಮಯಿ ಮಠದಲ್ಲಿ ಯೋಧರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸುಮಂಗಲೆಯರು ಅಮೃತ ಜ್ಯೋತಿ, ಪುಷ್ಪ ಹಾಗೂ ಕುಂಕುಮಗಳೊಂದಿಗೆ ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿ, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ದೇಶದ ಸೇನೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಸೇನಾನಿಗಳನ್ನು ಈ ವೇಳೆ ಸನ್ಮಾನಿಸಲಾಯಿತು.

ವಿಜಯನಗರ ಜಿಲ್ಲೆ ಕಾನಾಹೊಸಹಳ್ಳಿಯ ಚಿಕ್ಕಜೋಗಿಹಳ್ಳಿ ತಾಂಡಾದ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸೈನಿಕರ ಒಳಿತಿಗಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಾಜಿ ಸಚಿವ ಬಿ.ಶ್ರೀರಾಮುಲು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ, ಭಾರತದ ಸೈನಿಕರಿಗಾಗಿ ಮಂಗಳೂರು, ಉಡುಪಿ ಸೇರಿ ಕರಾವಳಿಯ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಎಲ್ಲ ಚರ್ಚ್‌ಗಳಲ್ಲಿ ಧರ್ಮಗುರುಗಳು ಮತ್ತು ಚಾಪ್ಲಿನ್‌ಗಳು ಬಲಿಪೂಜೆ ಬಳಿಕ ಆರಾಧನೆ ನಡೆಸಿದರು.

ಈ ಮಧ್ಯೆ, ಮಂಡ್ಯದ ಕಾಳಿಕಾಂಬ ದೇವಸ್ಥಾನದ ಮುಂಭಾಗವಿರುವ ಶ್ರೀಗಜೇಂದ್ರ ಮೋಕ್ಷ ಕಲ್ಯಾಣಿ ಆವರಣದಲ್ಲಿ ಸೋಮವಾರ ಸಂಜೆ 5 ಗಂಟೆಗೆ ಭಾರತೀಯ ಸೇನೆಯ ರಕ್ಷಣೆಗಾಗಿ ರಕ್ಷಾ ಸುದರ್ಶನ ಮಹಾಯಾಗ ಮತ್ತು ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ಹಮ್ಮಿಕೊಳ್ಳಲಾಗಿದೆ.