ಕನ್ನಡಪ್ರಭ ವಾರ್ತೆ ಮೈಸೂರು
ನಗರದ ರಂಗಾಯಣವು ವಿದ್ಯಾರ್ಥಿ ಯುವ ಜನರಿಗಾಗಿ ರಂಗಭೀಷ್ಮ ಬಿ.ವಿ. ಕಾರಂತ ಕಾಲೇಜು ರಂಗೋತ್ಸವ ನ. 11 ರಿಂದ 15 ರವರೆಗೆ ಹಮ್ಮಿಕೊಂಡಿದೆ ಎಂದು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ತಿಳಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2005 ರಿಂದ ನಿರಂತರ ಕಾಲೇಜು ರಂಗೋತ್ಸವ ಸಾಗಿ ಬಂದಿದ್ದು, ರಂಗಭೂಮಿ ಮೂಲಕ ವಿದ್ಯಾರ್ಥಿಗಳು ಸಾಹಿತ್ಯ, ಸಂಸ್ಕೃತಿ, ನೆಲ-ಜಲ, ಭಾಷೆ, ಪರಂಪರೆ ತಿಳಿಯಲು ಸಹಕಾರಿಯಾಗಿದೆ ಎಂದರು.
ನ. 11ರಂದು ಸಂಜೆ 5.30ಕ್ಕೆ ಚಿತ್ರಕಲಾವಿದ ಬಾದಲ್ ನಂಜುಂಡಸ್ವಾಮಿ ಉದ್ಘಾಟಿಸಲಿದ್ದು, ರಂಗಭೂಮಿ ಕಲಾವಿದೆ ಸುಷ್ಮಾ ನಾಣಯ್ಯ, ನಾಟಕಕಾರ ಡಾ. ರಾಜಪ್ಪ ದಳವಾಯಿ, ರಂಗಕರ್ಮಿ ಎಚ್.ಎಸ್. ಸುರೇಶ್ ಬಾಬು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಅತಿಥಿಯಾಗಿ ಭಾಗವಹಿಸುವುದಾಗಿ ಅವರು ಹೇಳಿದರು.ಭೂಮಿಗೀತ ರಂಗಮಂದಿರದಲ್ಲಿ ಪ್ರತಿದಿನ ಸಂಜೆ 6.30ಕ್ಕೆ ನಾಟಕ ಆರಂಭವಾಗಿದೆ. ನ. 11ರಂದು ವಿ. ರಂಗನಾಥ್ ನಿರ್ದೇಶನದಲ್ಲಿ ಮಹಾಜನ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಶೇಕ್ಸ್‌ಪಿಯರ್‌ನ ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ಆಧಾರಿತ ವಸಂತಯಾಮೀನಿ ಸ್ವಪ್ನ ಚಮತ್ಕಾರ ನಾಟಕ, 12ರಂದು ಎಂ. ಅರ್ಜುನ ರಚನೆ, ನಿರ್ದೇಶನದಲ್ಲಿ ಹುಣಸೂರಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಯುವತಿಯರು ಕಥೆ ಹೆಳುವರು.
13 ರಂದು ಪಿ. ಚಾಂದಿನಿ ನಿರ್ದೇಶನದಲ್ಲಿ ಎಂಎಂಕೆ, ಎಸ್.ಡಿ.ಎಂ ಮಹಿಳಾ ಕಾಲೇಜು ವಿದ್ಯಾರ್ಥಿಗಳು ಶೇಕ್ಸ್‌ಪೀಯರ್‌ನ ಮ್ಯಾಕ್‌ಬೆತ್ ಆಧಾರಿತ ಮಾರನಾಯಕ, 14ರಂದು ಎ.ಎಸ್. ಸುಭಾಷ್ ನಿರ್ದೇಶನ, ರಂಗರೂಪದಲ್ಲಿ ಮರದೂರು ಲಾ ಸಲೆಟ್ ಪದವಿ ಪೂರ್ವ ಕಾಲೇಜು ಕುವೆಂಪು ಕಥೆ ಆಧಾರಿತ ನಾಗಿ ಕರಿಸಿದ್ದ, 15ರಂದು ಎಸ್. ಕಾರ್ತಿಕ್ ನಿರ್ದೇಶನದಲ್ಲಿ ಅಮೃತಾ ವಿಶ್ವವಿದ್ಯಾಪೀಠಂ ಜಯಂತ್ ಕಾಯ್ಕಣಿ ರಚನೆಯ ಜತೆಗಿರುವನು ಚಂದರಿ ನಾಟಕಗಳ ಪ್ರದರ್ಶನ ಇರುತ್ತದೆ ಎಂದರು.ಚೆಕ್‌ಮೇಟ್ ನಾಟಕ
ರಂಗಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದ್ದ ಪತ್ತೆದಾರಿ ನಾಟಕ ಚೆಕ್‌ಮೇಟ್ ಏಳು ವರ್ಷಗಳ ನಂತರ ಮತ್ತೆ ರಂಗ ಪ್ರದರ್ಶನಗೊಳ್ಳುತ್ತಿದೆ.ನ. 10, 17, 24 ರಂದು ಸಂಜೆ 6.30ಕ್ಕೆ ಭೂಮಿಗೀತ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ನ. 17ರಂದು ಚೆಕ್‌ಮೇಟ್ ನಾಟಕ 100ನೇ ಪ್ರದರ್ಶನಗೊಳ್ಳಲಿದೆ ಎಂದು ನಟ ಪ್ರಶಾಂತ್ ಹಿರೇಮಠ್ ತಿಳಿಸಿದರು.
ಮರಾಠಿಯ ಯೋಗೇಶ್ ಸೋಮನ್ ನಾಟಕವನ್ನು ಡಾ. ತಿಪ್ಪೇಸ್ವಾಮಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಸಂಗೀತ ಶ್ರೀನಿವಾಸ ಭಟ್, ಚೀನಿ, ಎಚ್.ಕೆ. ದ್ವಾರಕನಾಥ್ ರಂಗವಿನ್ಯಾಸ ಮತ್ತು ಅನೂಪ್ ಜೋಷಿ ನಿರ್ದೇಶಕ, ಮಹೇಶ್ ಕಲ್ಲತ್ತಿ ಬೆಳಕಿನ ವಿನ್ಯಾಸ ಮಾಡಿದ್ದಾರೆ.ರಂಗಾಯಣದ ಹಿರಿಯ ಕಲಾವಿದ ಪ್ರಶಾಂತ್ ಹಿರೇಮಠ್, ಎಂ.ಎಸ್. ಗೀತಾ, ಹುಲಗಪ್ಪ ಕಟ್ಟೀಮನಿ ಅಭಿನಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಕಾಲೇಜು ರಂಗೋತ್ಸವ 2024ರ ಸಂಚಾಲಕಿ ಕೆ.ಆರ್. ನಂದಿನಿ, ಹಿರಿಯ ಕಲಾವಿದರಾದ ಪ್ರಶಾಂತ್ ಹಿರೇಮಠ್, ಎಂ.ಎಸ್. ಗೀತಾ, ಹುಲಗಪ್ಪ ಕಟ್ಟೀಮನಿ ಇದ್ದರು.