ನಾಗರಿಕ ಸೇವಾ ಪರೀಕ್ಷೆಗಳ ಎದುರಿಸಲು ಸತತ ಪ್ರಯತ್ನ ಅಗತ್ಯ. ನಾಗರಿಕ ಸೇವಾ ಪರೀಕ್ಷೆಗಳು ಕೇವಲ ಬುದ್ಧಿವಂತಿಕೆಯನ್ನು ಮಾತ್ರವಲ್ಲ, ಅಭ್ಯರ್ಥಿಯ ಸತತ ಪ್ರಯತ್ನ, ಶಿಸ್ತು ಮತ್ತು ತಾಳ್ಮೆಯನ್ನು ಪರೀಕ್ಷಿಸುತ್ತವೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು ಗುರಿ ತಲುಪುವತ್ತ ಗಮನಹರಿಸಬೇಕು ಎಂದು ಪೊಲೀಸ್ ಉಪನಿರೀಕ್ಷಕ ಟಿಪ್ಪುಸುಲ್ತಾನ್ ನಾಯ್ಕವಾಡಿ ಹೇಳಿದರು.
ಹಾನಗಲ್ಲ: ನಾಗರಿಕ ಸೇವಾ ಪರೀಕ್ಷೆಗಳ ಎದುರಿಸಲು ಸತತ ಪ್ರಯತ್ನ ಅಗತ್ಯ. ನಾಗರಿಕ ಸೇವಾ ಪರೀಕ್ಷೆಗಳು ಕೇವಲ ಬುದ್ಧಿವಂತಿಕೆಯನ್ನು ಮಾತ್ರವಲ್ಲ, ಅಭ್ಯರ್ಥಿಯ ಸತತ ಪ್ರಯತ್ನ, ಶಿಸ್ತು ಮತ್ತು ತಾಳ್ಮೆಯನ್ನು ಪರೀಕ್ಷಿಸುತ್ತವೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು ಗುರಿ ತಲುಪುವತ್ತ ಗಮನಹರಿಸಬೇಕು ಎಂದು ಪೊಲೀಸ್ ಉಪನಿರೀಕ್ಷಕ ಟಿಪ್ಪುಸುಲ್ತಾನ್ ನಾಯ್ಕವಾಡಿ ಹೇಳಿದರು.
ಹಾನಗಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಆಂತರಿಕ ಗುಣಮಟ್ಟ ಭರವಸೆ ಕೋಶ, ಉದ್ಯೋಗ ಮಾಹಿತಿ ಘಟಕ ಹಾಗೂ ಯಂಗ್ ವಿಷನ್ ಇಂಟಿಗ್ರೇಟೆಡ್ ಸೋಶಿಯಲ್ ವೆಲ್ಫೇರ್ ಆರ್ಗನೈ ಸೇಶನ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ “ನಾಗರಿಕ ಸೇವಾ ಪರೀಕ್ಷೆಗಳನ್ನು ಎದುರಿಸುವುದು” ಎಂಬ ವಿಷಯದ ಕುರಿತಾದ ಒಂದು ದಿನದ ಕಾರ‍್ಯಾಗಾರದಲ್ಲಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆಯ ವಿವಿಧ ಹಂತಗಳ ಬಗ್ಗೆ ಮಾಹಿತಿ ನೀಡಿದ ಅವರು, ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳಿಗೆ ಸಿದ್ಧರಾಗುವಾಗ ಎನ್.ಸಿ.ಇ.ಆರ್.ಟಿ ಪುಸ್ತಕಗಳ ಅಧ್ಯಯನ ಅಡಿಪಾಯದಂತಿದೆ. ದಿನಪತ್ರಿಕೆಗಳ ಓದು ಮತ್ತು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಣೆ ಪ್ರತಿಯೊಬ್ಬ ಆಕಾಂಕ್ಷಿಗೂ ಅತ್ಯಗತ್ಯ. ಸಮಯ ನಿರ್ವಹಣೆ ಮತ್ತು ಸರಿಯಾದ ಅಧ್ಯಯನ ಯೋಜನೆ ರೂಪಿಸಿಕೊಂಡರೆ ಯಾವುದೇ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಹುದು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ‍್ಯರಾದ ಡಾ. ಸಿ. ಎಸ್. ಕುಮ್ಮೂರ ಮಾತನಾಡಿ, ವಿದ್ಯಾರ್ಥಿಗಳು ಪದವಿ ಹಂತದಲ್ಲಿಯೇ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಕಾಲೇಜಿನ ಉದ್ಯೋಗ ಮಾಹಿತಿ ಕೇಂದ್ರವು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ನಿರಂತರವಾಗಿ ಇಂತಹ ಮಾರ್ಗದರ್ಶನ ಕಾರ‍್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು.
ಸಿಡಿಪಿ ಸದಸ್ಯರಾದ ಫೈರೋಜ್ ಖಾನ್ ಶಿರಬಡಗಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶಫಾಕ ಇದ್ದರು.
ಇದೇ ಸಂದರ್ಭದಲ್ಲಿ ವಿಶ್ವ ರೆಡ್ ಕ್ರಾಸ್ ದಿನ ಕಾಲೇಜಿನ ರೆಡ್ ಕ್ರಾಸ್ ಘಟಕದ ವತಿಯಿಂದ ಆಚರಿಸಲಾಯಿತು. ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಪ್ರೊ. ಫಜಲ್ ಅಹಮ್ಮದ ಖತೀಬ್ ಮಾತನಾಡಿ, ರೆಡ್ ಕ್ರಾಸ್ ಸಂಸ್ಥಾಪಕ ಹೆನ್ರಿ ಡ್ಯುನಾಂಟ್ ಅವರ ಜನ್ಮದಿನದ ಅಂಗವಾಗಿ, ಯುದ್ಧ, ವಿಪತ್ತು ಮತ್ತು ಆರೋಗ್ಯ ತುರ್ತು ಸ್ಥಿತಿಗಳ ಸಮಯದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಸ್ವಯಂಸೇವಕರ ಮಾನವೀಯ ಸೇವೆಗಳನ್ನು ಗೌರವಿಸುವ ದಿನದ ಅಂಗವಾಗಿ ಈ ಹಿಂದೆ ಮಹಾವಿದ್ಯಾಲಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದ ವಿದ್ಯಾರ್ಥಿ ಮತ್ತು ಸಿಬ್ಬಂದಿಗಳಿಗೆ ನಮನ ಸಲ್ಲಿಸಿದರು. ವೇದಿಕೆಯಲ್ಲಿ ಐ.ಕ್ಯೂ.ಎ.ಸಿ ಸಂಯೋಜಕರಾದ ಪ್ರೊ. ಸಂತೋಷ್ ಗೌಡ, ಇತಿಹಾಸ ವಿಭಾಗದ ಪ್ರೊ. ಶಿವಕುಮಾರ್ ಬಿ. ಎಂ. ಉಪಸ್ಥಿತರಿದ್ದರು.ಉದ್ಯೋಗ ಮಾಹಿತಿ ಘಟಕದ ಸಂಯೋಜಕರಾದ ಡಾ. ನಯನ ಜೆ. ಅವರು ಕಾರ್ಯಕ್ರಮ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.