ಕೇಂದ್ರದಿಂದ ರಾಜ್ಯಕ್ಕೆ ನಿರಂತರ ಅನ್ಯಾಯ : ಸಿದ್ದರಾಮಯ್ಯ

KannadaprabhaNewsNetwork |  
Published : Jun 24, 2025, 12:32 AM ISTUpdated : Jun 24, 2025, 09:53 AM IST
23ಕೆಪಿಆರ್‌ಸಿಆರ್‌ 02:  | Kannada Prabha

ಸಾರಾಂಶ

ಕೇಂದ್ರ ಬಿಜೆಪಿ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ನಿರಂತರ ಅನ್ಯಾಯ, ದ್ರೋಹವಾಗುತ್ತಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಬಿಜೆಪಿಗರು ಸುಮ್ಮನಿದ್ದಾರೆ. ಧೈರ್ಯವಿದ್ದರೆ ಕೇಂದ್ರದ ಮೇಲೆ ಒತ್ತಡ ಹೇರಿ ಅನ್ಯಾಯ ಸರಿಪಡಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.

 ರಾಯಚೂರು :  ಕೇಂದ್ರ ಬಿಜೆಪಿ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ನಿರಂತರ ಅನ್ಯಾಯ, ದ್ರೋಹವಾಗುತ್ತಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಬಿಜೆಪಿಗರು ಸುಮ್ಮನಿದ್ದಾರೆ. ಧೈರ್ಯವಿದ್ದರೆ ಕೇಂದ್ರದ ಮೇಲೆ ಒತ್ತಡ ಹೇರಿ ಅನ್ಯಾಯ ಸರಿಪಡಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.

ರಾಯಚೂರು ತಾಲೂಕಿನ ಯರಗೇರಾದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬುಡಕಟ್ಟು ಸಾಂಸ್ಕೃತಿಕ ಉತ್ಸವ, ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ನಾಮಫಲಕ ಅನಾವರಣ ಹಾಗೂ 371 (ಜೆ) ದಶಮಾನೋತ್ಸವ ಮತ್ತು 936 ಕೋಟಿ ರು.ವೆಚ್ಚದ ವಿವಿಧ ಕಾಮಗಾರಿಗಳ ಅಡಿಗಲ್ಲು ಹಾಗೂ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ರಾಜ್ಯದ ಅಭಿವೃದ್ಧಿ ಮಾಡಲಿಲ್ಲ. ಈಗ ಕಾಂಗ್ರೆಸ್ ಮಾಡುತ್ತಿರುವ ಅಭಿವೃದ್ಧಿಯನ್ನು ಸಹಿಸಿಕೊಳ್ಳದೇ ಸುಳ್ಳಿನ ಸರಮಾಲೆ ಹಂಚುತ್ತಾ ತಿರುಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯ ಮನೆ ದೇವರೇ ಸುಳ್ಳು, ಕೇಂದ್ರದಲ್ಲಿ ಅವರದ್ದೇ ಸರ್ಕಾರವಿದ್ದರೂ ರಾಜ್ಯಕ್ಕೆ ನಿರಂತರ ಅನ್ಯಾಯ ಆಗುತ್ತಿದೆ. ಬಿಜೆಪಿ ನಾಯಕರು ಮತ್ತು ಸಂಸದರು ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಮುಂದೆ ಬರುತ್ತಿಲ್ಲ. ರಾಜ್ಯಕ್ಕೆ ಕೇಂದ್ರದ ಬಿಜೆಪಿ ಮಾಡುತ್ತಿರುವ ದ್ರೋಹವನ್ನು ತಡೆಯಲು ಬಿಜೆಪಿಯ ಒಬ್ಬ ಸಂಸದರೂ ಸಿದ್ದರಿಲ್ಲ. ಇದು ಬಿಜೆಪಿಯವರ ಯೋಗ್ಯತೆ ಎಂದು ಟೀಕಿಸಿದರು.

14 ಮತ್ತು 15 ನೇ ಹಣಕಾಸಿನಲ್ಲಿ ರಾಜ್ಯಕ್ಕೆ ಅತೀ ದೊಡ್ಡ ಅನ್ಯಾಯ ಆಗಿದೆ, 14ನೇ ಹಣಕಾಸಿನಲ್ಲಿ 4.7 ಮತ್ತು 15ನೇ ಹಣಕಾಸಿನಲ್ಲಿ ಶೇ.3.6 ಮತ್ತು ಇದೀಗ 16ನೇ ಹಣಕಾಸಿನಲ್ಲಿಯೂ ಅದೇ ರೀತಿಯ ಅನ್ಯಾಯವಾಗುತ್ತಿದ್ದು, ಒಟ್ಟು ಶೇ.23 ರಷ್ಟು ಅನುದಾನ ಕಡಿಮೆ ಆಗಿದೆ. ಈ ಬಗ್ಗೆ ಬಿಜೆಪಿ ನಾಯಕರು ಎಲ್ಲಿಯಾದರೂ ಬಾಯಿ ಬಿಟ್ಟಿದ್ದಾರೆಯೇ ಎಂದು ಪ್ರಶ್ನಿಸಿದರು. ಬಿಜೆಪಿಗರಲ್ಲಿ ಧೈರ್ಯ ಇದ್ದರೆ ಕೇಂದ್ರದ ಮೇಲೆ ಒತ್ತಡ ಹೇರಿ ಅನ್ಯಾಯ ಸರಿಪಡಿಸಲಿ ಎಂದು ಒತ್ತಾಯಿಸಿದರು.

ಚಿನ್ನ, ಬೆಳ್ಳಿ, ಅಕ್ಕಿ, ಬೇಳೆ, ಅಡಿಗೆ ಎಣ್ಣೆ, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ರಸಗೊಬ್ಬರ ಎಲ್ಲದರ ಬೆಲೆ ಹೆಚ್ಚಿಸಿದ್ದು, ಮೋದಿ ಸರ್ಕಾರ. ಆದರೂ ಬಿಜೆಪಿ ನಾಚಿಕೆ ಇಲ್ಲದೆ ರಾಜ್ಯದ ಜನರ ಎದುರು ಸುಳ್ಳು ಹೇಳಿ ನಾಚಿಕೆ ಇಲ್ಲದಂತೆ ವರ್ತಿಸುತ್ತಿದೆ ಎಂದು ಟೀಕಿಸಿದರು.ನಾವು ಈ ಚುನಾವಣೆ ವೇಳೆ 560 ಭರವಸೆಗಳನ್ನು ನೀಡಿದ್ದೆವು. ಇದರಲ್ಲಿ 235 ಭರವಸೆಗಳನ್ನು ಈಗಾಗಲೇ ಈಡೇರಿಸಿದ್ದೇವೆ. ಮುಂದಿನ 3 ವರ್ಷಗಳಲ್ಲಿ ಉಳಿದ ಭರವಸೆಗಳನ್ನೂ ಈಡೇರಿಸುತ್ತೇವೆ ಎಂದು ತಿಳಿಸಿದರು.

ರಾಯಚೂರು ಜಿಲ್ಲೆಯ ಜನರ ಆಶೀರ್ವಾದ ಸದಾ ನಮ್ಮ ಮೇಲಿರುತ್ತದೆ ಎನ್ನುವುದು ದಾಖಲಾಗಿದೆ. ಕಲ್ಯಾಣ ಕರ್ನಾಟಕ ಸದಾ ಕಾಂಗ್ರೆಸ್ ಭದ್ರ ಕೋಟೆ, ಐದಕ್ಕೆ ಐದೂ ಲೋಕಸಭಾ ಸ್ಥಾನ ಗೆಲ್ಲಿಸಿದ್ದಕ್ಕೆ ಮುಖ್ಯಮಂತ್ರಿಗಳು ಧನ್ಯವಾದ ಅರ್ಪಿಸಿದರು.  

ಕಲ್ಯಾಣ ಕರ್ನಾಟಕ ಇನ್ನೂಹೆಚ್ಚಿನ ಅನುದಾನ: ಸಿಎಂ

ಇವತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕಾರಣವಾಗಿದ್ದು 371ಜೆ. ಇದನ್ನು ಜಾರಿಗೆ ತಂದಿದ್ದು ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್ ಅವರ ನೇತೃತ್ವದ ಹೋರಾಟ ಮತ್ತು ಕೇಂದ್ರದಲ್ಲಿದ್ದ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ. ಕಾಂಗ್ರೆಸ್ ಬಂದ ಮೇಲೆ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ₹13,500 ಕೋಟಿ ನೀಡಿದೆ. ಇದನ್ನು ಖರ್ಚು ಮಾಡಿದ ಮೇಲೆ ಇನ್ನಷ್ಟು ಹೆಚ್ಚಿನ ಅನುದಾನ ಕೊಡುವುದಾಗಿ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದರು.

PREV
Read more Articles on

Recommended Stories

ಧರ್ಮಸ್ಥಳ ಕೇಸ್‌ : ಅರ್ಧ ಕೋಟಿ ವ್ಯಯ?
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ : ರಾಜ್ಯದಲ್ಲಿ 1 ವಾರ ಮಳೆ