ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ನಾಪೋಕ್ಲು-ಮೂರ್ನಾಡು ಸಂಪರ್ಕ ರಸ್ತೆಯ ಹೊದ್ದೂರಿನ ಗ್ರಾಮದ ಬೊಳಿಬಾಣೆ ಎಂಬಲ್ಲಿ ರಸ್ತೆ ಕಾವೇರಿ ಪ್ರವಾಹದಿಂದ ಜಲಾವೃತವಾಗಿದೆ. ಕಿರು ವಾಹನಗಳ ಸಂಚಾರ ಕಷ್ಟಕರವಾಗಿದ್ದು ರಾತ್ರಿಯೂ ಮಳೆ ಸುರಿದರೆ ಮೂರ್ನಾಡು ರಸ್ತೆ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ .
ಸಮೀಪದ ಚೆರಿಯಪರಂಬುವಿನಲ್ಲೂ ರಸ್ತೆ ಜಲಾವೃತವಾಗಿ ನಾಪೋಕ್ಲು- ಕಲ್ಲುಮೊಟ್ಟೆ ಸಂಪರ್ಕ ರಸ್ತೆ ಕಡಿತಗೊಂಡಿದೆ. ಇಲ್ಲಿಗೆ ಸಮೀಪದ ಎಮ್ಮೆಮಾಡಿನಲ್ಲಿರುವ ಗದ್ದೆಗಳು ಕಾವೇರಿ ಪ್ರವಾಹದಿಂದ ಸಂಪೂರ್ಣ ಜಲಾವೃತವಾಗಿದೆ.ಚೆರಿಯಪರಂಬುವಿನಲ್ಲಿ ನದಿ ತಟದ ಮನೆಗಳಲ್ಲಿ ವಾಸಿಸುತ್ತಿರುವವರಿಗೆ ಈ ಹಿಂದೆ ಕಂದಾಯ ಇಲಾಖೆಯಿಂದ ನೋಟಿಸು ಜಾರಿ ಮಾಡಲಾಗಿದ್ದು ಹಲವರು ಮನೆ ಖಾಲಿ ಮಾಡಿದ್ದು ಇನ್ನುಳಿದಂತೆ ಹಲವರ ಮನೆ ಜಲಾವೃತವಾಗುವ ಸಾಧ್ಯತೆಗಳಿವೆ. ಕೊಟ್ಟ ಮುಡಿಯಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತಿದ್ದು ಬಹುತೇಕ ಕಾಫಿ ತೋಟಗಳು ಪ್ರವಾಹದಲ್ಲಿ ಮುಳುಗಿದೆ.
ಸ್ಥಳಕ್ಕೆನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಲೆಕ್ಕಿಗರು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಒಂದು ದಿನದ ಅವಧಿಯಲ್ಲಿ ಭಾಗಮಂಡಲದಲ್ಲಿ 172.0 ಮಿ.ಮೀ , ಅಯ್ಯಂಗೇರಿ 4.85 ಇಂಚು, ಕಕ್ಕಬೆ, ನಾಲಡಿಯಲ್ಲಿ 217.0 ಮಿ.ಮೀ. ನಾಪೋಕ್ಲು 70.2 ಮಿ.ಮೀ ಮಳೆ ಸುರಿದಿದ್ದು ಪ್ರವಾಹದ ಭೀತಿ ದಟ್ಟವಾಗಿದೆ.