ಧಾರವಾಡ: ಕಳೆದ ಎರಡು ದಿನಗಳಿಂದ ಜಿಲ್ಲೆಯ ವಾತಾವರಣದಲ್ಲಿ ತುಸು ಬದಲಾವಣೆಯಾಗಿದ್ದು, ಆಗಾಗ ಬಿಸಿಲು ಮಳೆ ಹೋಗಿ ಇದೀಗ ಆರಿದ್ರಾ ಮಳೆ ಶುರುವಾಗಿದೆ.
ಕಳೆದ ಒಂದು ವಾರದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪ್ರತ್ಯೇಕವಾಗಿ ಮಳೆಯಾಗಿದೆ. ಅದೃಷ್ಟವಶಾತ್ ಕೆಲವು ದಿನಗಳ ಹಿಂದೆ ಪ್ರವಾಹ ಸೃಷ್ಟಿಯಾಗಿದ್ದ ನವಲಗುಂದ ತಾಲೂಕಿನಲ್ಲಿ ಕಳೆದ ವಾರ ಮಳೆ ಪ್ರಮಾಣ ತಗ್ಗಿದೆ. ಜೂನ್ 19 ರಿಂದ 25ರ ವರೆಗೆ ನವಲಗುಂದದಲ್ಲಿ ವಾಡಿಕೆಯ 14.9 ಮಿ.ಮೀ. ಮಳೆ ಪೈಕಿ ಆಗಿದ್ದು 8.2 ಮೀ.ಮಿ. ಹಾಗೆಯೇ, ಕಲಘಟಗಿ ಹಾಗೂ ಅಣ್ಣಿಗೇರಿಯಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗಿದೆ. ಧಾರವಾಡ, ಹುಬ್ಬಳ್ಳಿ, ಕುಂದಗೋಳ, ಅಳ್ನಾವರದಲ್ಲಿ ಕಳೆದ ವಾರದಲ್ಲಿ ವಾಡಿಗೆಗಿಂತ ತುಸು ಹೆಚ್ಚಿನ ಪ್ರಮಾಣದಲ್ಲಾಗಿದೆ. ಒಂದು ವಾರದಲ್ಲಿ ಜಿಲ್ಲೆಯಲ್ಲಿ ವಾಡಿಕೆ ಮಳೆ 24.8 ಮಿ.ಮೀ. ಆದರೆ, ಆಗಿದ್ದು 26.9ರಷ್ಟು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಆರಿದ್ರಾ ಮಳೆಯ ಪರಿಣಾಮ ಕೆಲಕಾಲ ಇರಲಿದ್ದು ಜನರು ಎಚ್ಚರದಿಂದ ಇರಬೇಕೆಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜೂನ್ 26 ರಿಂದ 28ರ ವರೆಗೆ ಜಿಲ್ಲೆಗೆ ಯಲ್ಲೋ ಅಲರ್ಟ್ ನೀಡಿದ್ದು ಜೂನ್ 29ರಂದು ಗ್ರೀನ್ ಅಲರ್ಟ್ ನೀಡಿದೆ.ದಿನವಿಡೀ ಜಿಟಿಜಿಟಿ ಮಳೆಗೆ ಜನ ಹೈರಾಣು
ಹುಬ್ಬಳ್ಳಿ: ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬುಧವಾರ ದಿನವಿಡೀ ಜಿಟಿಜಿಟಿ ಮಳೆ ಮುಂದುವರಿದಿದ್ದು, ಜನ ಹೈರಾಣಾಗುವಂತೆ ಮಾಡಿದೆ. ಕೆಲವೊಮ್ಮ ಜೋರು ಪಡೆಯುವ ಮಳೆ ಮತ್ತೆ ಜಿಟಿಜಿಟಿಯಾಗಿ ಸುರಿದು, ಬೀದಿ ಬದಿ ವ್ಯಾಪಾರಸ್ಥರು, ವಾಹನ ಸವಾರರು, ತರಕಾರಿ ವ್ಯಾಪಾರಿಗಳು ಪರದಾಡುವಂತಾಗಿದೆ.ಬೆಳಗ್ಗೆಯಿಂದ ಸಂಜೆಯ ವರೆಗೂ ಮೋಡ ಕವಿದ ವಾತಾವರಣದೊಂದಿಗೆ ಆಗಾಗ ಮಳೆ ಸುರಿಯಿತು. ಮಹಿಳೆಯರು, ವೃದ್ಧರು, ರೋಗಿಗಳು ಹಾಗೂ ಚಿಕ್ಕ ಮಕ್ಕಳು ಮನೆಯಿಂದ ಹೊರಗೆ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ನಗರದ ದುರ್ಗದಬೈಲ್, ಶಾ ಬಜಾರ್, ದಾಜಿಬಾನ್ ಪೇಟ್, ಜನತಾ ಬಜಾರ, ಸ್ಟೇಶನ್ ರಸ್ತೆಯಲ್ಲಿನ ಬೀದಿ ಬದಿಯ ವ್ಯಾಪಾರಸ್ಥರು ರಕ್ಷಣೆಗಾಗಿ ಕೊಡೆ ಮೊರೆಹೋಗಿದ್ದರು.
ಬೆಳಗಿನ ವೇಳೆ ಶಾಲೆ ಆರಂಭವಾಗುವ ಮತ್ತು ಸಂಜೆ ಶಾಲೆ- ಕಾಲೇಜುಗಳು ಬಿಡುವ ವೇಳೆಯೂ ಮಳೆ ಸುರಿಯುತ್ತಲೇ ಇದ್ದಿದ್ದರಿಂದ ವಿದ್ಯಾರ್ಥಿಗಳು ನೆನೆಯುತ್ತಲೆ ಮನೆಗೆ ಹೋಗುವಂತಾಯಿತು. ಕೆಲವರು ಕೊಡೆಗಳ ಸಹಾಯ ಪಡೆದರೆ ಇನ್ನೂ ಕೆಲವರು, ಮಳೆಯಿಂದ ರಕ್ಷಣೆ ಪಡೆಯಲು ಗಿಡ- ಕಟ್ಟಡಗಳ ಮೊರೆ ಹೋಗಿದ್ದರು. ಸಂಜೆ ತಂಪಿನ ವಾತಾವರಣದಿಂದ ಜನ ಮನೆಯಿಂದ ಹೊರಬರದಂತಾಯಿತು. ಕಳೆದ ಎರಡ್ಮೂರು ದಿನಗಳಿಂದ ಇದೇ ರೀತಿ ಇರುವುದರಿಂದ ಸೂರ್ಯನ ದರ್ಶನಕ್ಕಾಗಿ ಜನ ಕಾಯುವಂತಾಗಿದೆ.