ಜೂನ್ 28ರಂದು ಸ್ವಯಂ ಪ್ರೇರಿತ ಹೊಸದುರ್ಗ ಬಂದ್

KannadaprabhaNewsNetwork |  
Published : Jun 26, 2025, 01:32 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್  | Kannada Prabha

ಸಾರಾಂಶ

ಹೊಸದುರ್ಗ ಬಂದ್ ಸಂಬಂಧ ಬುಧವಾರ ನಡೆದ ಸಭೆಯಲ್ಲಿ ಶಾಸಕ ಬಿ.ಜಿ.ಗೋವಿಂದಪ್ಪ, ಬಿಜೆಪಿ ಮುಖಂಡ ಎಸ್.ಲಿಂಗಮೂರ್ತಿ, ನೀರಾವರಿ ಅನುಷ್ಠಾನ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಹೊಸದುರ್ಗ ತಾಲೂಕಿನ 364 ಹಳ್ಳಿಗಳಿಗೆ ಕುಡಿವ ನೀರು ಪೂರೈಕೆ ಯೋಜನೆಗೆ ದಾವಣಗೆರೆ ರೈತರು ಅಡ್ಡಗಾಲು ಹಾಕಿರುವ ಕ್ರಮ ವಿರೋಧಿಸಿ ಜೂ.28ರಂದು ಶನಿವಾರ ಸ್ವಯಂ ಪ್ರೇರಿತ ಹೊಸದುರ್ಗ ಬಂದ್‌ಗೆ ಕರೆ ನೀಡಲಾಗಿದೆ.

ಶಾಸಕ ಬಿ.ಜಿ.ಗೋವಿಂದಪ್ಪ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸರ್ವಪಕ್ಷಗಳು, ವರ್ತಕರು, ವಾಣಿಜ್ಯೋದ್ಯಮಿಗಳು ರೈತರು ಹಾಗೂ ಜಿಲ್ಲಾ ನೀರಾವರಿ ಅನುಷ್ಠಾನ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಬಂದ್ ಪೂರ್ಣ ಪ್ರಮಾಣದಲ್ಲಿ ಸ್ವಯಂ ಪ್ರೇರಿತವಾಗಿರಬೇಕು. ಕುಡಿವ ನೀರಿನ ಸೂಕ್ಷ್ಮ ವಿಚಾರವಾಗಿರುವುದರಿಂದ ಎಲ್ಲಿಯೂ ಅಹಿತಕರ ಘಟನೆಗಳ ದಾಖಲಾಗಬಾರದು. ಅಂದು ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಸಾರ್ವಜನಿಕ ಸಭೆ ಏರ್ಪಾಡು ಮಾಡಬೇಕು. ಹಳ್ಳಿಗಳಿಂದ ಪಟ್ಟಣಕ್ಕೆ ಬರುವ ರೈತಾಪಿ ಸಮುದಾಯ ತೊಂದರೆಗೆ ಈಡಾಗದಂತೆ ಎಚ್ಚವಹಿಸಿ ಅವರಿಗೆ ಬಂದ್ ವಿಚಾರ ಮೊದಲೇ ತಿಳಿಸಬೇಕೆಂದು ಸಭೆ ನಿರ್ಣಯಿಸಿತು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಬಿ.ಜಿ.ಗೋವಿಂದಪ್ಪ, ಭದ್ರಾ ಜಲಾಶಯದಿಂದ ಬಹುಹಳ್ಳಿ ಕುಡಿವ ನೀರಿನ ಯೋಜನೆಯ ರಾಜ್ಯ ಸರ್ಕಾರ ಮಂಜೂರು ಮಾಡಿದ್ದು, ಎಲ್ಲ ಇದುವರೆಗಿನ ಎಲ್ಲ ಸರ್ಕಾರಗಳು ದನಿ ಗೂಡಿಸಿವೆ. ಕುಡಿವ ನೀರಿಗಾಗಿ ರಾಜ್ಯ ಸರ್ಕಾರ ಒಂದು ಟಿಎಂಸಿ ನೀರು ಅಲೋಕೇಷನ್ ಮಾಡಿದೆ. ಕಾಮಗಾರಿ ಪೂರ್ಣಗೊಂಡಿದ್ದು ಪ್ರಾಯೋಗಿಕ ಪರೀಕ್ಷೆ ಮಾಡುವಾಗ ದಾವಣಗೆರೆ ರೈತರು ಅಡ್ಡಿ ಪಡಿಸಿದ್ದಾರೆ.

ಭದ್ರಾ ಕಾಲುವೆಯಿಂದ ನೀರು ಪಡೆದರೆ ಕೊನೆ ಭಾಗದ ರೈತರಿಗೆ ನೀರು ಸಿಗುವುದಿಲ್ಲವೆಂಬ ಕ್ಯಾತೆ ತೆಗಿದ್ದಾರೆ. ಇದೇ ಕಾಲುವೆಯಿಂದ 20ಕ್ಕೂ ಹೆಚ್ಚು ಬಹುಹಳ್ಳಿ ಕುಡಿವ ನೀರಿನ ಯೋಜನೆಗೆ ನೀರು ಪಡೆಯಲಾಗಿದೆ. ಆದರೆ ಹೊಸದುರ್ಗ ಯೋಜನೆಗೆ ಏಕೆ ಅಡ್ಡಿಪಡಿಸುತ್ತಿದ್ದಾರೋ ಅರ್ಥವಾಗುತ್ತಿಲ್ಲವೆಂದರು.

ಎರಡು ದಿನಗಳ ಹಿಂದೆ ಲಕ್ಕವಳ್ಳಿಯಲ್ಲಿ ನಡೆದ ಸಭೆಯಲ್ಲಿ ಯೋಜನೆ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ದಾವಣಗೆರೆ, ಚಿಕ್ಕಮಗಳೂರು ಭಾಗದ ಶಾಸಕರು ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ತಾವು ಹಾಗೂ ಶಾಸಕ ಟಿ.ರಘುಮೂರ್ತಿ ಅವರು ಸಭೆಯಲ್ಲಿ ಪಾಲ್ಗೊಂಡಿದ್ದೆವು. ಭಾರತೀಯ ವಿಜ್ಞಾನ ಸಂಸ್ಥೆ ಎಂಜಿನಿಯರ್ ಗಳಿಂದ ವರದಿ ಪಡೆಯುವಂತೆ ಸಭೆಯಲ್ಲಿ ಸಲಹೆ ಕೇಳಿ ಬಂದವು ಎಂದು ಗೋವಿಂದಪ್ಪ ಹೇಳಿದರು.

ಬಿಜೆಪಿ ಮುಖಂಡ ಎಸ್.ಲಿಂಗಮೂರ್ತಿ ಮಾತನಾಡಿ, ಶಾಸಕ ಬಿ.ಜಿ.ಗೋವಿಂದಪ್ಪ ಅವರ ಪರಿಶ್ರಮದಿಂದಾಗಿ ಯೋಜನೆ ಕಾರ್ಯಗತಗೊಂಡಿದೆ. ಮುಕ್ತಾಯದ ಹಂತದಲ್ಲಿ ದಾವಣಗೆರೆ ರೈತರು ಅಡ್ಡಿ ಪಡಿಸುವುದು ಸೂಕ್ತವಲ್ಲ. ಇದಕ್ಕೆ ನಾವು ಸುಮ್ಮಿರಲು ಬರೋಲ್ಲ. ಪ್ರತಿರೋಧ ಒಡ್ಡಲೇ ಬೇಕು. ಬಂದ್ ಮೂಲಕ ಎಚ್ಚರಿಕೆ ಸಂದೇಶ ರವಾನೆ ಮಾಡಬೇಕೆಂದರು.

ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಗೆ ಜಾರಿಗೆ ಈ ಮೊದಲು ದಾವಣಗೆರೆ ರೈತರು ವಿರೋಧ ಮಾಡಿದ್ದರು. ಎಲ್ಲವನ್ನು ಮೆಟ್ಟಿ ನಿಂತ ಕಾಮಗಾರಿ ನಡೆಯುತ್ತಿದೆ. ಕುಡಿವ ನೀರಿನ ವಿಚಾರದಲ್ಲಿಯಾರೂ ಅಡ್ಡಿ ಪಡಿಸುವಂತಿಲ್ಲ. ಯೋಜನೆ ಮಂಜೂರಾಗಿ ಕಾಮಗಾರಿ ಮುಗಿಯುತ್ತ ಬರುವವರೆಗೆ ದಾವಣಗೆರೆ ರೈತರು ಏನು ಮಾಡುತ್ತಿದ್ದರು. ಈಗ ಏಕೆ ವಿರೋಧ ಎಂದು ಪ್ರಶ್ನಿಸಿದರು.

ಭದ್ರಾ ಜಲಾಶಯ ನಿರ್ಮಾಣಕ್ಕೆ ತರಿಕೆರೆ ರೈತರು ಭೂಮಿ ಬಿಟ್ಟುಕೊಟ್ಟಿದ್ದಾರೆ. ಅವರಿಗೆ ಕುಡಿವ ನೀರು ಕೊಡಲು ಅಡ್ಡಿ ಪಡಿಸುವುದೆಂದರೆ ಏನರ್ಥ. ಬಂದ್ ಆಚರಣೆ ಮಾಡಿ ನಮ್ಮ ಸ್ವಾಭಿಮಾನ ಮೆರೆಯೋಣ. ರಾಜ್ಯ ಸರ್ಕಾರ ಎದುರಾಗಿರುವ ಅಡ್ಡಿ ನಿವಾರಿಸಲಿ ಎಂದರು. ಅಂತಿಮವಾಗಿ ಶನಿವಾರ ಬಂದ್ ಮಾಡಲು ನಿರ್ಣಯಿಸಲಾಯಿತು. ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಜಿ.ಬಿ.ಶೇಖರ್, ರಾಜೇಶ್ ಬುರುಡೆಕಟ್ಟೆ, ಕೆ.ಎಸ್.ಕಲ್ಮಠ, ಉದ್ಯಮಿ ಸದ್ಗುರು ಪ್ರದೀಪ್, ಬಿಜೆಪಿ ತಾಲೂಕು ಅಧ್ಯಕ್ಷ ಗೂಳಿಹಟ್ಟಿ ಜಗದೀಶ್, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಗಣೇಶ್ ಮೂರ್ತಿ, ಕಾಂಗ್ರೆಸ್ ಮುಖಂಡರಾದ ಆಗ್ರೋ ಶಿವಣ್ಣ, ಗೋ.ತಿಪ್ಪೇಶ್, ಕಾರೆಹಳ್ಳಿ ಬಸವರಾಜ್, ಕೆಡಿಪಿ ಸದಸ್ಯ ದೀಪಿಕಾ, ಕಾರೆಹಳ್ಳಿ ಬಸವರಾಜ್, ಕೆಪಿಸಿಸಿ ಸದಸ್ಯ ಅಲ್ತಫ್ ಪಾಷಾ, ಎಂ.ಪಿ.ಶಂಕರ್, ರೈತ ಸಂಘದ ಗೌರವಾಧ್ಯಕ್ಷ ಬೋರೇಶ್, ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸ್, ಪದ್ಮನಾಭ್, ಲೋಕೇಶಪ್ಪ, ಜಿಪಂ ಸದಸ್ಯ ದ್ಯಾಮಣ್ಣ, ಅರಳಿಹಳ್ಳಿ ಲೋಕಣ್ಣ, ರೈತ ಸಂಘದ ಮಹೇಶ್ವರಪ್ಪ, ಎನ್.ಆರ್.ಜಗದೀಶ್, ಪುರಸಭೆ ಸದಸ್ಯ ಮಂಜುನಾಥ್ ಸಭೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ