ಜಿಲ್ಲೆಯಲ್ಲಿ ನಿರಂತರ ಮಳೆ: ತುಂಗಾ ಡ್ಯಾಂ ಭರ್ತಿ

KannadaprabhaNewsNetwork |  
Published : Jul 06, 2026, 01:30 AM IST
ಪೊಟೋ: 05ಎಸ್‌ಎಂಜಿಕೆಪಿ05ಶಿವಮೊಗ್ಗ ತಾಲೂಕಿ ಗಾಜನೂರು ಜಲಾಶಯದಿಂದ ಭಾನುವಾರ 8 ಗೇಟ್‌ಗಳ ಮೂಲಕ ನದಿಗೆ ನೀರು ಹರಿಸಲಾಯಿತು.  | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಜುಲೈ ಆರಂಭದಲ್ಲೇ ಮಳೆ ಚುರುಕು ಪಡೆದುಕೊಂಡಿದ್ದು, ಜಲಾಶಯಗಳ ಒಳಹರಿವು ನಿಧಾನಗತಿಯಲ್ಲಿ ಹೆಚ್ಚಾಗತೊಡಗಿದೆ. ತೀರ್ಥಹಳ್ಳಿ, ಶೃಂಗೇರಿ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತುಂಗಾನದಿ ಮೈದುಂಬಿ ಹರಿಯುತ್ತಿದ್ದು, ಜಿಲ್ಲೆಯ ಗಾಜನೂರು ಬಳಿ ತುಂಗಾ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಲ್ಲಿ ಜುಲೈ ಆರಂಭದಲ್ಲೇ ಮಳೆ ಚುರುಕು ಪಡೆದುಕೊಂಡಿದ್ದು, ಜಲಾಶಯಗಳ ಒಳಹರಿವು ನಿಧಾನಗತಿಯಲ್ಲಿ ಹೆಚ್ಚಾಗತೊಡಗಿದೆ. ತೀರ್ಥಹಳ್ಳಿ, ಶೃಂಗೇರಿ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತುಂಗಾನದಿ ಮೈದುಂಬಿ ಹರಿಯುತ್ತಿದ್ದು, ಜಿಲ್ಲೆಯ ಗಾಜನೂರು ಬಳಿ ತುಂಗಾ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ.

ಶಿವಮೊಗ್ಗ ಜಿಲ್ಲಾದ್ಯಂತ ಕಳೆದ 3 ದಿನಗಳಿಂದ ಮುಂಗಾರು ಮಳೆ ತೀವ್ರಗೊಂಡಿದ್ದು, ಜಿಲ್ಲೆಯ ಜಲಮೂಲಗಳಿಗೆ ಹೊಸ ಕಳೆ ಬಂದಿದೆ. ಈ ಮೂಲಕ ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲೇ ಅತ್ಯಂತ ಮೊದಲು ಭರ್ತಿಯಾದ ಜಲಾಶಯ ಎಂಬ ಹೆಗ್ಗಳಿಕೆಗೆ ತುಂಗಾ ಡ್ಯಾಂ ಪಾತ್ರವಾಗಿದೆ.

ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದಿದ್ದು, ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದೆ. ಜಲಾಶಯ ಸುರಕ್ಷತೆ ದೃಷ್ಟಿಯಿಂದ 8 ಕ್ರಸ್ಟ್ ಗೇಟ್‌ಗಳ ಮೂಲಕ 18,051 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಜಲಾಶಯಕ್ಕೆ ಪ್ರಸ್ತುತ 19,708 ಕ್ಯುಸೆಕ್ ಒಳಹರಿವು ಹರಿದುಬರುತ್ತಿದೆ. ಹೀಗಾಗಿ ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಕ್ರಸ್ಟ್ ಗೇಟ್‌ಗಳು ಹಾಗೂ ಪವರ್ ಹೌಸ್ ಮೂಲಕ ಒಟ್ಟು 18,051 ಕ್ಯುಸೆಕ್ ನೀರನ್ನು ತುಂಗಾನದಿಗೆ ಹೊರಬಿಡಲಾಗುತ್ತಿದೆ.

ಜಲಾಶಯದ ಗರಿಷ್ಠ ಮಟ್ಟ 588.24 ಮೀಟರ್ ಆಗಿದ್ದು, ಪ್ರಸ್ತುತ ನೀರಿನ ಮಟ್ಟ 588.21 ಮೀಟರ್ ತಲುಪಿದೆ. ಜಲಾಶಯವು ಭರ್ತಿಯಾಗಿದೆ. ಒಟ್ಟು 3.24 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 3.206 ಟಿಎಂಸಿ ನೀರು ಸಂಗ್ರಹವಾಗಿದೆ.

ಜೂನ್‌ನಲ್ಲಿ ಮಳೆ ಕೊರತೆಯಿಂದಾಗಿ ನೀರಿನ ಸಂಗ್ರಹದಲ್ಲಿ ಕುಸಿತ ಕಂಡಿದ್ದ ಭದ್ರಾ ಹಾಗೂ ಲಿಂಗನಮಕ್ಕಿ ಜಲಾಶಯಗಳಲ್ಲಿಯೂ ಸದ್ಯ ಒಳಹರಿವು ನಿಧಾನಗತಿಯಲ್ಲಿ ಏರತೊಡಗಿದೆ. ಭದ್ರಾ ಜಲಾಶಯಕ್ಕೆ ಸದ್ಯ 7919 ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ಜಲಾಶಯ ಮಟ್ಟ 139 ಅಡಿಗೆ ಏರಿಕೆ ಕಂಡಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಸದ್ಯ 15 ಸಾವಿರ ಕ್ಯುಸೆಕ್‌ ನೀರು ಹರಿದುಬರುತ್ತಿದ್ದು, ಜಲಾಶಯ ಮಟ್ಟ 1749.85 ಅಡಿಗೆ ಏರಿಕೆ ಕಂಡಿದೆ.

- - -

(ಬಾಕ್ಸ್) * ರೈತರ ಮೊಗದಲ್ಲಿ ಮಂದಹಾಸ ಮುಂಗಾರು ಪೂರ್ವದಲ್ಲಿ ಅಬ್ಬರಿದ ಮಳೆ ಜೂನ್‌ನಲ್ಲಿ ಕೈಕೊಟ್ಟಿತು. ಪರಿಣಾಮ ರೈತರು ಬರಗಾಲದ ಪರಿಸ್ಥಿತಿ ಎದುರಿಸುವಂತಾಯಿತು. ಮಳೆ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದವರು ನೀರಿಲ್ಲದೇ ಪರದಾಡಿದರೆ ಹಲವೆಡೆಗೆ ಬಿತ್ತನೆಗೆ ಮಳೆ ಸಹಕರಿಸಲಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಹಲವೆಡೆ ಜೂನ್‌ ಕಳೆದರೂ ಮೆಕ್ಕೆಜೋಳ ಬಿತ್ತನೆ ಆಗದೇ ಬಾಕಿ ಉಳಿದಿದೆ. ಜುಲೈ ಆರಂಭದಲ್ಲಿ ಸುರಿಯುತ್ತಿರುವ ಮಳೆ ರೈತರ ಮೊಗದಲ್ಲಿ ಕೊಂಚ ಮಂದಹಾಸ ಮೂಡಿಸಿದೆ.

ಕಳೆದ 4 ದಿನದಿಂದ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ರೈತರು ಬಿತ್ತನೆ ಕಾರ್ಯ ಚುರುಕುಗೊಳಿಸಿದ್ದಾರೆ. ಸದ್ಯ ಸುರಿಯುತ್ತಿರುವ ಮಳೆಯನ್ನು ನಂಬಿ ಹಲವೆಡೆ ಭತ್ತ ಬಿತ್ತನೆಗೆ ರೈತರು ಅಣಿಯಾಗಿದ್ದಾರೆ. ಮುಂಗಾರು ಆರಂಭದಲ್ಲೇ ಮಳೆ ಕೊರತೆ ಅನುಭವಿಸಿರುವ ಮಲೆನಾಡಿನ ರೈತರ ಆತಂಕವನ್ನು ಸದ್ಯ ಸುರಿಯುತ್ತಿರುವ ಮಳೆ ಸ್ವಲ್ಪಮಟ್ಟಿಗೆ ಕಡಿಮೆ ಮಾಡಿದೆ.

- - -

-05ಎಸ್‌ಎಂಜಿಕೆಪಿ05:

ಶಿವಮೊಗ್ಗ ತಾಲೂಕಿನ ಗಾಜನೂರು ಜಲಾಶಯದಿಂದ ಭಾನುವಾರ 8 ಗೇಟ್‌ಗಳ ಮೂಲಕ ನದಿಗೆ ನೀರು ಹರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೊರಬ, ಶಿಕಾರಿಪುರ ತಾಲೂಕು ಬರಪೀಡಿತ ಪ್ರದೇಶವೆಂದು ಘೋಷಿಸಿ
ಮಾನಸಿಕ ಒತ್ತಡಕ್ಕೆ ಒಳಗಾಗುವ ಶೇ. 50 ರಷ್ಟು ಮಕ್ಕಳು: ಮಾನಸಿಕ ತಜ್ಞೆ ಡಾ.ಐಶ್ವರ್ಯ