ಗ್ರಾಮೀಣ ಪ್ರದೇಶದ ಹಲವೆಡೆ ಭತ್ತದ ಕೊಯ್ಲು ಮುಗಿದಿದ್ದು ಅಲ್ಪ ಸ್ವಲ್ಪ ಬಾಕಿ ಉಳಿದಿರುವ ರೈತರಿಗೆ ಮಳೆಯಿಂದಾಗಿ ಸಂಕಷ್ಟ ಎದುರಾಗಿದೆ. ಕಾಫಿ ತೋಟಗಳಲ್ಲಿ ಕಾಫಿ ಬಹುತೇಕ ಹಣ್ಣಾಗಿದ್ದು ಕಾಫಿ ಕೊಯ್ಲು ಆರಂಭಗೊಂಡಿದ್ದು ಬಿಸಿಲಿನ ಕೊರತೆಯಿಂದ ರೈತರು ಕಾಫಿ ಒಣಗಿಸಲು ಸಮಸ್ಯೆ ಎದುರಿಸುತ್ತಿದ್ದಾರೆ. ಅಕಾಲಿಕ ಮಳೆ ಬೆಳೆಗಾರರನ್ನು ಆತಂಕಕ್ಕೆ ದೂಡಿದೆ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಜಿಲ್ಲೆಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆ ಹಾಗೂ ಮೋಡ ಕವಿದ ವಾತಾವರಣ ನಾಪೋಕ್ಲು ಹೋಬಳಿ ವ್ಯಾಪ್ತಿಯ ಭತ್ತ ಹಾಗೂ ಕಾಫಿ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ.
ನಾಲ್ಕುನಾಡು ವ್ಯಾಪ್ತಿಯಲ್ಲಿ ಗುರುವಾರ ಬೆಳಗ್ಗಿನಿಂದಲೇ ದಿನವಿಡೀ ನಿರಂತರ ಮಳೆಯಾಗಿ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿತ್ತು. ಕೆಲವು ಭಾಗಗಳಲ್ಲಿ ಮಳೆ ಜೋರಾಗಿ ಸುರಿದು ಕಾಫಿ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ.
ಗ್ರಾಮೀಣ ಪ್ರದೇಶದ ಹಲವೆಡೆ ಭತ್ತದ ಕೊಯ್ಲು ಮುಗಿದಿದ್ದು ಅಲ್ಪ ಸ್ವಲ್ಪ ಬಾಕಿ ಉಳಿದಿರುವ ರೈತರಿಗೆ ಮಳೆಯಿಂದಾಗಿ ಸಂಕಷ್ಟ ಎದುರಾಗಿದೆ. ಕಾಫಿ ತೋಟಗಳಲ್ಲಿ ಕಾಫಿ ಬಹುತೇಕ ಹಣ್ಣಾಗಿದ್ದು ಕಾಫಿ ಕೊಯ್ಲು ಆರಂಭಗೊಂಡಿದ್ದು ಬಿಸಿಲಿನ ಕೊರತೆಯಿಂದ ರೈತರು ಕಾಫಿ ಒಣಗಿಸಲು ಸಮಸ್ಯೆ ಎದುರಿಸುತ್ತಿದ್ದಾರೆ.
ಮನೆಯಂಗಳದಲ್ಲಿ ,ಕಣದಲ್ಲಿ ಮಾತ್ರವಲ್ಲದೆ ಬೆಳೆಗಾರರು ಕೊಯ್ಲು ಮಾಡಿದ ಕಾಫಿಯನ್ನು ಒಣಗಿಸಲು ಹುಲ್ಲುಗಾವಲು,ಮೈದಾನಗಳನ್ನೂ ಬಳಸುತ್ತಿದ್ದಾರೆ. ತುಂತುರು ನೀರಾವರಿ ಕೈಗೊಂಡ ರೈತರ ತೋಟಗಳಲ್ಲಿ ಕಾಫಿ ಬಹುತೇಕ ಹಣ್ಣಾಗಿವೆ. ಹಿಂದಿನ ವರ್ಷ ಮಳೆಯೂ ಬೇಗನೆ ಸುರಿದಿರುವುದರಿಂದ ಕಾಫಿ ಹಣ್ಣಾಗಿದ್ದು ರೈತರು ಕೊಯ್ಲು ಕೆಲಸದಲ್ಲಿ ತೊಡಗಿದ್ದಾರೆ. ಆದರೆ ಒಣಗಿಸಲು ಬಿಸಿಲಿನ ಕೊರತೆ ಕಾಡುತ್ತಿದೆ. ವಾರಗಟ್ಟಲೆ ಬಿಸಿಲಿನ ತಾಪವೂ ಇಲ್ಲದೆ ಕಾಫಿಯನ್ನು ಒಣಗಿಸುವುದು ಕಷ್ಟಕರವಾಗಿದೆ.
ಕಾಫಿ ಬೀಜಗಳ ಹೆಕ್ಕುವುದೂ ಸವಾಲು:
ರೋಬಸ್ಟಾ ಕಾಫಿ ಹಲವೆಡೆ ಹಣ್ಣಾಗಿ ಮಳೆಯಿಂದಾಗಿ ಹಣ್ಣಾದ ಕಾಫಿಗಳು ಉದುರುತ್ತಿವೆ. ಕಾಫಿನ ಕೊಯ್ಲಿನ ಜೊತೆಗೆ ಉದುರಿದ ಕಾಫಿ ಬೀಜಗಳನ್ನು ಹೆಕ್ಕುವುದು ಕಷ್ಟಕರವಾದ ಕೆಲಸ. ಬೇಗ ಕೊಯ್ಲು ಪೂರೈಸಿದರೂ ಒಣಗಿಸುವುದು ಕಷ್ಟಕರವಾಗುತ್ತಿದೆ ಎಂದು ಸ್ಥಳೀಯ ಬೆಳೆಗಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಹಲವರ ಕಣಗಳಲ್ಲಿ ಕೊಯ್ಲು ಮಾಡಿದ ಕಾಫಿಯನ್ನು ಒಣಗಲು ಹಾಕಿದ್ದು ಮಳೆ ಮೋಡದಿಂದಾಗಿ ಒಣಗದೆ ಹಾಗೆ ಉಳಿದಿದೆ. ಮಳೆ ಬಂದರೆ ಎಂಬ ಭಯದಿಂದ ಪ್ರತಿದಿನ ಹರಡುವುದು, ಮುಚ್ಚುವುದು ಮಾಡಬೇಕಿದೆ. ಬಿಸಿಲಿನ ಕೊರತೆಯಿಂದ ಕಾಫಿ ಕೊಯ್ಲು ಮಾಡುವುದು ಸಮಸ್ಯೆಯಾಗಿ ಕಾಡುತ್ತಿದೆ. ಪದೇಪದೇ ಮೋಡದ ವಾತಾವರಣ ಬೆಳೆಗಾರರಿಗೆ ಮತ್ತಷ್ಟು ಸಮಸ್ಯೆ ತಂದೊಡ್ಡಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.