ಭದ್ರತಾ ವ್ಯವಸ್ಥೆಗಳ ನಿರಂತರ ಪರಿಶೀಲನೆ: ಬೃಹತ್ ಕೈಗಾರಿಕೆಗಳಿಗೆ ಜಿಲ್ಲಾಧಿಕಾರಿ ಸೂಚನೆ

KannadaprabhaNewsNetwork | Published : May 11, 2025 1:29 AM
Follow Us

ಸಾರಾಂಶ

ಪ್ರಮುಖ ತೈಲ, ಅನಿಲ ಘಟಕಗಳು, ಬಂದರು, ವಿಮಾನ ನಿಲ್ದಾಣಗಳಲ್ಲಿ ವಿಪತ್ತು ನಿರ್ವಹಣೆಗೆ ಕೂಡಲೆ ಅಣಕು ಪ್ರದರ್ಶನ ನಡೆಸಬೇಕು. ಜಿಲ್ಲಾಡಳಿತದೊಂದಿಗೆ ಸಮನ್ವಯದಿಂದ ಕಾರ್ಯಾಚರಿಸಬೇಕು. ದಿನದ 24 ಗಂಟೆಯೂ ಕಾರ್ಯಾಚರಿಸುವ ಕಂಟ್ರೋಲ್ ರೂಂ ಕಾರ್ಯಾಚರಿಸುತ್ತಿದೆ. ಭದ್ರತಾ ವ್ಯವಸ್ಥೆಗಳ‌ ಬಗ್ಗೆ ನಗರ ಪೊಲೀಸ್ ಆಯುಕ್ತರು ಆಗಿಂದಾಗ್ಗೆ ಪರಿಶೀಲಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಜಿಲ್ಲೆಯಲ್ಲಿರುವ ಬೃಹತ್ ಕೈಗಾರಿಕೆಗಳು ಸೇರಿದಂತೆ ಪ್ರಮುಖ ಸಂಸ್ಥೆಗಳು ತಮ್ಮ ಭದ್ರತಾ ವ್ಯವಸ್ಥೆಗಳನ್ನು ನಿರಂತರವಾಗಿ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಪ್ರಸಕ್ತ ಪರಿಸ್ಥಿತಿ ಕುರಿತು ಜಿಲ್ಲಾ ಬಿಕ್ಕಟ್ಟು ತಂಡದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪ್ರಮುಖ ತೈಲ, ಅನಿಲ ಘಟಕಗಳು, ಬಂದರು, ವಿಮಾನ ನಿಲ್ದಾಣಗಳಲ್ಲಿ ವಿಪತ್ತು ನಿರ್ವಹಣೆಗೆ ಕೂಡಲೆ ಅಣಕು ಪ್ರದರ್ಶನ ನಡೆಸಬೇಕು. ಜಿಲ್ಲಾಡಳಿತದೊಂದಿಗೆ ಸಮನ್ವಯದಿಂದ ಕಾರ್ಯಾಚರಿಸಬೇಕು. ದಿನದ 24 ಗಂಟೆಯೂ ಕಾರ್ಯಾಚರಿಸುವ ಕಂಟ್ರೋಲ್ ರೂಂ ಕಾರ್ಯಾಚರಿಸುತ್ತಿದೆ. ಭದ್ರತಾ ವ್ಯವಸ್ಥೆಗಳ‌ ಬಗ್ಗೆ ನಗರ ಪೊಲೀಸ್ ಆಯುಕ್ತರು ಆಗಿಂದಾಗ್ಗೆ ಪರಿಶೀಲಿಸಲಿದ್ದಾರೆ ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ಸಭೆ: ಇದೇ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಕ್ತ ಪರಿಸ್ಥಿತಿ ಕುರಿತು ಎಲ್ಲ ಜಿಲ್ಲಾಡಳಿತಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ, ಭದ್ರತಾ ಸಿದ್ಧತೆಗಳನ್ನು ಪರಿಶೀಲಿಸಿದರು. ಮುಖ್ಯಮಂತ್ರಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲೆಯ ಎಲ್ಲ ಪ್ರಮುಖ ಸಂಸ್ಥೆ, ಮೂಲಸೌಲಭ್ಯ ತಾಣಗಳು, ಧಾರ್ಮಿಕ ಕೇಂದ್ರಗಳು, ಜನಸಂದಣಿ ಪ್ರದೇಶಗಳ ಭದ್ರತಾ ವ್ಯವಸ್ಥೆ ನಿಯಮಿತವಾಗಿ ಪರಿಶೀಲಿಸಲಾಗುತ್ತಿದೆ ಎಂದರು.

ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಮಾತನಾಡಿ, ಈಗಾಗಲೇ ಹೆಚ್ಚುವರಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. ನಗರ ಪ್ರವೇಶದ ಎಲ್ಲ ಪ್ರಮುಖ ಸ್ಥಳಗಳಲ್ಲಿ ತಪಾಸಣೆ ಮಾಡಲಾಗುತ್ತದೆ. ರಾತ್ರಿ ನಾಕಾಬಂದಿ ನಡೆಸಲಾಗುತ್ತಿದೆ ಎಂದರು.

ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಅವರು ಜಿಲ್ಲಾ ವ್ಯಾಪ್ತಿಯ ಭದ್ರತಾ ವ್ಯವಸ್ಥೆಯ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ. ಆನಂದ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಎನ್ಎಂಪಿಎ, ವಿಮಾನ ನಿಲ್ದಾಣ, ಎಂಆರ್‌ಪಿಎಲ್ ಸಿಐಎಸ್ಎಫ್, ತೈಲ , ಅನಿಲ ಸಂಸ್ಥೆಗಳ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.