ಕಾರ್ಖಾನೆ ಸ್ಥಾಪನೆ ವಿರೋಧಿಸಿ ನಿರಂತರ ಹೋರಾಟ

KannadaprabhaNewsNetwork |  
Published : May 05, 2025, 12:45 AM IST
4ಕೆಪಿಎಲ್21 ಕೊಪ್ಪಳ ನಗರದ ಮಹಾಂತಯ್ಯನಮಠ ಕಲ್ಯಾಣಮಂಟಪದಲ್ಲಿ ಕೊಪ್ಪಳ ಬಚಾವೋ ಆಂದೋಲನ ಸಮಿತಿ ಸಭೆ. | Kannada Prabha

ಸಾರಾಂಶ

ಬಿಎಸ್‌ಪಿಎಲ್ ಕಾರ್ಖಾನೆ ನೆಲೆಯೂರುವುದಕ್ಕೆ ಬಿಡುವ ಪ್ರಶ್ನೆಯೇ ಇಲ್ಲ. ಎಂತಹ ಸ್ಥಿತಿ ಬಂದರೂ ಹೋರಾಟದಿಂದ ಹಿಂದೆ ಸರಿಯಬಾರದು ಎನ್ನುವ ಅಭಿಪ್ರಾಯವನ್ನು ನೆರೆದವರು ವ್ಯಕ್ತಪಡಿಸಿದರು

ಕೊಪ್ಪಳ: ಬಿಎಸ್‌ಪಿಎಲ್ ಕಾರ್ಖಾನೆ ತೊಲಗಬೇಕು ಇಲ್ಲವೇ ಕೊಪ್ಪಳ ಸ್ಥಳಾಂತರ ಮಾಡಬೇಕು. ಎರಡೂ ಒಟ್ಟಿಗೆ ಇರಲು ಸಾಧ್ಯವೇ ಇಲ್ಲವಾದ್ದರಿಂದ ಕಾರ್ಖಾನೆ ಸ್ಥಾಪನೆ ವಿರೋಧಿಸಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗಿದೆ.

ಕೊಪ್ಪಳ ಬಚಾವೋ ಆಂದೋಲನ ಸಮಿತಿ ಭಾನುವಾರ ನಗರದ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ಕರೆದಿದ್ದ ಸಭೆಯಲ್ಲಿ ಒಕ್ಕೊರಲಿನಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಬಿಎಸ್‌ಪಿಎಲ್ ಕಾರ್ಖಾನೆ ನೆಲೆಯೂರುವುದಕ್ಕೆ ಬಿಡುವ ಪ್ರಶ್ನೆಯೇ ಇಲ್ಲ. ಎಂತಹ ಸ್ಥಿತಿ ಬಂದರೂ ಹೋರಾಟದಿಂದ ಹಿಂದೆ ಸರಿಯಬಾರದು ಎನ್ನುವ ಅಭಿಪ್ರಾಯವನ್ನು ನೆರೆದವರು ವ್ಯಕ್ತಪಡಿಸಿದರು. ಹೀಗಾಗಿ, ಹೋರಾಟ ನಿರಂತರ ಪ್ರಾರಂಭಿಸುವಂತೆ ಸಭೆಗೆ ಬಂದ ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಬಿಎಸ್‌ಪಿಎಲ್ ಉಳಿಯಬೇಕು, ಇಲ್ಲ ಕೊಪ್ಪಳ ಸ್ಥಳಾಂತರ ಆಗಬೇಕು. ಸರ್ಕಾರ ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪಿಸುವುದಾದರೆ ಕೊಪ್ಪಳ ಸ್ಥಳಾಂತರ ಮಾಡಲಿ ಎಂದು ಸವಾಲು ಹಾಕಿದರು. ಕೊಪ್ಪಳ ನಗರ ಸೇರಿದಂತೆ 20 ಗ್ರಾಮಗಳ ಜನರು ನಾನಾ ರೋಗ ಎದುರಿಸುತ್ತಿದ್ದಾರೆ. ಈಗಾಗಲೇ ಇರುವ ಕಾರ್ಖಾನೆಯಿಂದ ಆಗುತ್ತಿರುವ ಸಮಸ್ಯೆಯಿಂದಲೇ ಜನ ರೋಸಿ ಹೋಗಿದ್ದಾರೆ. ಈಗ ಮತ್ತೊಂದು ಬೃಹತ್ ಕಾರ್ಖಾನೆ ಬರುವುದಕ್ಕೆ ಬಿಡಬಾರದು ಎಂದರು.

ಹೋರಾಟ ಮಾಡಿದ ಬಳಿಕವೂ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ. ಈ ಹಿಂದೆಯೂ ಕೊಪ್ಪಳ ಜಿಲ್ಲಾ ರಚನೆಗಾಗಿ 80 ದಿನಗಳ ಕಾಲ ಹೋರಾಟ ಮಾಡಿದ್ದೇವು. ಈ ಬಾರಿಯೂ ಅಂಥದ್ದೆ ಹೋರಾಟ ಮಾಡೋಣ ಎಂದರು.

ಪರಿಸರಕ್ಕಾಗಿ ನಾವು ಸಂಘಟನೆಯ ರಾಜ್ಯ ಕಾರ್ಯದರ್ಶಿ ಕಾಶೀನಾಥ ಪಾಟೀಲ ಮಾತನಾಡಿ, ಕೊಪ್ಪಳ ನಗರ ಸೇರಿದಂತೆ ಸುತ್ತಮುತ್ತಲ ಜನರು ಸಂಕಷ್ಟದಲ್ಲಿರುವುದು ಗೊತ್ತಾಯಿತು. ಕಾರ್ಖಾನೆಯ ಧೂಳಿನಿಂದ ಅನುಭವಿಸುವ ಯಾತನೆಯೂ ಗೊತ್ತಾಯಿತು. ಹೀಗಾಗಿ, ನಮ್ಮ ರಾಜ್ಯಮಟ್ಟದ ಸಂಘಟನೆ ಬೆಂಬಲ ನೀಡಿ ಕೊಪ್ಪಳ ಜನತೆಯ ಪರವಾಗಿ ಧ್ವನಿಯಾಗುತ್ತೇವೆ ಎಂದು ಹೇಳಿದರು.

ಹಿರಿಯ ವಕೀಲ ಪೀರಾಹುಸೇನ ಹೊಸಳ್ಳಿ ಮಾತನಾಡಿ, ಬಿಎಸ್‌ಪಿಎಲ್ ಕಾರ್ಖಾನೆಯ ವಿರುದ್ಧದ ಹೋರಾಟವನ್ನು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ನೇತೃತ್ವದಲ್ಲಿಯೇ ಮಾಡೋಣ. ಅವರು ಈ ಬೆಳವಣಿಗೆಯಿಂದ ಮನಸ್ಸಿಗೆ ನೋವು ಮಾಡಿಕೊಂಡಿದ್ದಾರೆ. ಹೀಗಾಗಿ, ಅವರನ್ನು ಪುನಃ ಕರೆದು ತರಬೇಕಾಗಿದೆ. ಹಾಗೊಂದು ವೇಳೆ ಅವರು ಬರದೆ ಇದ್ದರೆ ಅವರ ಹೆಸರಿನಲ್ಲಿಯಾದರೂ ಹೋರಾಟ ಮಾಡೋಣ ಎಂದರು.

ಲಿಂಗಾಯತ ಮಹಾಸಭಾ ಕೊಪ್ಪಳ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳೊಳ್ಳಿ ಮಾತನಾಡಿ, ಹೋರಾಟದ ನೇತೃತ್ವ ವಹಿಸಿದ್ದ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳಿಗೆ ನೋವಾಗಿರುವುದು ನಿಜ. ಹೀಗಾಗಿ, ಅವರಿಗೆ ಒತ್ತಾಯ ಮಾಡುವುದು ಬೇಡ. ಅವರನ್ನು ಭಾಗವಹಿಸುವಂತೆ ಮನವಿ ಮಾಡೋಣ, ಬರದೆ ಇದ್ದರೂ ಹೋರಾಟ ಮುಂದುವರಿಸೋಣ ಎಂದರು.

ಮಹಿಳಾ ಹೋರಾಟಗಾರ್ತಿ ಸಾವಿತ್ರಿ ಮುಜುಮ್‌ದಾರ, ಹನುಮಂತಪ್ಪ ಹೊಳೆಯಾಚೆ, ನಜೀರಸಾಬ್‌ ಮೂಲಿಮನಿ, ಮಂಜುನಾಥ ಗೊಂಡಬಾಳ, ರಾಜು ಬಾಕಳೆ, ಪ್ರಭು ಹೆಬ್ಬಾಳ ಮಾತನಾಡಿದರು.

ಅಂದಾನಪ್ಪ ಅಗಡಿ, ಜನಾರ್ದನ, ಶಿವಾನಂದ ವಕೀಲರು, ಎಲ್.ಎಫ್‌. ಪಾಟೀಲ್, ಡಾ. ಚಂದ್ರಶೇಖರ ಕರಮುಡಿ, ರಾಜು ಬಾಕಳೆ, ಮಹಾಂತೇಶ ಕೊತ್ಬಾಳ, ಲಿಂಗರಾಜ ನವಲಿ, ಬಸವರಾಜ ಶಿಲವಂತರ, ಶರಣು ಗಡ್ಡಿ, ಮಂಜುನಾಥ ಗೊಂಡಬಾಳ, ಮರಿಯಪ್ಪ ಸಾಲೋಣಿ ಇದ್ದರು.

ಬಿ.ಜಿ.‌ ಕರಿಗಾರ, ಬಾಳಪ್ಪ ವಕೀಲರು, ಈಶಪ್ಪ ಬಳ್ಳೊಳ್ಳಿ, ಸಿದ್ದಣ್ಣ ನಾಲ್ವಾಡ ಮತ್ತಿತರರು ಇದ್ದರು. ಡಿ.ಎಚ್. ಪೂಜಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ನಿರ್ಣಯಗಳು:

ಪ್ರತಿ ವಾರ್ಡ್‌ಗಳಲ್ಲಿ ಸಭೆ ನಡೆಸುವುದು

ಪತ್ರ ಚಳವಳಿ ಪ್ರಾರಂಭಿಸುವುದು

ಗವಿಸಿದ್ಧೇಶ್ವರ ಶ್ರೀಗಳನ್ನು ಅಹ್ವಾನಿಸುವುದು

ಅಶೋಕ ವೃತ್ತದಲ್ಲಿ ನಿರಂತರ ಧರಣಿ ನಡೆಸುವುದು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ