ಕನ್ನಡಪ್ರಭ ವಾರ್ತೆ ಬಾದಾಮಿ
ಸಹಕಾರಿ ಸಂಘಗಳನ್ನು ಕಟ್ಟುವುದು ಸುಲಭ. ಪ್ರಮಾಣಿಕತೆ, ನಿಷ್ಠೆ, ಬದ್ಧತೆಯಿಂದ ಕೆಲಸ ಮಾಡಿದರೆ ಮಾತ್ರ ಸಂಘಗಳು ಬೆಳೆಯಲು ಸಾಧ್ಯ ಎಂದು ಮಾಜಿ ಡಿಸಿಎಂ, ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.ತಾಲೂಕಿನ ಜಾಲಿಹಾಳ ಗ್ರಾಮದ ರಂಗ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನೂತನ ಚಿನ್ನು ಸೌಹಾರ್ದ ಪತ್ತಿನ ಸಹಕಾರಿ ಸಂಘದ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಸಂಘಗಳನ್ನು ಕಟ್ಟಿ ಉಳಿಸಿ ಬೆಳೆಸುವುದು ತುಂಬಾ ಕಷ್ಟ. ಎಲ್ಲರೂ ವಿಶ್ವಾಸದಿಂದ ಕೆಲಸ ಮಾಡಿ ಸಂಘವನ್ನು ಹೆಮ್ಮರವಾಗಿ ಬೆಳೆಸಿ ಎಂದು ಸಲಹೆ ನೀಡಿದರು.
ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ಗ್ರಾಮೀಣ ಭಾಗದವರಿಗೆ ಹಣಕಾಸಿನ ಸಹಾಯ ದೊರೆಯಲು ಸಹಕಾರಿಯಾಗುವಂತೆ ಸಂಘ ಸಂಸ್ಥೆಗಳು ಬಡವರಿಗೆ, ನಿರ್ಗತಿಕರಿಗೆ ಸಹಾಯ ಮಾಡಬೇಕು. ಸಾಲ ಪಡೆದ ಗ್ರಾಹಕರು ಸಕಾಲಕ್ಕೆ ಮರುಪಾವತಿ ಮಾಡಿ ಸಂಘಗಳ ಬೆಳವಣಿಗೆಗೆ ಸಹಕಾರ ನೀಡಬೇಕು. ಎಲ್ಲರೂ ಸಂಘಗಳಲ್ಲಿ ಠೇವಣಿ ಇಡುವ ಮೂಲಕ ಸಂಘಗಳು ಬೆಳೆಯುವಂತೆ ಮಾಡಬೇಕು. ಇದರಿಂದ ಬಹಳ ಜನರಿಗೆ ಸಾಲ ನೀಡಲು ಸಹಾಯವಾಗುತ್ತದೆ ಎಂದು ಹೇಳಿದರು.ಮಣಕವಾಡದ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು, ಹೊಳಿ ಬಬಲಾದಿಯ ವೇದಮೂರ್ತಿ ಸಿದ್ದರಾಮಯ್ಯ ಹೊಳಿಮಠ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಾಜಿ ಸಚಿವ ಎಸ್.ಆರ್. ಪಾಟೀಲ ಮಾತನಾಡಿ, ಶೇಖರಗೌಡ ಪಾಟೀಲ ಅವರು ಸಾಮಾಜಿಕ ಹಾಗೂ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಗ್ರಾಮದ ಜನರ ಹಿತದೃಷ್ಟಿಯಿಂದ ಸಣ್ಣ ಸಣ್ಣ ವ್ಯಾಪಾರಸ್ಥರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಬ್ಯಾಂಕ್ ಸ್ಥಾಪನೆ ಮಾಡಿ, ಜನರಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದು ಹೇಳಿದರು.ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಮಾತನಾಡಿ, ಸಹಕಾರಿ ಸಂಘಗಳು ಜನರ ಆರ್ಥಿಕ ಪ್ರಗತಿಗೆ ಸಹಕಾರಿಯಾಗಿದ್ದು, ಸಿಬ್ಬಂದಿ ಜನರ ವಿಶ್ವಾಸ ಉಳಿಸಿಕೊಂಡು ಪ್ರಮಾಣಿಕ ಸೇವೆ ನೀಡಬೇಕೆಂದರು.
ವೇದಿಕೆಯ ಮೇಲೆ ಮಾಜಿ ಶಾಸಕ ರಾಜಶೇಖರ ಶೀಲವಂತರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪೂರ, ಅರವಿಂದಗೌಡ ಪಾಟೀಲ, ಮಲ್ಲಿಕಾರ್ಜುನ ಲೋಣಿ, ದಶರಥ ಗಾಣಿಗೇರ, ವಿರುಪಾಕ್ಷಗೌಡ ಪಾಟೀಲ, ಯಚ್ಚರಗೌಡ ಪಾಟೀಲ, ಅಡಿವೆಪ್ಪ ಡಾಣಕಶಿರೂರ, ಗಂಗಯ್ಯ ಮುಚಖಂಡಿಮಠ, ಮಹಾದೇವಗೌಡ ಪಾಟೀಲ, ಬಸವರಾಜ ಗೊನ್ನಾಗರ, ಆರ್.ಜಿ. ಪಾಟೀಲ, ಎಸ್.ಎ. ಕಾಳಗಿ, ಲಿಂಗರಡ್ಡಿ ಕುರ್ತಕೋಟಿ, ಎಫ್.ಆರ್. ಪಾಟೀಲ(ಖ್ಯಾಡ), ಎಫ್.ಆರ್. ಪಾಟೀಲ(ಮಣ್ಣೇರಿ), ಎಸ್.ಎ. ನೀರಲಗಿ ಇದ್ದರು. ಬಸಮ್ಮಾ ನರಸಾಪೂರ ನಿರೂಪಿಸಿದರು. ಶೀಲಾ ಗೌಡರ ವಂದಿಸಿದರು. ಕಾರ್ಯಕ್ರಮದಲ್ಲಿ ಜಾಲಿಹಾಳ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ಗ್ರಾಹಕರು, ಹಿರಿಯರು, ಮುಖಂಡರು ಭಾಗವಹಿಸಿದ್ದರು.ಸಹಕಾರಿ ಸಂಘಗಳು ಗ್ರಾಮೀಣ ಭಾಗದ ಜೀವನಾಡಿ ಇದ್ದಂತೆ. ರೈತರು, ಜನಸಾಮಾನ್ಯರು ಹಾಗೂ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸಹಕಾರಿ ಸಂಘವನ್ನು ಸ್ಥಾಪಿಸಲಾಗಿದೆ. ಜನರ ಸೇವೆ ಮಾಡಲು ಇದೂ ಒಂದು ಅವಕಾಶ. ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಸಂಘವನ್ನು ಮುನ್ನಡೆಸಿ ಸಂಘವನ್ನು ರಾಜ್ಯಾದ್ಯಂತ ಪಸರಿಸುವ ಉದ್ದೇಶ ಹೊಂದಲಾಗಿದೆ.
- ಶೇಖರಗೌಡ ಪಾಟೀಲ ಅಧ್ಯಕ್ಷ ಚಿನ್ನು ಸೌಹಾರ್ದ ಪತ್ತಿನ ಸಹಕಾರಿ ಸಂಘ