ಕನ್ನಡಪ್ರಭ ವಾರ್ತೆ ದಾವಣಗೆರೆ
ನೂತನ ಗರ್ಭ ನಿರೋಧಕ ಬಳಕೆ ಯೋಜನೆ ಅನುಷ್ಟಾನದಲ್ಲಿ ಕರ್ನಾಟಕವು ದೇಶದಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ತಿಳಿಸಿದರು.ನಗರದ ಬಿಐಇಟಿ ಕಾಲೇಜಿನ ಎಸ್ಸೆಸ್ ಮಲ್ಲಿಕಾರ್ಜುನ ಸಾಂಸ್ಕೃತಿಕ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಸಂಘದಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ವಿಶ್ವ ಜನಸಂಖ್ಯಾ ದಿನ ಉದ್ಘಾಟಿಸಿ ಮಾತನಾಡಿ, ಇಡೀ ದೇಶದಲ್ಲೇ ಜನಸಂಖ್ಯೆ ನಿಯಂತ್ರಣದಲ್ಲಿ ಕರ್ನಾಟಕವು ಉತ್ತಮ ಸಾಧನೆ ಮಾಡಿದ ರಾಜ್ಯವಾಗಿದೆ ಎಂದರು.
ಜನಸಂಖ್ಯೆ ನಿಯಂತ್ರಿಸಲು ಈಗಿರುವ ಗರ್ಭ ನಿರೋಧಕ ಜೊತೆಗೆ ಕೇಂದ್ರ ಸರ್ಕಾರ ಹೊಸದಾಗಿ ಪರಿಚಯಿಸಿದ ನೂತನ ಗರ್ಭ ನಿರೋಧ ಬಳಕೆ ಯೋಜನೆಯನ್ನು ಬೆಳಗಾವಿ, ರಾಯಚೂರು, ಬಾಗಲಕೋಟೆ, ಚಿತ್ರದುರ್ಗ, ವಿಜಯಪುರ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅನುಷ್ಟಾನಗೊಳಿಸಲಾಗುತ್ತಿದೆ. ಪರಿಣಾಮಕಾರಿಯಾಗಿ ಜನಸಂಖ್ಯೆ ನಿಯಂತ್ರಣಕ್ಕಾಗಿ ಚುಚ್ಚುಮದ್ದು, ದೀರ್ಘಾವದಿ ಗರ್ಭ ನಿರೋಧಕ ವಿಧಾನಗಳನ್ನು ಸಹ ಅನುಷ್ಟಾನಗೊಳಿಸಲಾಗುತ್ತಿದೆ ಎಂದು ಹೇಳಿದರು.ಹೆಣ್ಣು ಮಕ್ಕಳು ಬೇಡವೆಂಬ ಮನೋಭಾವ ಕೇವಲ ಅನಕ್ಷರಸ್ಥರಷ್ಟೇ ಅಲ್ಲ, ಅಕ್ಷರಸ್ಥರಲ್ಲೂ ಕಂಡು ಬರುತ್ತಿದೆ. ಮೊದಲ ಮಗು ಗಂಡಾಗಬೇಕೆನ್ನುವವರೇ ಹೆಚ್ಚಾಗಿದ್ದಾರೆ. ಮದುವೆ ಮಾಡುವುದಕ್ಕಷ್ಟೇ ಹೆಣ್ಣು ಮಕ್ಕಳು ಹುಟ್ಟುತ್ತಾರೆಂಬ ಮನಸ್ಥಿತಿ ಜನರಲ್ಲಿ ಇಂದಿಗೂ ಬೇರೂರಿದೆ. ಇಂತಹ ಕಾರಣಕ್ಕೆ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ವರಿದಿಯಾಗುತ್ತಿರುತ್ತವೆ. ಹೆಣ್ಣು ಮಕ್ಕಳು ಸಹ ಗಂಡು ಮಕ್ಕಳಂತೆ ಯಾವುದೇ ಕ್ಷೇತ್ರದಲ್ಲೂ ಕಡಿಮೆ ಇಲ್ಲದಂತೆ ಸಾಧಿಸುತ್ತಿದ್ದದರೆ. ಅಂತಹ ಹೆಣ್ಣು ಮಕ್ಕಳಿಗೆ ಶಕ್ತಿ ತುಂಬುವ ಕೆಲಸ ಆಗಬೇಕು ಎಂದು ತಿಳಿಸಿದರು.
ಸರ್ಕಾರಗಳು ಹೆಣ್ಣು ಭ್ರೂಣ ಹತ್ಯೆ ತಡೆಗೆ ಎಷ್ಟೇ ಕಾನೂನು ತಂದರೂ ಹೆಣ್ಣು ಮಕ್ಕಳು ಶ್ರೇಷ್ಟರಲ್ಲವೆಂಬ ಕೀಳು ಮನೋಭಾವದಿಂದ ಜನರು ಹೊರ ಬರುವವರೆಗೂ ಹೆಣ್ಣು ಭ್ರೂಣ ಹತ್ಯೆ ತಡೆ ಪರಿಣಾಮಕಾರಿಯಾಗುವುದಿಲ್ಲ. ಜನರಲ್ಲೂ ಸಹ ಹೆಣ್ಣು-ಗಂಡೆಂಬ ಬೇಧ ಮಾಡದೇ, ಎಲ್ಲಾ ಮಕ್ಕಳೂ ಒಂದೇ ಎಂಬ ಭಾವನೆ ಮೈಗೂಡಿಸಿಕೊಳ್ಳಬೇಕು. ತಾಯಿ, ಮಗುವಿನ ಆರೋಗ್ಯಕ್ಕಾಗಿ ಸರ್ಕಾರ ಕೆಲಸ ಮಾಡುತ್ತಿದೆ. ತಾಯಿ, ಮಗುವಿನ ಆರೋಗ್ಯ ಚನ್ನಾಗಿದ್ದರೆ ಪರಿಪೂರ್ಣ ಬದುಕಿಗೆ ಭದ್ರ ಬುನಾದಿ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ 36 ಕೋಟಿ ಇದ್ದ ಜನಸಂಖ್ಯೆ 2024ರ ಹೊತ್ತಿಗೆ 140 ಕೋಟಿ ತಲುಪಿದೆ. ಜನಸಂಖ್ಯೆ ನಿಯಂತ್ರಣ ಇಂದಿನ ಅನಿವಾರ್ಯತೆಯೂ ಆಗಿದೆ. ವಿಶ್ವದಲ್ಲೇ ಅತೀ ಹೆಚ್ಚು ಜನಸಂಖ್ಯೆಯ ಚೀನಾವನ್ನು ಹಿಂದಿಕ್ಕಿ ಭಾರತ ಮುಂದಡಿ ಇಡುತ್ತಿದೆ. ದೇಶದಲ್ಲಿ 1.9ರಷ್ಟು ಜನನ ಪ್ರಮಾಣಿದ್ದರೆ, ಇದು ರಾಜ್ಯದಲ್ಲಿ 1.6ರಷ್ಟು ಇದೆ. ಜನನ, ಮರಣ ಪ್ರಮಾಣ ಗಣನೆಗೆತೆಗೆದುಕೊಂಡರೆ ಜನಸಂಖ್ಯೆ ಬೆಳವಣಿಗೆ ಹೆಚ್ಚಾಗುತ್ತಿಲ್ಲ. ಸಮೀಕ್ಷೆ ಪ್ರಕಾರ 2050ರ ನಂತರ ಜನಸಂಖ್ಯೆ ಬೆಳವಣಿಗೆ ದರ ಇಳಿಮುಖವಾಗುವ ಸಾಧ್ಯತೆ ಇದೆ ಎಂದು ಸಚಿವ ದಿನೇಶ ಗುಂಡುರಾವ್ ಮಾಹಿತಿ ನೀಡಿದರು.
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, 1987ರಲ್ಲಿ ವಿಶ್ವದ ಜನಸಂಖ್ಯೆ 500 ಕೋಟಿ ಆದಾಗ ವಿಶ್ವ ಜನಸಂಖ್ಯೆ ನಿಯಂತ್ರಣ ದಿನ ಆಚರಣೆಗೆ ಬಂದಿತು. ಪ್ರತಿ ವರ್ಷ ಜು.11ರಂದು ವಿಶ್ವ ಜನಸಂಖ್ಯೆ ದಿನ ಆಚರಿಸಲಾಗುತ್ತಿದೆ. ದಾವಣಗೆರೆ ಜಿಲ್ಲಾಸ್ಪತ್ರೆ ಸೇರಿದಂತೆ ಹಲವಾರು ಆಸ್ಪತ್ರೆಗಳಲ್ಲಿ ಸಮರ್ಪಕವಾದ ಆರೋಗ್ಯ ಸೇವೆ ಒದಗಿಸುವಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಗುಮಟ್ಟದ ಔಷಧ ಲಭ್ಯವಾಗಲು ಸರ್ಕಾರ ಜಾಗೃತಿ ದಳ ರಚಿಸಬೇಕು. ಆರೋಗ್ಯ ಸೇವೆಯ ಅಭಿವೃದ್ಧಿಪಡಿಸಬೇಕಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮಾತನಾಡಿ, ಪ್ರತಿಯೊಬ್ಬರೂ ಜನಸಂಖ್ಯೆ ನಿಯಂತ್ರಣದ ಬಗ್ಗೆ ಅರಿವು ಮೂಡಿಸಬೇಕು. ಆಶಾ ಕಾರ್ಯಕರ್ತೆಯರು ಸೇರಿ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಜನಸಂಖ್ಯೆ ನಿಯಂತ್ರಣದ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಸೂಚಿಸಿದರು.
ಶಾಸಕರಾದ ಕೆ.ಎಸ್. ಬಸವಂತಪ್ಪ, ಬಿ.ದೇವೇಂದ್ರಪ್ಪ, ಮಾಜಿ ಶಾಸಕ ಎಸ್.ರಾಮಪ್ಪ, ಪಾಲಿಕೆ ಸದಸ್ಯರಾದ ಕೆ.ಚಮನ್ ಸಾಬ್, ಎ.ನಾಗರಾಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ, ರಾಷ್ಟ್ರೀಯ ಆರೋಗ್ಯ ಅಭಿಯಾನದ ಯೋಜನಾ ನಿರ್ದೇಶಕ ಡಾ.ನವೀನ್ ಭಟ್, ಜಿಲ್ಲಾಧಿಕಾರಿ ಡಾ.ಜಿ.ಎಂ.ಗಂಗಾಧರಸ್ವಾಮಿ, ಜಿಪಂ ಸಿಇಓ ಸುರೇಶ ಬಿ.ಇಟ್ನಾಳ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ, ಡಾ.ರೇಣುಕಾರಾಧ್ಯ, ಡಾ.ನಂದಾ, ಡಾ.ಬಿ.ಆರ್.ಚಂದ್ರಿಕಾ, ಸೇರಿದಂತೆ ಅಧಿಕಾರಿ, ಸಿಬ್ಬಂದಿ, ಜನ ಪ್ರತಿನಿಧಿಗಳು ಇದ್ದರು. ಕುಟುಂಬ ಕಲ್ಯಾಣ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿದ ಜಿಲ್ಲೆಗಳು, ಅತ್ಯುತ್ತಮ ಕೆಲಸ ಮಾಡಿದ ಸಾರ್ವಜನಿಕ ಆಸ್ಪತ್ರೆಗಳಿಗೆ ರಾಜ್ಯ ಮಟ್ಟದ ಮಾನದಂಡ ಆಧರಿಸಿ ಪ್ರಶಸ್ತಿ ನೀಡಲಾಯಿತು. ಕುಟುಂಬ ಕಲ್ಯಾಣ ಪದ್ದತಿ ಅಳವಡಿಕೆ ಬಗ್ಗೆ ಸೆಲ್ಪ್ ಕೇರ್ ಕಿಟ್‍ಗಳ ವಿತರಣೆ, ನವ ದಂಪತಿಗಳಿಗೆ ನಯಿ ಪೆಹಲೀ ಕಿಟ್ ವಿತರಣೆ ಮಾಡಲಾಯಿತು.