ಮರದ ಕೊಂಬೆ ತೆಗೆಯುವ ನೆಪದಲ್ಲಿ ಮರವನ್ನೇ ಕಡಿದ ಗುತ್ತಿಗೆದಾರನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪರಿಸರ ಹೋರಾಟಗಾರರು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಮರದ ಕೊಂಬೆ ತೆಗೆಯುವ ನೆಪದಲ್ಲಿ ಮರವನ್ನೇ ಕಡಿದ ಗುತ್ತಿಗೆದಾರನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪರಿಸರ ಹೋರಾಟಗಾರರು ಪ್ರತಿಭಟನೆ ನಡೆಸಿದರು.ಪಟ್ಟಣದ ತಹಸೀಲ್ದಾರ್ ವಸತಿ ಗೃಹದ ಬಳಿ ನೂತನವಾಗಿ ಓವರ್ ಟ್ಯಾಂಕ್ ನಿರ್ಮಾಣ ಮಾಡುತ್ತಿರುವ ಪಕ್ಕದಲ್ಲಿ ಇದ್ದ ಹಳೇಯ ಮರವನ್ನು ಕಡಿದ ಹಿನ್ನೆಲೆಯಲ್ಲಿ ಪರಿಸರ ಪ್ರೇಮಿಗಳು ದಿಢೀರನೆ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.ಪ್ರತಿಭಟನಾ ಸ್ಥಳದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರಶೇಖರ್ ಬಾಬು ಮಾತನಾಡಿ, ತಹಸೀಲ್ದಾರ್ ವಸತಿ ಗೃಹದ ಬಳಿ ನಿರ್ಮಾಣ ಆಗಿರುವ ಓವರ್ ಟ್ಯಾಂಕ್ ನಿರ್ಮಾಣ ಕಾರ್ಯಕ್ಕೆ ತೊಂದರೆಯಾಗುತ್ತಿದ್ದು ಮರದ ಕೊಂಬೆಗಳನ್ನು ಕಡಿಯಲು ಕಳೆದ ವರ್ಷದ ಹಿಂದೆ ಟೆಂಡರ್ ಮಾಡಿದ್ದು, ಆದರೆ ಗುತ್ತಿಗೆದಾರ ಲಕ್ಷ್ಮಣ ಎಂಬುವರು ಏಕಾಏಕಿ ಕೊಂಬೆ ತೆಗೆಯುವ ನೆಪದಲ್ಲಿ ಪೂರ್ಣ ಮರವನ್ನೇ ಕಡಿದಿದ್ದಾರೆ. ಅರಣ್ಯಾಧಿಕಾರಿಯೇ ಮುಂದೆ ನಿಂತು ಮರ ಕಡಿಸಿದ್ದಾರೆ ಎಂದು ಆರೋಪಿಸಿದರು.ಪರಿಸರ ಪ್ರೇಮಿ ಚನ್ನಶೆಟ್ಟಿಹಳ್ಳಿ ಯತೀಶ್ ಮಾತನಾಡಿ, ಅರಣ್ಯಾಧಿಕಾರಿಗಳು ಮರ ಬೆಳೆಸುವ ಬದಲು ಕಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇಲ್ಲಿಯವರೆಗೂ ಯಾವುದೇ ಒಳ್ಳೆಯ ರೀತಿಯ ಕೆಲಸವನ್ನು ಮಾಡುತ್ತಿಲ್ಲ. ಮರ ಬೆಳೆಸಲು ಸರ್ಕಾರದಿಂದ ಬಂದಂತಹ ಅನುದಾನವನ್ನು ಗುಂಡಿ ತೆಗೆದು ಫೋಟೋ ದಾಖಲೆ ಮಾಡಿಕೊಂಡು ಹಣ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ಮುಖಂಡ ಪಂಚಾಕ್ಷರಿ ಮಾತನಾಡಿ, ಮರ ಕಡಿದ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ ಅವರನ್ನು ಬಂಧಿಸಿ, ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು. ಪರಿಸರ ಪ್ರೇಮಿ ಸಾಗರನಹಳ್ಳಿ ವಿಜಯಕುಮಾರ್ ಮಾತನಾಡಿ, ಒಣಗಿರುವ, ಟೊಳ್ಳಾಗಿರುವ, ಗೆದ್ದಲು ಮತ್ತು ಮಣ್ಣು ತಿಂದಿರುವ ಅಪಾಯದ ಅಂಚಿನಲ್ಲಿರುವ ಮರದ ಕೊಂಬೆಗಳನ್ನು ತೆರವುಗೊಳಿಸಲು ಪಟ್ಟಣ ಪಂಚಾಯಿತಿ ಪತ್ರ ನೀಡಿದ್ದು ಅದಕ್ಕೆ ತದ್ವಿರುದ್ಧವಾಗಿ ಉತ್ತಮ ಗುಣದಲ್ಲಿರುವ ಮರಗಳನ್ನು ನೆಲಕ್ಕೆ ಉರುಳಿಸುವ ಗುತ್ತಿಗೆದಾರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಮುಖಂಡ ಎಚ್ ಟಿ ಭೈರಪ್ಪ ಮಾತನಾಡಿ, ಅಭಿವೃದ್ಧಿ ನೆಪದಲ್ಲಿ ಇತಿಹಾಸವಿರುವ ಬೃಹದಾಕಾರದ ಮರದ ಬುಡಕ್ಕೆ ಕೊಡಲಿ ಪೆಟ್ಟು ನೀಡಿರುವುದು ಅತ್ಯಂತ ಬೇಸರದ ಸಂಗತಿ. ಈ ಬಗ್ಗೆ ಕೇಳಲು ಹೋದರೆ ಅರಣ್ಯ ವಲಯ ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ಇದನ್ನು ಅನಾವಶ್ಯಕ ಕಾಮಗಾರಿಗಳನ್ನು ಕೈಬಿಟ್ಟು ಮರಗಳ ರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು. ತಹಸೀಲ್ದಾರ್ ಆರತಿ ಬಿ ಘಟನೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಅರಣ್ಯಾಧಿಕಾರಿಗಳಿಗೆ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಎಚ್ ಟಿ ಬೈರಪ್ಪ, ಶಂಕರ್ ಕುಮಾರ್, ವಲಯ ಅರಣ್ಯಾಧಿಕಾರಿ ಸತೀಶ್ಚಂದ್ರ, ಸಿಆರ್ ಎಫ್ ನರಸಿಂಹಲು, ಸಿಪಿಐ ರಾಘವೇಂದ್ರ, ಪಿಎಸ್ಐ ರಾಮಚಂದ್ರಯ್ಯ, ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.