ಕನ್ನಡಪ್ರಭ ವಾರ್ತೆ ಬೆಳಗಾವಿ
ಪೂರ್ಣಗೊಂಡ ಕಾಮಗಾರಿಗಳ ಬಿಲ್ ಪಾವತಿಸುವುದು ಹಾಗೂ ಜಿಎಸ್‌ಟಿ ಶೇ.12ರಿಂದ ಶೇ.18ಕ್ಕೆ ಏರಿಕೆಯಾಗಿರುವುದರಿಂದ ಹೆಚ್ಚುವರಿಯಾದ ಶೇ.6ರಷ್ಟು ಜಿಎಸ್‌ಟಿಯನ್ನು ಸರ್ಕಾರವೇ ಭರಿಸುವುದು ಹಾಗೂ ಶೀಘ್ರವೇ ಅನುದಾನ ಬಿಡುಗಡೆ ಮಾಡುವುದು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುರುವಾರ ಬೆಳಗಾವಿ ಜಿಲ್ಲಾ ಕಾರ್ಯನಿರತ ಗುತ್ತಿಗೆದಾರರ ಸಂಘದ ನೇತೃತ್ವದಲ್ಲಿ ಇಲ್ಲಿನ ಸುವರ್ಣ ವಿಧಾನ ಸೌಧದ ಬಳಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಸರ್ಕಾರ ವಿವಿಧ ಇಲಾಖೆಗಳಲ್ಲಿ ಗುತ್ತಿಗೆದಾರರು ನಿರ್ವಹಿಸಿರುವ ಕಾಮಗಾರಿಗಳ ಬಿಲ್‌ಗಳು ಕಳೆದ ಹಲವಾರು ವರ್ಷಗಳಿಂದ ಪಾವತಿಯಾಗದೇ ಜಿಲ್ಲೆಯ ಗುತ್ತಿಗೆದಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೆಲವೊಂದು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ಶೀಘ್ರ ಹಣ ಬಿಡುಗಡೆ ಮಾಡಬೇಕು. ಪ್ಯಾಕೇಜ್ ಪದ್ದತಿಯಲ್ಲಿ ಟೆಂಡರ್ ಕರೆಯಲಾಗುತ್ತಿದ್ದು, ಅದನ್ನು ಹಿಂಪಡೆದು ಸಣ್ಣ ಮೊತ್ತದ ಕಾಮಗಾರಿಗಳನ್ನಾಗಿ ಮಾಡಿ ಮರುಟೆಂಡರ್ ಕರೆಯಬೇಕು. ಗುತ್ತಿಗೆದಾರರ ಕ್ಷೇಮನಿಧಿ ಮೊತ್ತದಿಂದ ಮರಣ ಹೊಂದಿದ ಗುತ್ತಿಗೆದಾರರ ಕುಟುಂಬಗಳಿಗೆ ಈಗಿರುವ ₹5 ಲಕ್ಷದಿಂದ ₹20 ಲಕ್ಷಕ್ಕೆ ಹೆಚ್ಚಿಸಬೇಕು. ಬೇರೆ ಬೇರೆ ಇಲಾಖೆಗಳಲ್ಲಿ ಟೆಂಡರ್ ಷರತ್ತು ವಿಭಿನ್ನವಾಗಿದ್ದು, ಅವುಗಳನ್ನು ಎಲ್ಲ ಇಲಾಖೆಗಳಲ್ಲಿ ಏಕರೂಪದ ನಿಯಮ ಜಾರಿಗೆ ತೆರಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೂ ಓರ್ವ ಗುತ್ತಿಗೆದಾರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹೀಗಾಗಿ, ಸಂಘದ ಬೇಡಿಕೆಗಳು ಈಡೇರುವವರೆಗೂ ಹೋರಾಟ ನಿರಂತರವಾಗಿ ನಡೆಯುತ್ತದೆ. ಸರ್ಕಾರ ಬಂದು ಎಂಟು ತಿಂಗಳಾಗಿದೆ. ಇನ್ನೂ ಕೆಲಸಗಳು ಆರಂಭಗೊಂಡಿಲ್ಲ. ಹೀಗಾಗಿ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಕೆಲಸಗಳು ಆರಂಭವಾಗಲಿ. ಇವರ ಹಣೆಬರಹ ಗೊತ್ತಾಗುತ್ತದೆ ಎಂದರು.ನಮ್ಮ ಸಂಘದ ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರಿಸುತ್ತೇವೆ. ಬೆಳಗಾವಿಯಲ್ಲಿ ಆಗಿದೆ. ಮುಂದೆ ಕಲಬುರ್ಗಿ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧೆಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಕಳೆದ ಬಾರಿ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಆರೋಪಗಳಿಗೆ ಸಂಬಂಧಿಸಿದಂತೆ ತನಿಖಾ ಆಯೋಗದ ಎದುರು ದಾಖಲೆಗಳನ್ನು ಸಲ್ಲಿಸಲಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ ಎಂದು ಕೆಂಪಣ್ಣ ಆಗ್ರಹಿಸಿದರು.
ಗುತ್ತಿಗೆದಾರರ ಸಂಘದ ಕಷ್ಟಗಳು ಮುಂದುವರಿದಿವೆ. ಸರ್ಕಾರ ಸ್ಪಂದಿಸುತ್ತಿದೆ. ಸ್ವಲ್ಪ ಸ್ವಲ್ಪ ಪೇಮೆಂಟ್ ಆಗುತ್ತಿದೆ. ಆದರೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿದರು.ಪ್ರತಿಭಟನಾ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ, ಶೀಘ್ರವೇ ಗುತ್ತಿಗೆದಾರರ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಬಿಜೆಪಿಯವರು ಮೂರು ರುಪಾಯಿ ಅನುದಾನದಲ್ಲಿ ಮೂರು ನೂರು ರುಪಾಯಿ ಕೆಲಸಗಳನ್ನು ಮಾಡಿಸಿದ್ದರಿಂದ ಗುತ್ತಿಗೆದಾರರಿಗೆ ಬಿಲ್ ನೀಡಲು ವಿಳಂಬವಾಗುತ್ತಿದ್ದು, ಇದು ನಿಮಗೂ ಗೊತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ಅನುದಾನ ಲಭ್ಯತೆ ಮೇಲೆ ಬಾಕಿ ಬಿಲ್ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಗುತ್ತಿಗೆದಾರರ ಬಾಕಿ ಬಿಲ್ ಬಗ್ಗೆ ಮಾಹಿತಿ ಕೇಳಿದ್ದಾಗ ₹4 ಸಾವಿರ ಕೋಟಿ ಇದೆ ಎಂದು ತಿಳಿಸಿದ್ದರು. ನಂತರ ಅದು ₹6 ಸಾವಿರ ಕೋಟಿ ಆಯಿತು. ಮತ್ತೆ ₹9 ಸಾವಿರ ಕೋಟಿ ಆಗಿದೆ. ಜನವರಿಯಲ್ಲಿ ಹೆಚ್ಚಿನ ಅನುದಾನ ಕೇಳಿದ್ದು, ಅನುದಾನ ಬಂದ ಮೇಲೆ ನಿಮ್ಮ ಸಮಸ್ಯೆ ಹಂತ ಹಂತವಾಗಿ ಬಗೆಹರಿಸಲಾಗುವುದು. 2017ರಲ್ಲಿ ಆಗಿದ್ದ ಕಾಮಗಾರಿಗಳ ಬಿಲ್‌ಗಳನ್ನು ನಾನು ಸಚಿವನಾದ ಬಳಿಕ ಬಿಡುಗಡೆಗೊಳಿದ್ದೇನೆ ಎಂದು ತಿಳಿಸಿದರು.-----------
ಕೋಟ್...ಕೆಲ ಗುತ್ತಿಗೆದಾರ ಚೇಲಾಗಳು ಕೆಲವು ಸಚಿವರ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಓರ್ವ ಮಂತ್ರಿ ಅಂತೂ ತುಂಡು ಗುತ್ತಿಗೆಗೆ ಪಟ್ಟು ಹಿಡಿದು ಫೈಲ್ ಹಿಡಿದು ಓಡಾಡುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳ ಭೇಟಿ ಮಾಡಿದಾಗ ಹೆಸರು ಹೇಳುತ್ತೇನೆ.
- ಕೆಂಪಣ್ಣ, ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರು.---
14ಬಿಇಎಲ್34