ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ಬೀದಿ ನಾಯಿಗಳಿಗೆ ಆಹಾರ ಹಾಕುವ ಬಿಬಿಎಂಪಿಯ ಹಿಂದಿ ಪ್ರೇರಿತ ‘ಕುಕುರ್ ತಿಹಾರ್’ ಕಾರ್ಯಕ್ರಮವು ಅನಿಮಲ್ ಬರ್ಥ್ ಕಂಟ್ರೋಲ್ (ಎಬಿಸಿ) ಹಾಗೂ ರೇಬಿಸ್ ರೋಗ ನಿರೋಧಕ ಚುಚ್ಚುಮದ್ದು ನೀಡುವ ಗುತ್ತಿಗೆಗಾರ ಸಂಸ್ಥೆಗಳ ಲಾಬಿ ಪರಿಣಾಮ ಎಂಬ ಆರೋಪ ಬಲವಾಗಿ ಕೇಳಿ ಬಂದಿದೆ.
ಕೊರೋನಾ ಸಂದರ್ಭದಲ್ಲಿ ನಗರದ ಎಲ್ಲಾ ಹೋಟೆಲ್, ರೆಸ್ಟೋರೆಂಟ್, ಬೀದಿ ಬದಿಯ ಫಾಸ್ಟ್ ಫುಡ್ ಸೆಂಟರ್ ಮುಚ್ಚಿದಾಗ ಬೀದಿ ನಾಯಿಗಳು ಅಕ್ಷರಶಃ ಹಸಿವಿನಿಂದ ಕಂಗೆಟ್ಟು ಹೋಗಿದ್ದವು. ಆಗ ಯಾರಿಗೂ ಬೀದಿ ನಾಯಿಗಳ ಕಾಳಜಿ, ಪ್ರೀತಿ ಹುಟ್ಟಲಿಲ್ಲ. ಆದರೆ, ಇದೀಗ ಬಿಬಿಎಂಪಿಯ ಅಧಿಕಾರಿಗಳಿಗೆ ಏಕಾಏಕಿ ಬೀದಿ ನಾಯಿಗಳ ಮೇಲೆ ಪ್ರೀತಿ ಹೆಚ್ಚಾಗಿದ್ದು, ಅವುಗಳ ಹಸಿವು ನೀಗಿಸುವ ನಿಟ್ಟಿನಲ್ಲಿ ಕುಕುರ್ ತಿಹಾರ್ ಎಂಬ ಪರಭಾಷಾ ಹೆಸರಿನಲ್ಲಿ ಕಾರ್ಯಕ್ರಮ ರೂಪಿಸಿಕೊಂಡು ಬೀದಿ ನಾಯಿಗಳಿಗೆ ಆಹಾರ ಕೊಡಿಸುವ ಅಲೋಚನೆ ಬಂದಿದೆ.
ಇದು ಮೇಲ್ನೋಟಕ್ಕೆ ಬೀದಿ ನಾಯಿಗಳ ಮೇಲಿನ ಪ್ರೀತಿ ಎಂಬಂತೆ ಕಂಡು ಬಂದರಾದರೂ, ಇದರ ಹಿಂದೆ ದೊಡ್ಡ ಗುತ್ತಿಗೆದಾರ ಸಂಸ್ಥೆಗಳಿವೆ ಎನ್ನಲಾಗಿದೆ. ಪ್ರತಿ ವರ್ಷ ಬಿಬಿಎಂಪಿಯು ಬೀದಿ ನಾಯಿಗಳ ಸಂತಾನ ಶಕ್ತಿ ಹರಣ, ಆ್ಯಂಟಿ ರೇಬಿಸ್ ಚುಚ್ಚು ಮದ್ದು ಸೇರಿದಂತೆ ನಾಯಿಗಳಲ್ಲಿ ಕಂಡು ಬರುವ ರೋಗಗಳಿಗೆ ಹಲವು ಮಾದರಿಯ ಲಸಿಕೆ ಮತ್ತು ಚುಚ್ಚು ಮದ್ದು ಹಾಕುವುದಕ್ಕೆ ಸುಮಾರು ₹10 ಕೋಟಿವರೆಗೆ ವೆಚ್ಚ ಮಾಡಲಾಗುತ್ತಿದೆ.
ಬಿಬಿಎಂಪಿಯ ಪಶುಪಾಲನೆ ವಿಭಾಗವೇ 2019 ಮತ್ತು 2023ರಲ್ಲಿ ನಡೆಸಲಾದ ಬೀದಿ ನಾಯಿಗಳ ಗಣತಿಯಲ್ಲಿ ಬೀದಿ ನಾಯಿಗಳ ಸಂಖ್ಯೆ ಕಡಿಮೆ ಆಗುತ್ತಿರುವ ಅಂಶ ಕಂಡು ಬಂದಿದೆ. ಇದೇ ಬೆಳವಣಿಗೆ ಮುಂದುವರೆದರೆ ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕಡಿಮೆ ಆಗಬಹುದು.
ಆಗ ಬಿಬಿಎಂಪಿಯು ತನ್ನ ಬಜೆಟ್‌ನಲ್ಲಿ ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಮತ್ತು ಆ್ಯಂಟಿ ರೇಬಿಸ್ ಚುಚ್ಚುಮದ್ದು ನೀಡುವುದಕ್ಕೆ ಮೀಸಲಿಡುವ ಹಣ ಕಡಿಮೆಯಾಗಬಹುದು. ಇದು ತಮ್ಮ ಭವಿಷ್ಯದ ಆದಾಯ ಕುತ್ತುಂಟಾಗಬಹುದು ಎಂಬುದನ್ನು ಅರಿತು ಬಿಬಿಎಂಪಿಯಿಂದಲೇ ಕುಕುರ್ ತಿಹಾರ್ ಎಂಬ ಕಾರ್ಯಕ್ರಮ ರೂಪಿಸಲು ಕುಮ್ಮಕ್ಕು ನೀಡುತ್ತಿವೆ ಎನ್ನಲಾಗಿದೆ.
ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ್ರಾ?
ಇತ್ತೀಚಿನ ದಿನಗಳಲ್ಲಿ ನಗರದಲ್ಲಿರುವ ಪ್ರಾಣಿ ದಯಾ ಸಂಘ ಸಂಸ್ಥೆಗಳು ಬಿಬಿಎಂಪಿಯು ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡುವುದಕ್ಕೆ ಗುತ್ತಿಗೆ ನೀಡಿದ ಸಂಸ್ಥೆಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ. ಚಿಕಿತ್ಸೆ ಹಂತದಲ್ಲಿ ಸಾಕಷ್ಟು ಬೀದಿ ನಾಯಿಗಳು ಮರಣ ಹೊಂದುತ್ತಿವೆ. ಚಿಕಿತ್ಸೆ ನೀಡಲಾದ ಬೀದಿ ನಾಯಿಗೆ ಸರಿಯಾಗಿ ಉಪಚಾರ ಮಾಡದೇ ತಂದು ರಸ್ತೆಗೆ ಬಿಡುತ್ತಿದ್ದಾರೆ. ಇದರಿಂದ ನೀರು, ಆಹಾರ ಇಲ್ಲದೇ ಸಾವನಪ್ಪುತ್ತಿವೆ ಎಂದು ಆರೋಪಿಸಿ ಪ್ರತಿಭನಟನೆ ನಡೆಸಿದ್ದರು.
ಇದನ್ನೇ ಬಂಡಾವಳವಾಗಿ ಮಾಡಿಕೊಂಡ ಬಿಬಿಎಂಪಿಯ ಅಧಿಕಾರಿಗಳು ಮತ್ತು ಗುತ್ತಿಗೆ ಸಂಸ್ಥೆಗಳು ಪ್ರಾಣಿ ಪ್ರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಕ್ಕೆ ಜತೆಗೆ, ಬೀದಿ ನಾಯಿಗಳ ಸಂಖ್ಯೆ ಹೆಚ್ಚಿಸುವುದಕ್ಕಾಗಿ ಕುಕುರ್ ತಿಹಾರ್ ಎಂಬ ಆಹಾರ ಒದಗಿಸುವ ಕಾರ್ಯಕ್ರಮ ನಡೆಸಲಾಗಿದೆ. ಈ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರ ರೂಪಿಸಲಾಗಿದೆ.
4 ವರ್ಷದಲ್ಲಿ 31 ಸಾವಿರ ಬೀದಿ ನಾಯಿಗಳು ಇಳಿಕೆ
ಬಿಬಿಎಂಪಿಯ ಪಶುಪಾಲನೆ ವಿಭಾಗದಿಂದ 2019ರಲ್ಲಿ ಸಮೀಕ್ಷೆ ನಡೆಸಿ ಬಿಡುಗಡೆ ಮಾಡಲಾದ ವರದಿಯಲ್ಲಿ ನಗರದಲ್ಲಿ 3.10 ಲಕ್ಷ ಬೀದಿ ನಾಯಿಗಳು ಇದ್ದವು. ನಾಲ್ಕು ವರ್ಷದ ಬಳಿಕ 2023ರಲ್ಲಿ ಸಮೀಕ್ಷೆ ನಡೆಸಿ ಬಿಡುಗಡೆ ಮಾಡಲಾದ ವರದಿಯಲ್ಲಿ ಬೀದಿ ನಾಯಿಗಳ ಸಂಖ್ಯೆ 2.79 ಲಕ್ಷಕ್ಕೆ ಕುಸಿತಗೊಂಡಿತ್ತು. ಕೇವಲ ನಾಲ್ಕೇ ವರ್ಷದಲ್ಲಿ 31 ಸಾವಿರ ಬೀದಿ ನಾಯಿಗಳ ಕಡಿಮೆ ಆಗಿದ್ದವು. ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶ ಕುಕುರ್ ತಿಹಾರ್ ಹಿಂದಿರುವ ಗುತ್ತಿಗೆದಾರರ ಷಡ್ಯಂತ್ರವಾಗಿದೆ ಎನ್ನುವ ಆರೋಪಗಳಿವೆ.ಹೋಟೆಲ್‌ಗಳಲ್ಲಿ ಉಳಿದ ಆಹಾರವನ್ನು ಬೀದಿ ನಾಯಿಗಳಿಗೆ ನೀಡುವ ನಿಟ್ಟಿನಲ್ಲಿ ಕುಕುರ್ ತಿಹಾರ್ ಕಾರ್ಯಕ್ರಮವನ್ನು ಬಿಬಿಎಂಪಿ ಆರಂಭಿಸಿದೆ. ಆದರೆ, ಬೀದಿ ನಾಯಿಗಳು ಹೋಟೆಲ್‌ನಲ್ಲಿ ಉಳಿದ ಅನ್ನ, ಇಡ್ಲಿ, ರೈಸ್ ಪದಾರ್ಥಗಳನ್ನು ತಿನ್ನುವುದಿಲ್ಲ. ಒಂದೆರಡು ದಿನ ಊಟ ಹಾಕಿ ಬಿಟ್ಟರೆ ಬೀದಿ ನಾಯಿಗಳು ಮತ್ತಷ್ಟು ಸಮಸ್ಯೆ ಒಳಗಾಗಲಿವೆ. ಬಿಬಿಎಂಪಿಯು ಮೊದಲು ಎಬಿಸಿ ಹಾಗೂ ಆ್ಯಂಟಿ ರೇಬಿಸಿ ನೀಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಬೇಕಿದೆ.
-ಚಿತ್ರಾ ವೆಂಕಟೇಶ್, ಕಾರ್ಯದರ್ಶಿ, ಕುಮಾರ ಕೃಷಾ ಈಸ್ಟ್ ನಿವಾಸಿ ಕ್ಷೇಮಾಭಿವೃದ್ಧಿ ಸಂಘ.2019, 2023ರ ಬೀದಿ ನಾಯಿಗಳ ಸಮೀಕ್ಷೆ ವಿವರ
ವಲಯ20192023
ಪೂರ್ವ44,30337,685
ಪಶ್ಚಿಮ28,48122,025
ದಕ್ಷಿಣ39,56623,241
ದಾಸರಹಳ್ಳಿ23,17021,221
ಆರ್.ಆರ್.ನಗರ52,96141,266
ಬೊಮ್ಮನಹಳ್ಳಿ3894039,183
ಯಲಹಂಕ3621736,343
ಮಹದೇವಪುರ46,33458,371
ಒಟ್ಟು3,09,9722,79,335